Advertisement

ಬೇಸಗೆಯಲ್ಲಿ ನೀರು ನಿಭಾವಣೆಯೇ ಮೊದಲ ಸವಾಲು

10:26 AM Mar 09, 2020 | Team Udayavani |

ಹೊಸ ಆಡಳಿತ ಬರುವಾಗಲೇ ಬೇಸಗೆ ಬಂದಿದೆ. ನಗರದಲ್ಲಿ ಬೇಸಗೆಗೆ ನೀರು ಪೂರೈಕೆ ಎಂದರೆ ಬಹು ದೊಡ್ಡ ಸವಾಲು. ಹಿಂದಿನ ಬೇಸಗೆ ಸಂದರ್ಭದಲ್ಲಿ ಅಧಿಕಾರಶಾಹಿ ಆಡಳಿತವಿತ್ತು. ಹೇಗೋ ನಿಭಾಯಿಸಿದರು. ಈಗ ಜನಪ್ರತಿನಿಧಿಗಳ ಆಡಳಿತವಿದೆ. ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸುವುದೇ ಹೊಸ ಆಡಳಿತಕ್ಕೆ ಮೊದಲ ಸವಾಲು. ಇದರಲ್ಲಿ ಗೆದ್ದರೆ ಮೊದಲ ಪರೀಕ್ಷೆಯಲ್ಲಿ ಗೆದ್ದಂತೆ.

Advertisement

ಮಹಾನಗರ: ನಗರದ ಪಾಲಿಗೆ ಕಡು ಬೇಸಿಗೆಯಲ್ಲಿ ಎದುರಾಗುವ ನೀರಿನ ಅಭಾವ ಪರಿಸ್ಥಿತಿ ನಿಭಾವಣೆ ಅತ್ಯಂತ ಸವಾಲಿನ ಕೆಲಸ. ನಗರಕ್ಕೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ಸದ್ಯಕ್ಕೆ ನೀರಿನ ಒಳಹರಿವು ಕಡಿಮೆಯಾಗುತ್ತಿರುವ ಸೂಚನೆ ಕಂಡು ಬಂದಿದೆ. ಹಾಗಾಗಿ ಈ ಬಾರಿ ಮತ್ತೆ ನಗರದಲ್ಲಿ ಕುಡಿಯುವ ನೀರು ಕೊರತೆ ಉದ್ಭವಿಸುವುದು ಬಹುತೇಕ ಖಚಿತ. ಒಂದು ವೇಳೆ ಎಪ್ರಿಲ್‌, ಮೇ ತಿಂಗಳಿನಲ್ಲಿ ಪೂರ್ವಮುಂಗಾರು ಬಾರದಿದ್ದರೆ ನೀರಿನ ರೇಶನಿಂಗ್‌ ಅನಿವಾರ್ಯ.

ಕಳೆದ ವರ್ಷ ನೀರಿನ ಸಮಸ್ಯೆ ಉದ್ಭವಿಸಿ ದಾಗ ಜನಪ್ರತಿನಿಧಿಗಳ ಆಡಳಿತವಿರಲಿಲ್ಲ; ಅಧಿಕಾರಿಗಳೇ ಸಮಸ್ಯೆಯನ್ನು ಎದುರಿಸ ಬೇಕಾಗಿತ್ತು. ಆಗ ಅಧಿಕಾರಿಗಳ ಕಾರಣ ದಿಂದಲೇ ನೀರು ರೇಶನಿಂಗ್‌ ಆಗಿದೆ ಎಂದು ಕೆಲವರು ಆರೋಪಿಸಿದ್ದರು. ಆದರೆ, ಈ ಬಾರಿ ಜನಪ್ರತಿನಿಧಿಗಳ ಆಡಳಿತವಿದ್ದು, ನೀರು ರೇಶನಿಂಗ್‌ ಪದ್ಧತಿ ತಾರದೇ ನಿಭಾಯಿಸಬೇಕಿದೆ.

