Advertisement

ನೀರಿನ ಬಿಲ್‌ ಬಾಕಿ: ಪಟ್ಟಿ ನೀಡಲು 10 ದಿನಗಳ ಗಡುವು

09:18 PM Sep 22, 2019 | Team Udayavani |

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್‌ ಪಾವತಿಯಾಗಲು ಬಾಕಿಯಿದ್ದು, ಬಿಲ್‌ ಪಾವತಿ ಮಾಡದವರ ಸಂಪೂರ್ಣ ಪಟ್ಟಿಯನ್ನು ನೀಡಲು ಬಿಲ್‌ ವಸೂಲಿ ಗಾರರು ವಿಫ‌ಲರಾಗಿದ್ದು, ಈ ಹಿನ್ನೆಲೆ ಯಲ್ಲಿ ಮೂರನೇ ಬಾರಿ ಅವಕಾಶ ನೀಡಿ 10 ದಿನಗಳ ಅಂತಿಮ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Advertisement

ಗ್ರಾ.ಪಂ. ಅಧ್ಯಕ್ಷೆ ರತಿ ಎಸ್‌. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್‌ ಪಾವತಿಯಾಗಲು ಬಾಕಿಯಿದ್ದು, ಬಿಲ್‌ ವಸೂಲಿಗಾರರ ಪಟ್ಟಿಗೂ ಕಡತ ಪುಸ್ತಕದಲ್ಲಿ ದಾಖಲಾಗಿರುವ ಮೊತ್ತಕ್ಕೂ ತಾಳೆಯಾಗುತ್ತಿಲ್ಲ ಎಂದು ಗ್ರಾ.ಪಂ. ಪಿಡಿಒ ಜಯಪ್ರಕಾಶ್‌ ಕಳೆದ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು. ಈ ಸಂದರ್ಭ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು ಬಳಕೆದಾರರ ಎಷ್ಟು ಹಣ ಪಾವತಿಗೆ ಬಾಕಿ ಇದೆ ಎಂಬುದನ್ನು ವಿವರವಾಗಿ ಪಟ್ಟಿ ಮಾಡಿ ಏಳು ದಿನಗಳೊಳಗೆ ಒಪ್ಪಿಸುವಂತೆ ಗ್ರಾ.ಪಂ. ಸದಸ್ಯರು ಬಿಲ್‌ ವಸೂಲಿಗಾರರಿಗೆ ಸೂಚಿಸಿದ್ದರು. ಆದರೆ ಏಳು ದಿನವಾದರೂ ಬಿಲ್‌ ವಸೂಲಿಗಾರರು ಲೆಕ್ಕ ಒಪ್ಪಿಸಿರಲಿಲ್ಲ. ಮತ್ತೆ ಒಂದು ವಾರ ಕಾಲಾವಕಾಶ ನೀಡಿ ಸೆ. 21ರಂದು ನೀರಿನ ಬಿಲ್‌ನ ಲೆಕ್ಕಪತ್ರ ಪರಿಶೀಲನ ಸಭೆ ನಡೆಯಲಿದ್ದು, ಲೆಕ್ಕ ಒಪ್ಪಿಸುವಂತೆ ತಿಳಿಸಿದ್ದರು. ಸೆ. 21ರಂದು ನಡೆದ ಸಭೆಯಲ್ಲಿ ಬಿಲ್‌ ವಸೂಲಿಗಾರರು ಅಪೂರ್ಣ ಪಟ್ಟಿಯನ್ನು ನೀಡಿದ್ದಾರೆ.

ತಾಳೆಯಾಗುತ್ತಿಲ್ಲ ಲೆಕ್ಕ
ಗ್ರಾ.ಪಂ. ಪಿಡಿಒ ಜಯಪ್ರಕಾಶ್‌ ಮಾತನಾಡಿ, ಬಿಲ್‌ ವಸೂಲಿಗಾರರಿಗೆ ಅಗತ್ಯ ಬಿದ್ದರೆ ರಜೆ ಬೇಕಾದರೂ ಪಡೆಯಿರಿ. ಉಳಿದ ಗ್ರಾ.ಪಂ. ಸಿಬಂದಿಯನ್ನು ಬೇಕಾದರೂ ನೆರವಿಗೆ ಬಳಸಿಕೊಳ್ಳಿ. ಒಟ್ಟಿನಲ್ಲಿ ಸಭೆಯ ದಿನ ಬಿಲ್‌ ಬಾಕಿ ಉಳಿಸಿದವರ ಪಟ್ಟಿ ಸಿದ್ಧವಾಗಿರಬೇಕು ಎಂದಿದ್ದೆ. ಇಷ್ಟೊಂದು ಅವಕಾಶ ನೀಡಿದರೂ ಬಿಲ್‌ ವಸೂಲಿಗಾರರು ಪರಿಪೂರ್ಣವಾದ ಪಟ್ಟಿಯನ್ನು ನೀಡಿಲ್ಲ. 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 560 ನೀರಿನ ಸಂಪರ್ಕಗಳನ್ನು ಕಲ್ಪಿಸಲಾಗಿದೆ. 2018-19ನೇ ವರದಿ ವರ್ಷದ ಮಾರ್ಚ್‌ ಅಂತ್ಯಕ್ಕೆ ಒಟ್ಟು 2,33,460 ರೂ. ನೀರಿನ ಬಿಲ್‌ ಬರಲು ಬಾಕಿ ಇದೆ. ಇದೀಗ ಬಿಲ್‌ ವಸೂಲಿಗಾರರು 514 ಸಂಪರ್ಕಗಳಲ್ಲಿ 1,52,130 ರೂ. ವಸೂಲಿಗೆ ಬಾಕಿ ಇದೆ. 46 ಸಂಪರ್ಕಗಳ ಪಟ್ಟಿ ಒದಗಿಸಲು ಬಾಕಿ ಇದ್ದು, ಇನ್ನೂ 81,330 ರೂ. ವ್ಯತ್ಯಾಸದ ಹಣ ತಾಳೆಯಾಗುತ್ತದೋ ನೋಡಬೇಕು ