Advertisement

ಉಳ್ಳಾಲ ಸೇತುವೆ: ಅಪಾಯಕಾರಿಯಾಗಿದೆ ನೀರಿನ ಪೈಪ್‌!

01:18 AM Aug 03, 2019 | mahesh |

ಮಹಾನಗರ: ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಸಾವಿನ ಪ್ರಕರಣದ ಅನಂತರ ಇದೀಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇತ್ರಾವತಿ ನದಿಯಲ್ಲಿ ಉಳ್ಳಾಲ ಸೇತುವೆ ಮೇಲೆ ಹಾದು ಹೋಗುವ ಜನರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.

Advertisement

ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ಹಳೆಯ ಸೇತುವೆಯ ಎಡಭಾಗದ ಫುಟ್ಪಾತ್‌ನಲ್ಲಿ ಉಳ್ಳಾಲಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್‌ ಅಳವಡಿಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಪೈಪ್‌ಲೈನ್‌ ಮೇಲೆ ಕಾಲಿಟ್ಟು, ಕೆಲವರು ನದಿಗೆ ಇಣುಕಿ ನೋಡುವ ಪ್ರಯತ್ನ ನಡೆಸುತ್ತಿದ್ದು, ಹಲವು ಬಾರಿ ಅಪಾಯಕ್ಕೂ ಕಾರಣವಾಗಿದೆ ಎಂಬುದು ಅವರ ವಾದ. ಒಂದೊಮ್ಮೆ, ಸಿದ್ಧಾರ್ಥ್ ಅವರು ಕೂಡ ಇದೇ ಸೇತುವೆಯಿಂದ ನದಿಗೆ ಹಾರಿದ್ದರೆ, ಈ ಪೈಪ್‌ಲೈನ್‌ ಮೇಲೆಯೇ ಕಾಲಿಟ್ಟು ಸುಮಾರು ನಾಲ್ಕು ಅಡಿ ಎತ್ತರಕ್ಕೆ ಇರುವ ತಡೆಯನ್ನು ಬಹಳ ಸುಲಭವಾಗಿ ದಾಟಿ ನದಿಗೆ ಧುಮುಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಅನುಮತಿ ಪಡೆದಿಲ್ಲ
ಮನಾರ್ಹ ಅಂದರೆ, ಹಳೆ ಸೇತುವೆಯಲ್ಲಿ ನೀರಿನ ಪೈಪ್‌ಲೈನ್‌ ಅನ್ನು ರಸ್ತೆಯ ಪಕ್ಕದಲ್ಲಿ ಅಳವಡಿಸಲು ಮಹಾನಗರ ಪಾಲಿಕೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಸೇತುವೆಯ ಕೆಳ ಭಾಗದಲ್ಲಿ 24 ಕಂಬಗಳ ಬೀಮ್‌ನ ಮಧ್ಯೆಯ ಭಾಗದಿಂದ ಪೈಪ್‌ಲೈನ್‌ ಅಳವಡಿಸಲು ಅವಕಾಶ ನೀಡಲಾಗಿತ್ತು. ಸೇತುವೆಯ ರಸ್ತೆಯ ಪಕ್ಕದಲ್ಲಿ ಪೈಪ್‌ಲೈನ್‌ ಅಳವಡಿಸಿದರೆ ವಿವಿಧ ರೀತಿಯ ಸಮಸ್ಯೆಯಾಗುತ್ತದೆ ಎಂದು ಪಾಲಿಕೆಯ ಗಮನಕ್ಕೂ ತರಲಾಗಿತ್ತು. ಆದರೆ ಸೇತುವೆಯ ಫುಟ್ಪಾತ್‌ನಲ್ಲೇ ನೀರಿನ ಪೈಪ್‌ಲೈನ್‌ ಅಳವಡಿಸಲಾಗಿದೆ.