ಸದ್ಯದ ಮಾಹಿತಿ ಪ್ರಕಾರ ತುಂಬೆ ಡ್ಯಾಂನಲ್ಲಿ ಒಳಹರಿವು ಕೊಂಚ ಇದೆ. 6 ಮೀಟರ್‌ ನೀರು ನಿಲ್ಲಿಸಲಾಗುವುದರಿಂದ ಸ್ವಲ್ಪ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಒಳಹರಿವು ಕಡಿಮೆ ಆದರೆ ಗೇಟ್‌ ಸಂಪೂರ್ಣ ಬಂದ್‌ ಮಾಡಲಾಗುತ್ತದೆ. ಈ 6 ಮೀಟರ್‌ ನೀರು ಸಾಮಾನ್ಯವಾಗಿ 50 ದಿನಗಳಿಗೆ ಸಾಕಾಗಬಹುದು. ಬಳಿಕ ಎಎಂಆರ್‌ ಡ್ಯಾಂ ನೀರನ್ನು ಆಶ್ರಯಿಸಬೇಕು. ಇದರ ಮಧ್ಯೆ ಮಳೆಯಾದರೆ ಸಮಸ್ಯೆ ಇಲ್ಲ; ಇಲ್ಲವಾದರೆ ನೀರು ರೇಶನಿಂಗ್‌ ಅನಿವಾರ್ಯ.

ಕಳೆದ ವರ್ಷ (2019) ಫೆ.14ರವರೆಗೆ ಒಳಹರಿವು ಇತ್ತು. ಆ ಬಳಿಕ ಒಳಹರಿವಿನ ಪ್ರಮಾಣ ಕಡಿಮೆಯಾಗಿತ್ತು. ಫೆ.23ರ ಬಳಿಕ 6 ಮೀಟರ್‌ ಸಂಗ್ರಹವಾಗಿದ್ದ ನೀರಿನ ಪ್ರಮಾಣ ಕಡಿಮೆಯಾಗಲು ಆರಂಭ ವಾಗಿತ್ತು. ಇಷ್ಟಿದ್ದರೂ ಮೇ-ಜೂನ್‌ಗೆ ಮಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಎ.18ರ ಸಂಜೆ 6 ಗಂಟೆಯಿಂದಲೇ ನೀರು ರೇಷನಿಂಗ್‌ ಆರಂಭವಾಗಿತ್ತು. 2-3 ದಿನ ಕ್ಕೊಮ್ಮೆ ನೀರು ಬರುವ ಪರಿಸ್ಥಿತಿ. ಸುಮಾರು 2 ತಿಂಗಳು ಈ ಬವಣೆ ತಪ್ಪಿರಲಿಲ್ಲ.

Advertisement

ಎಂಆರ್‌ಪಿಎಲ್‌, ಎಂಸಿಎಫ್‌ ಸೇರಿ ದಂತೆ ನಗರದ ಭಾರೀ ಕೈಗಾರಿಕೆಗಳ ಬಳಕೆಗಾಗಿ 11 ಎಂ.ಎಲ್‌.ಡಿ ಯಷ್ಟು ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರು ನಗರಕ್ಕೆ ಕಡಿಮೆಯಾಗುವ ಸಂದರ್ಭದಲ್ಲಿ ಕೈಗಾರಿಕೆಗಳ ನೀರಿನ ಪಾಲನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಿದೆ.

