ಹುಬ್ಬಳ್ಳಿ: ಕೇಶ್ವಾಪುರ ನಾಗಶೆಟ್ಟಿಕೊಪ್ಪ ಸರಕಾರಿ ಶಾಲೆಯಲ್ಲಿ ವಿ ಕೇರ್ ಫೌಂಡೇಶನ್‌ನಿಂದ ವಿದ್ಯಾರ್ಥಿಗಳಿಗೆ ಜಲಜಾಗೃತಿ ಕಾರ್ಯಕ್ರಮ ನಡೆಯಿತು.
ಫೌಂಡೇಶನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಳ, ಜಲ ಹಾನಿ ತಪ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಅಂತರ್ಜಲ ಬಳಕೆ ಮಾಡುವ ದೇಶ ಭಾರತ. ಅಂತರ್ಜಲ ಬಳಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಇದೆಲ್ಲವನ್ನು ತಪ್ಪಿಸುವ ದೃಷ್ಟಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಶ್ರಮಿಸಬೇಕು ಎಂದರು.
ಉಪಾಧ್ಯಕ್ಷ ಬಸವರಾಜ ಅಮ್ಮಿನಬಾವಿ ಮಾತನಾಡಿ, ಫೌಂಡೇಶನ್‌ನಿಂದ ಕಳೆದ ಮೂರು ವರ್ಷಗಳಿಂದ ಜಲಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಈ ವರ್ಷದಿಂದ ಪ್ರತಿ ಶನಿವಾರ ಒಂದು ಶಾಲೆಯಲ್ಲಿ ಹಾಗೂ 15 ದಿನಕ್ಕೊಮ್ಮೆ ಒಂದು ಕಾಲೇಜಿನಲ್ಲಿ ನೀರಿನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿ ಎಲ್ಲರಲ್ಲೂ ಜಲ ಸಂರಕ್ಷಣೆ ಕುರಿತು ಸಂದೇಶ ನೀಡಲಾಗುತ್ತಿದೆ ಎಂದು ಹೇಳಿದರು.
ಮುಖೋಪಾಧ್ಯಾಯ ಜಿ.ಎಫ್. ತೊರಗಲ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಮಾಲಿನ್ಯದಿಂದ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕು. ಮುಂಬರುವ ವರ್ಷಗಳಲ್ಲಿ ನೀರಿನ ಭೀಕರತೆ ಉಂಟಾಗಲಿದ್ದು, ಹೆಚ್ಚಿನ ಹಣ ನೀಡಿ ನೀರು ಪಡೆಯುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಈಗಿನಿಂದಲೇ ನಾವೆಲ್ಲರೂ ಎಚ್ಚೆತ್ತುಕೊಂಡು ನೀರಿನ ರಕ್ಷಣೆ ಮಾಡುವುದು, ನೀರಿನ ಅಪವ್ಯಯ ತಡೆಯುವ ಕಾರ್ಯಕ್ಕೆ ಸನ್ನದ್ಧರಾಗಬೇಕು ಎಂದರು.
ಪ್ರಗತಿಪರ ರೈತ ಬಿ.ಬಿ. ಮೆಣಸಿನಕಾಯಿ, ಫೌಂಡೇಶನ್‌ನ ಪ್ರಕಾಶ ಉಗರಗೋಳ, ರವಿ ಶೆರೆವಾಡ, ಮೂರುಸಾವಿರಪ್ಪ ಮೆಣಸಿನಕಾಯಿ, ಜಗದೀಶ ಬಳ್ಳಾರಿ, ಜಗದೀಶ ಶಿರಗಣ್ಣವರ, ವಿಜಯಲಕ್ಷ್ಮಿಕುಲಕರ್ಣಿ ಇನ್ನಿತರರು ಇದ್ದರು.
ಡಿ.ಎಚ್.ಕೋಟೂರ ಸ್ವಾಗತಿಸಿದರು. ಇಕೋ ಕ್ಲಬ್ ಉಸ್ತುವಾರಿ ಸಂಗೀತಾ ನಿರೂಪಿಸಿದರು. ಜಯವ್ವ ರಾಮಣ್ಣವರ ವಂದಿಸಿದರು.