ಹಾನಗಲ್ಲ: ಕೆರೆ-ಕಟ್ಟೆಗಳು ಸರಕಾರದ ಆಸ್ತಿ. ಮುಂದಿನ ಪೀಳಿಗೆವರೆಗೂ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆ ಒತ್ತುವರಿ ತೆರವುಗೊಳಿಸಿ, ದುರಸ್ತಿಪಡಿಸುವುದು ನಿಮ್ಮ ಜವಾಬ್ದಾರಿ ಅಲ್ಲವೇ? ಈ ಕೆಲಸ ನೀವಲ್ಲದೇ ಮತ್ತ್ಯಾರು ಮಾಡಬೇಕು? ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ನಿಮ್ಮ ಬೇಜವಾಬ್ದಾರಿ ಮುಂದುವರೆದರೆ ವಿಧಾನಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವೆ. ಅವಕಾಶ ನೀಡದೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜಲಮೂಲ ಸಂರಕ್ಷಿಸಬೇಕೆಂದು ಶಾಸಕ ಶ್ರೀನಿವಾಸ ಮಾನೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಮ್ಮ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ನಡೆದ ಸಣ್ಣ ನೀರಾವರಿ, ಬೃಹತ್ ಮತ್ತು ಏತ ನೀರಾವರಿ, ಜಿಪಂ, ತಾಪಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೆರೆ ಸರ್ವೇ ಕೈಗೊಳ್ಳಲು ಆಗಮಿಸುವ ಸರ್ವೇಯರ್ ಕೆರೆ ಒತ್ತುವರಿ ಮಾಡಿದವರ ಮನೆಯಲ್ಲಿ ಕುಳಿತು ಹೋಗುತ್ತಾನೆ ಎಂದರೆ ಏನಿದರ ಅರ್ಥ? ಎಂದು ಖಾರವಾಗಿ ಪ್ರಶ್ನಿಸಿದ ಶಾಸಕರು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಎಚ್ಚೆತ್ತುಕೊಳ್ಳದಿದ್ದರೆ ಅಧಿವೇಶನದಲ್ಲಿ ಮಾತನಾಡುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
ಕೆರೆ-ಕಟ್ಟೆ ಒತ್ತುವರಿ ತೆರವಿಗೆ ಹಿಂದೆ-ಮುಂದೆ ನೋಡಬೇಡಿ. ಇದರಲ್ಲಿ ಸ್ವಾರ್ಥ, ಸ್ವಹಿತ, ರಾಜಕಾರಣಕ್ಕೆ ಅವಕಾಶ ನೀಡುವುದು ಬೇಡ ಎಂದರು.
ಕಾಲುವೆಗಳು ಅನೇಕ ಕಡೆಗಳಲ್ಲಿ ಒತ್ತುವರಿಯಾಗಿದ್ದು, ಮಳೆ ಸುರಿದಾಗಲೆಲ್ಲ ಹೊಲ-ಗದ್ದೆಗಳು ಜಲಾವೃತಗೊಂಡು ಬೆಳೆ ನಾಶ ಉಂಟಾಗುತ್ತಿದೆ. ಒತ್ತುವರಿ ತೆರವುಗೊಳಿಸಿ, ಗಿಡ-ಗಂಟಿ ತೆರವುಗೊಳಿಸಿ ಶುಚಿಗೊಳಿಸಿದರೆ ನೀರು ಹರಿದು ಕೆರೆ-ಕಟ್ಟೆ, ನದಿಗಳಿಗೆ ಸೇರಲಿದೆ. ಈ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸಿ, ಸಮಯ ಹರಣ ಮಾಡುತ್ತೀರಿ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ. ಮಾರ್ಚ್, ಏಪ್ರಿಲ್ ಹೊತ್ತಿಗೆ ಇದೆಲ್ಲವೂ ಮುಗಿದಿರಬೇಕು. ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಈ ಕೆಲಸ ಮಾಡಬೇಕು. ಮೊದಲೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರದ ಬಿಡಿಗಾಸಿನ ಪರಿಹಾರ ಅವರ ಕೈಹಿಡಿಯದು. ಎಷ್ಟು ಸಾಧ್ಯವೋ ಅಷ್ಟು ರೈತರ ನೆರವಿಗೆ ಧಾವಿಸಬೇಕು. ಇದು ನಿಮ್ಮ ಕರ್ತವ್ಯ ಎಂದು ಖಡಕ್ ಸೂಚನೆ ನೀಡಿದರು.
ಬಸವಣ್ಣನ ಕಾಯಕ ಸಂಸ್ಕೃತಿ ನಾವೆಲ್ಲ ಬೆಳೆಸಿಕೊಳ್ಳೋಣ. ನಮಗೆಲ್ಲರಿಗೂ ಜವಾಬ್ದಾರಿಗಳಿವೆ. ಜನರ ಭರವಸೆ, ವಿಶ್ವಾಸ ಹುಸಿಗೊಳಿಸುವುದು ಬೇಡ. ಅಧಿಕಾರಿಗಳು ಗಂಭೀರವಾಗಿ ವರ್ತಿಸಬೇಕು. ನೀವೆಲ್ಲ ಕೈಜೋಡಿಸಿ, ಸಹಕಾರ ನೀಡಿದರೆ ಹೊಸ ಬದಲಾವಣೆಗೆ ನಾವೆಲ್ಲ ಸೇರಿ ಮುನ್ನುಡಿ ಬರೆಯೋಣ ಎಂದರು.
ಒತ್ತುವರಿ ತೆರವಿಗೆ ರೈತರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಿ. ನಾನೂ ಕೂಡ ಆ ಕೆಲಸ ಮಾಡುತ್ತಿದ್ದೇನೆ. ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಖಂಡಿತವಾಗಿಯೂ ನಿಮಗೆ ಸಹಕಾರ ಸಿಗಲಿದೆ. ನಾನೂ ಕೂಡ ನಿಮ್ಮ ಜತೆಗೆ ನಿಲ್ಲುವೆ. ಕನಿಷ್ಟ ವಾರದಲ್ಲಿ ಒಂದು ದಿನ ಒತ್ತುವರಿ ತೆರವಿಗೆ ಸಮಯ ಮೀಸಲಿಡಿ. ಹಂತ ಹಂತವಾಗಿ ವಿಶೇಷ ಆದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸಿದರೆ ಒತ್ತುವರಿ ತೆರವುಗೊಂಡು ನೀರು ಸರಾಗವಾಗಿ ಹರಿದು ಜಲಮೂಲ ಸೇರಲಿದೆ. ಇದರಿಂದ ರೈತರಲ್ಲೂ ನೆಮ್ಮದಿ ಮೂಡಲಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇಒ ಬಿ.ಸುನೀಲಕುಮಾರ, ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಬೃಹತ್ ಮತ್ತು ಏತ ನೀರಾವರಿ ಇಲಾಖೆ ಎಇಇ ಶಿವಮೂರ್ತಿ, ಜಿಪಂ ಎಇಇ ದೇವಿಂದ್ರಪ್ಪ, ಸಣ್ಣ ನೀರಾವರಿ ಇಲಾಖೆ ಎಇಇ ಸಿ.ಬಿ.ಹಾವನೂರ ಸೇರಿದಂತೆ ಜಿಪಂ ಮತ್ತು ಉದ್ಯೋಗ ಖಾತ್ರಿ ಯೋಜನೆ ಅಭಿಯಂತರರು ಉಪಸ್ಥಿತರಿದ್ದರು