ನೀರಿನ ಪೈಪ್‌ಲೈನ್‌ ಅನ್ನು ಸೇತುವೆಯ ಕೆಳಭಾಗದಲ್ಲಿ ಹಾಕಿದರೆ ಅದರಲ್ಲಿ ಸೋರಿಕೆ ಉಂಟಾದರೆ ಪೈಪ್‌ಲೈನ್‌ ದುರಸ್ತಿ ಮಾಡುವುದು ಅಸಾಧ್ಯ ಎಂಬುದು ಪಾಲಿಕೆಯ ವಾದ.

ಸೇತುವೆಯ ಬದಿಯಲ್ಲಿ 4 ಅಡಿ ಎತ್ತರದಲ್ಲಿ ಸುರಕ್ಷಾ ಬೇಲಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇದನ್ನು ಒಬ್ಬ ವ್ಯಕ್ತಿ ಸುಲಭವಾಗಿ ಮೀರಿ ಹಾರಲು ಕಷ್ಟ ಸಾಧ್ಯ. ಇಂತಹ ಸಂದರ್ಭ ನೀರಿನ ಪೈಪ್‌ಲೈನ್‌ ಕೆಲವರಿಗೆ ಉಪಯೋಗಕ್ಕೆ ಬಂದಿದೆ. ಜತೆಗೆ ದೂರದೂರಿನಿಂದ ಬರುವವರು ಕೂಡ ಸೇತುವೆ ಪಕ್ಕ ವಾಹನ ನಿಲ್ಲಿಸಿ ಪೈಪ್‌ಲೈನ್‌ನ ಮೇಲೆ ಕಾಲಿಟ್ಟು ನದಿಗೆ ಇಣುಕಿ ನೋಡುವ ದುಸ್ಸಾಹಸ ಮಾಡುತ್ತಿದ್ದು, ಇದು ಅಪಾಯಕಾರಿ.

Advertisement

ಉರಿಯದ ಬಿದಿದೀಪ
ಈ ಮಧ್ಯೆ, ಪಂಪ್‌ವೆಲ್-ತೊಕ್ಕೊಟ್ಟು ಹೆದ್ದಾರಿ ಕೆಲವು ವರ್ಷಗಳ ಹಿಂದೆ ಚತುಷ್ಪಥ ಆಗಿದ್ದರೂ ಈ ರಸ್ತೆಯಲ್ಲಿ ಮೂಲ ಸಮಸ್ಯೆಗಳು ಇತ್ಯರ್ಥವಾಗಲೇ ಇಲ್ಲ. ನೇತ್ರಾವತಿ ಸೇತುವೆ ಸಹಿತ ರಸ್ತೆಯ ಉದ್ದಕ್ಕೂ ಕೆಲವೆಡೆ ಬೀದಿದೀಪ ಇದ್ದರೂ ಅದು ಉರಿಯುತ್ತಿಲ್ಲ.

ಜತೆಗೆ ಈ ರಸ್ತೆ ವ್ಯಾಪ್ತಿಯಲ್ಲಿ ಎಲ್ಲಿಯೂ ಸಿಸಿ ಕೆಮರಾ ವ್ಯವಸ್ಥೆಯೂ ಇಲ್ಲ. ಹೀಗಾಗಿ ಸಿದ್ದಾರ್ಥ್ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾಡಳಿತ-ಪೊಲೀಸ್‌ ಇಲಾಖೆಗೂ ಸವಾಲಾಗಿತ್ತು.

ಸೇತುವೆಗೆ ಸಿಸಿ ಕೆಮರಾ

ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿ ಪರಿಣಮಿಸುತ್ತಿದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ಕಾರಣವಾಗುತ್ತಿದೆ. ಹೀಗಾಗಿ ಸಿಸಿ ಟಿವಿಗಳನ್ನು ಅಳವಡಿಸುವುದರಿಂದ ಸೇತುವೆಯ ಮೇಲೆ ನಡೆದ ದುರ್ಘ‌ಟನೆಗಳನ್ನು ತತ್‌ಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗುವುದು.
– ವೇದವ್ಯಾಸ ಕಾಮತ್‌, ಶಾಸಕರು
Advertisement

Udayavani is now on Telegram. Click here to join our channel and stay updated with the latest news.

Next