ಟ್ಯಾಂಕರ್‌ ಸನ್ನದ್ಧವಾಗಿರಲಿ
ತುಂಬೆಯಿಂದ ನೀರು ಕಡಿಮೆಯಾಗಲು ಶುರುವಾಗುತ್ತಿದ್ದಂತೆ ನಗರದಲ್ಲಿ ಟ್ಯಾಂಕರ್‌ಗಳ ಸದ್ದು ಕೇಳಿಬರುತ್ತದೆ. ಬಹುತೇಕರು ಟ್ಯಾಂಕರ್‌ ಮೂಲಕ ನೀರು ವಿತರಣೆಗೆ ಕೈ ಜೋಡಿಸಿದರೆ ಇನ್ನು ಕೆಲವರಿಗೆ ಇದೇ ದೊಡ್ಡ ವ್ಯವಹಾರ. ಹೀಗಾಗಿ ನೀರಿನ ದರ ಗಗನಕ್ಕೇರುತ್ತದೆ. ಜತೆಗೆ, ರೇಷನಿಂಗ್‌ ಸಮಯದಲ್ಲಿ ಹಲವೆಡೆ 4-5 ದಿನಗಳಾ ದರೂ ನೀರು ಬರುವುದಿಲ್ಲ. ಅಲ್ಲಿಗೆ ಟ್ಯಾಂಕರ್‌ ನೀರು ಅನಿವಾರ್ಯ. ಈ ಕಾರಣ ದಿಂದ ಟ್ಯಾಂಕರ್‌ಗಳ ನಿಯೋಜನೆಗೆ ಆದ್ಯತೆ ನೀಡಬೇಕು. ಹೆಚ್ಚುವರಿ ಟ್ಯಾಂಕರ್‌ಗಳನ್ನು ಪಡೆಯುವುದು; ನೀರಿನ ಸಮರ್ಪಕ ವಿತ ರಣೆ, ಲೋಪದೋಷ ಆಗ ದಂತೆ, ಜನರನ್ನು ಸುಲಿಗೆ ಮಾಡದಂತೆ ಎಚ್ಚರಿಕೆ ವಹಿಸಲು ಸೂಕ್ತ ನಿಗಾ ಸಮಿತಿ ರಚಿಸಬೇಕಿದೆ.

ನೀರಿನ ಬಿಲ್‌ ಎಡವಟ್ಟು ಸರಿಯಾಗಲಿ
ಇದೆಲ್ಲದರ ಮಧ್ಯೆ, ಪಾಲಿಕೆಯಲ್ಲಿ ನೀರಿನ ಬಿಲ್‌ನಲ್ಲಿ ಬಹಳ ಸಮಸ್ಯೆಗಳನ್ನು ನಾಗರಿಕರು ಎದುರಿಸುತ್ತಿದ್ದಾರೆ. ನೂರು-ಇನ್ನೂರು ರೂ. ಬರುವ ನೀರಿನ ಬಿಲ್‌ ಕೆಲವರಿಗೆ 20,000 ರೂ. ಬಂದಿದ್ದೂ ಇದೆ. ನೀರಿನ ಬಿಲ್‌ನ ಎಡವಟ್ಟು ನಾಗರಿಕರನ್ನು ಹೈರಾಣಾಗಿಸಿದೆ. ಪಾಲಿಕೆಯ ಹೊಸ ಆಡಳಿತ ಇದನ್ನು ಸಮರ್ಪಕಗೊಳಿಸಬೇಕು. ನೀರಿನ ಬಿಲ್‌ ಕೋಟ್ಯಂತರ ರೂ. ಬಾಕಿ ಇರಿಸಿದವರ ವಿರುದ್ಧವೂ “ರಾಜಕೀಯ ಲೆಕ್ಕಾಚಾರ’ ಎಲ್ಲಾ ಬದಿಗಿಟ್ಟು ವಸೂಲಿ ಮಾಡುವ ಧೈರ್ಯವನ್ನು ಪ್ರದರ್ಶಿಸಬೇಕು.

