ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೃಷಿಕ ಹೊನ್ನಪ್ಪ ಕೊಂದಾಳ ಅವರ ಪಾಲಿಗೆ ರವಿವಾರ ಶುಭ ದಿನವಾಗಿತ್ತು. ಬೇಸಗೆಯ ತಾಪ ಹೆಚ್ಚಿ ಕುಡಿಯಲು ನೀರಿಲ್ಲ ಎಂದು ಪರಿತಪಿಸುತ್ತಿದ್ದ ಸಮಯದಲ್ಲೇ ಅವರ ಬಾವಿಯಲ್ಲಿ ದಿಢೀರ್ ನೀರು ಉಕ್ಕಿ ಬಂದಿತ್ತು.
ಎ. 1 ಮೂರ್ಖರ ದಿನವಾದ ಕಾರಣ ಹೆಚ್ಚಿನವರು ಈ ಸುದ್ದಿ ಸುಳ್ಳೆಂದು ಭಾವಿಸಿದ್ದರು. ಹೊನ್ನಪ್ಪ ಗೌಡರು ಕುಟುಂಬ ಸದಸ್ಯರ ಜತೆ ರವಿವಾರ ತರವಾಡು ಮನೆಗೆ ತೆರಳಿದ್ದರು. ರಾತ್ರಿ ಮನೆ ತಲುಪಿದ ವೇಳೆಗೆ ಈ ಅಚ್ಚರಿ ಕಾದಿತ್ತು. ಮನೆಯ ಎದುರು ಭಾಗದಲ್ಲಿ ಇದ್ದ ತಮ್ಮ ಬಾವಿಯೊಳಗಿನಿಂದ ಏನೋ ಸದ್ದು ಕೇಳಿ ಬರುತ್ತಿದ್ದುದನ್ನು ಕೇಳಿ ಬಾವಿ ಬಳಿ ತೆರಳಿ ಇಣುಕಿ ನೋಡಿದರೆ ಅಲ್ಲಿ ಕೌತುಕದ ಸಂಗತಿ ಕಂಡುಬಂತು. ಬತ್ತಿ ಹೋಗಿ ಒಂದು ಕೊಡ ನೀರು ಸಿಗುವುದೂ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದ ಬಾವಿಯಲ್ಲಿ ಸಾಕಷ್ಟು ನೀರು ಶೇಖರಣೆಗೊಂಡಿತ್ತು. 12 ಅಡಿ ಆಳವಿರುವ ಬಾವಿಯಲ್ಲಿ 3 ಅಡಿಯಷ್ಟು ನೀರು ಸಂಗ್ರಹಗೊಂಡಿತ್ತು. ಬಾವಿಯ ಸುತ್ತಲೂ ಮೂರು ಕಡೆಗಳಿಂದ ಒರತೆ ಬರುತ್ತಿದೆ.
ನೀರಿಲ್ಲದೆ ಕಂಗಲಾಗಿದ್ದ ಈ ಪರಿಸರದ ಜನರಿಗೆ ಇದು ಹೊಸ ಭರವಸೆಯನ್ನು ಚಿಮ್ಮಿಸಿದೆ. ಬೆಟ್ಟ-ಗುಡ್ಡಗಳಿಂದ ಆವೃತ ವಾದ ಈ ಭಾಗದಲ್ಲಿ ಜಲಮೂಲಗಳಾದ ನದಿ, ತೊರೆ, ಹಳ್ಳ ಹೀಗೆ ನೀರಿನ ಕಣಿಯೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಪ್ರಾಕೃತಿಕ ವೈಪರೀತ್ಯದಿಂದಾಗಿ ನೀರಿನ ಕೊರತೆ ಎದುರಿಸುವ ಸ್ಥಿತಿ ಬಂದಿದೆ.
ಕೃಷಿಕರು ಹೆಚ್ಚಿರುವ ಈ ಭಾಗದಲ್ಲಿ ಪ್ರತಿ ವರ್ಷ ನೀರಿನ ಕೊರತೆ ಕಂಡುಬರುತ್ತಿದ್ದರೂ ಕುಡಿಯಲು ತಾಪತ್ರಯ ಬರುವುದು ಕಡಿಮೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ.
ಹಲವು ಮನೆಗಳಿಗೆ ಆಸರೆ
ರವಿವಾರ ರಾತ್ರಿ ಆರಂಭವಾದ ನೀರ ಸೆಲೆ ಸೋಮವಾರವೂ ಮುಂದುವರಿದಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನ ಮಟ್ಟ ಏರುತ್ತಲೆ ಇದೆ. ಜತೆಗೆ ಸಮತೋಲನ ಕಾಯ್ದುಕೊಳ್ಳುತ್ತಿದೆ. ಈ ಬಾವಿಯನ್ನು 1989ರಲ್ಲಿ ಕೊರೆಯಲಾಗಿದೆ. ಇದುವರೆಗೆ ಪ್ರತಿ ಬೇಸಗೆಯಲ್ಲಿ ಬಾವಿಯಲ್ಲಿ ನೀರು ಇಂಗುತ್ತಿತ್ತು. ನೆರೆಹೊರೆಯ ಏಳೆಂಟು ಮನೆಯವರು ನಿತ್ಯ ಇದೇ ಬಾವಿಯಿಂದ ನೀರು ಪಡೆದು ಬಳಸುತ್ತಿದ್ದರು. ದಿಢೀರನೆ ಬಾವಿಯಲ್ಲಿ ನೀರು ಚಿಮ್ಮುವ ಸುದ್ದಿ ತಿಳಿದು ಸುತ್ತಲ ಗ್ರಾಮಗಳ ಜನರು ಸೋಮವಾರ ಬೆಳಗ್ಗೆಯಿಂದ ಧಾವಿಸಿ ಬಂದು ನೋಡುತ್ತಿದ್ದಾರೆ. ಪರಿಸರದಲ್ಲಿ ಕೊಳವೆ ಬಾವಿಗಳು ಅನೇಕ ಇದ್ದರೂ, ಬಾವಿಗೆ ಹತ್ತಿರವಾಗಿಲ್ಲ. ಘಟನೆ ಬಳಿಕ ಪರಿಸರದ ಇತರೆ ನಿವಾಸಿಗಳ ಬಾವಿಗಳಲ್ಲಿ ನೀರಿನ ಮಟ್ಟದಲ್ಲಿ ವ್ಯತ್ಯಯವಾಗಿಲ್ಲ. ಘಟನೆ ನಡೆದಿರುವ ಪ್ರದೇಶವು ಪಶ್ಚಿಮ ಘಟ್ಟ ತಪ್ಪಲಿನ ಕೊಡಗು ಮತ್ತು ದ.ಕ. ಗಡಿಭಾಗದ ಗ್ರಾಮಕ್ಕೆ ಸೇರಿದೆ. ಪುಷ್ಪಗಿರಿ ತಪ್ಪಲಿನ ಕಾಡುಗಳಿರುವ ಭೂಪ್ರದೇಶ ಇದಾಗಿದೆ.
ಬಾಲಕೃಷ್ಣ ಭೀಮಗುಳಿ