Advertisement

2 ವರ್ಷಗಳಲ್ಲಿ 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ

10:30 PM Oct 02, 2021 | Team Udayavani |

ನವದೆಹಲಿ:”2019ರಲ್ಲಿ ಜಲಜೀವನ ಮಿಷನ್‌ಗೆ ಚಾಲನೆ ದೊರೆತ ಬಳಿಕ ದೇಶದ 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

Advertisement

ಈಗ ಸುಮಾರು 1.25 ಲಕ್ಷ ಗ್ರಾಮಗಳ ಪ್ರತಿಯೊಂದು ಮನೆಯಲ್ಲೂ ನಲ್ಲಿ ನೀರು ಬರುತ್ತಿದೆ. ಈ ವಿಚಾರದಲ್ಲಿ ಕಳೆದ 70 ವರ್ಷಗಳಲ್ಲಿ ಆಗಿದ್ದ ಕೆಲಸಕ್ಕಿಂತ ಹೆಚ್ಚಿನ ಕೆಲಸ ಕಳೆದ ಎರಡು ವರ್ಷಗಳಲ್ಲೇ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಾಂಧೀ ಜಯಂತಿಯ ದಿನವಾದ ಶನಿವಾರ ಗ್ರಾಮ ಪಂಚಾಯತ್‌ಗಳು ಹಾಗೂ ಹಳ್ಳಿಗಳ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ ಜಲಜೀವನ್‌ ಮಿಷನ್‌ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಜಲಜೀವನ್‌ ಮಿಷನ್‌ ಎನ್ನುವುದು ಗ್ರಾಮಕೇಂದ್ರಿತ ಯೋಜನೆಯಾಗಿದ್ದು, ಜನರಿಗೆಲ್ಲ ನೀರು ಒದಗಿಸುವುದೊಂದೇ ಇದರ ಉದ್ದೇಶವಲ್ಲ. ಬದಲಿಗೆ, ಇದು ವಿಕೇಂದ್ರೀಕರಣದ ದೊಡ್ಡ ಚಳವಳಿಯೂ ಹೌದು ಎಂದಿದ್ದಾರೆ ಮೋದಿ.

ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ:
ಸಂವಾದದ ವೇಳೆ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ, “ದೀರ್ಘಾವಧಿಯಿಂದಲೂ ಸರ್ಕಾರ ನಡೆಸಿದವರಿಗೆ ನೀರಿನ ಅಭಾವವೇ ಇರಲಿಲ್ಲ. ಅವರಿಗೆ ನೀರಿಲ್ಲದೇ ಬದುವವರ ಕಷ್ಟವೂ ಗೊತ್ತಿರಲಿಲ್ಲ. ಅವರಿಗೆ ಬಡತನ ಎನ್ನುವುದು ತಮ್ಮ ಸಾಹಿತ್ಯಿಕ ಹಾಗೂ ಬೌದ್ಧಿಕ ತಿಳಿವಳಿಕೆಯನ್ನು ಪ್ರದರ್ಶನಕ್ಕಿಡುವ ಆಕರ್ಷಣೀಯ ವಸ್ತುವಾಗಿತ್ತು’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಪಿಂಕ್‌ಬಾಲ್‌ ಟೆಸ್ಟ್‌: ಕಾಂಗರೂಗಳ ಕಾಡಿದ ಜೂಲನ್‌, ಪೂಜಾ

Advertisement

ಯೋಜನೆಯಿಂದ ಮಹಿಳಾ ಸಬಲೀಕರಣ
ಜಲ ಜೀವನ ಮಿಷನ್‌ ಯೋಜನೆಯು ಮಹಿಳೆಯರ ಸಬಲೀಕರಣಕ್ಕೂ ಕಾರಣವಾಗಿದೆ. ಹಿಂದೆಲ್ಲ ಅವರು ನೀರಿಗಾಗಿ ಎಷ್ಟೋ ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸಾಗಬೇಕಿತ್ತು. ಈಗ ನಲ್ಲಿಯಲ್ಲೇ ನೀರು ಸಿಗುತ್ತಿರುವ ಕಾರಣ ಅವರ ಸಮಯ ಮತ್ತು ಪರಿಶ್ರಮ ಉಳಿತಾಯವಾಗಿದೆ. ಈ ಸಮಯವನ್ನು ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಆದಾಯ ತರುವಂತಹ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವಲ್ಲಿ ವಿನಿಯೋಗಿಸಬಹುದು ಎಂದೂ ಮೋದಿ ಹೇಳಿದ್ದಾರೆ.

ಜಲಜೀವನ ಆ್ಯಪ್‌, ಕೋಶ್‌ ಲೋಕಾರ್ಪಣೆ
ಜಲಜೀವನ ಯೋಜನೆ ಕುರಿತು ಮಾಹಿತಿ ನೀಡುವ, ಜಾಗೃತಿ ಒದಗಿಸುವ ಜಲಜೀವನ ಮಿಷನ್‌ ಮೊಬೈಲ್‌ ಆ್ಯಪ್‌ ಅನ್ನೂ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಜತೆಗೆ, ರಾಷ್ಟ್ರೀಯ ಜಲಜೀವನ ಕೋಶಕ್ಕೂ ಚಾಲನೆ ನೀಡಿದ್ದಾರೆ. ಇದರ ಮೂಲಕ ದೇಶ-ವಿದೇಶದ ವ್ಯಕ್ತಿಗಳು, ಸಂಸ್ಥೆಗಳು, ಕಾರ್ಪೊರೇಟ್‌ ಕಂಪನಿಗಳು ಭಾರತದ ಪ್ರತಿ ಮನೆ, ಅಂಗನವಾಡಿ ಕೇಂದ್ರ, ಶಾಲೆ, ಆಶ್ರಮಶಾಲೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಕುಡಿಯುವ ನೀರು ಒದಗಿಸಲು ತಮ್ಮಿಂದಾದ ದೇಣಿಗೆಯನ್ನು ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next