ಇನ್ನಾದರೂ ನೆನಪಾಗಲಿ ಕೆರೆ, ಬಾವಿ, ಬೋರ್‌ವೆಲ್‌!
ನೇತ್ರಾವತಿಯ ಒಡಲು ಬರಿದಾಗುತ್ತಿರುವಂತೆ ಪರ್ಯಾಯ ಮೂಲಗಳಾಗಿರುವ ಕೆರೆ, ಬಾವಿ, ಬೋರ್‌ವೆಲ್‌ಗ‌ಳತ್ತ ಪಾಲಿಕೆ ಅಧಿಕಾರಿಗಳು ದೌಡಾಯಿಸುವುದು ಸಾಮಾನ್ಯ. ಆದರೆ, ತುಂಬೆಯಲ್ಲಿ ಸಾಕಷ್ಟು ನೀರು ಇರುವವರೆಗೆ ಅಧಿಕಾರಿಗಳು ಪರ್ಯಾಯ ನೀರಿನ ಮೂಲಗಳತ್ತ ಯೋಚಿಸುವುದೇ ಇಲ್ಲ ಎಂಬುದು ಬಹುದೊಡ್ಡ ಅಪವಾದ. ಮನೆ ಪಕ್ಕದಲ್ಲಿರುವ ಬಾವಿ, ಕೆರೆಗಳ ಬಗ್ಗೆಯೂ ಅಧಿಕಾರಿಗಳದ್ದು ಮೌನ. ಹೀಗಾಗಿ ನೂತನ ಜನಪ್ರತಿನಿಧಿಗಳ ಆಡಳಿತ ಪರ್ಯಾಯ ನೀರಿನ ಮೂಲಗಳ ಸಂರಕ್ಷಣೆ ಹಾಗೂ ಸನ್ನದ್ಧ ಸ್ಥಿತಿಯಲ್ಲಿಡಲು ಹೆಚ್ಚು ಒತ್ತು ನೀಡಬೇಕಿದೆ.

ಈ ಬಾರಿಯಾದರೂ ಸೋರಿಕೆ ತಡೆಯಿರಿ!
ನಗರಕ್ಕೆ ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ಎಷ್ಟು ಪ್ರಯತ್ನಿಸಿದರೂ, ಪ್ರತೀ ದಿನ 20 ಎಂ.ಎಲ್‌.ಡಿ. (ಮಿಲಿಯನ್‌ ಲೀ.) ನೀರು ಸೋರಿಕೆ ಯಾಗು ತ್ತಿರು ವುದನ್ನು ಇನ್ನೂ ತಡೆ ಗಟ್ಟಲಾಗಿಲ್ಲ. ತುಂಬೆಯಿಂದ ಪ್ರತೀದಿನ 160 ಎಂ.ಎಲ್‌.ಡಿ. ನೀರು ಪಂಪಿಂಗ್‌ ಮಾಡಲಾಗುತ್ತಿದ್ದರೆ, ಇದರಲ್ಲಿ 140 ಎಂ.ಎಲ್‌.ಡಿ. ಯಷ್ಟು ಮಾತ್ರ ನೀರು ಬಳಕೆಯಾಗುತ್ತಿದೆ. ಉಳಿ ದದ್ದು ಸೋರಿಕೆಯಾಗುತ್ತಿದೆ. ತುಂಬೆ ಪಂಪ್‌ಹೌಸ್‌ನಿಂದ ನೀರು ಪಂಪ್‌ ಮಾಡಿ ನಗರದ ಪಂಪ್‌ಹೌಸ್‌ಗಳಿಗೆ ಪೂರೈಸುವಲ್ಲಿ ಈ ಸೋರಿಕೆ ಆಗುತ್ತಿದೆ. ಇದರ ವಿರುದ್ಧ ಕಾರ್ಯಾಚರಣೆ ಆಗಿದ್ದರೂ ಅದು ಯಾವುದೇ ಫಲ ನೀಡಿಲ್ಲ. ಈಗ ಲಾದರೂ ಅದು ಸರಿಯಾಗಬೇಕು.

160 ಎಂಎಲ್‌ಡಿ ಪ್ರತೀ ದಿನ ಪಂಪ್‌ಮಾಡುವ ನೀರಿನ ಪ್ರಮಾಣ
79,304 ವಸತಿ
5000 ವಸತಿಯೇತರ
1328 ನಿರ್ಮಾಣ ಹಂತದ ಕಟ್ಟಡ
805 ಬಹುಮಹಡಿ ಕಟ್ಟಡ
87,000 ನೀರಿನ ಒಟ್ಟು ಸಂಪರ್ಕ
845 ಕೈಗಾರಿಕೆಗಳು
6000 ಶಾಲೆ, ದೇವಸ್ಥಾನ ಸಹಿತ ಸಾರ್ವಜನಿಕ ನೀರಿನ ಸಂಪರ್ಕಗಳು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next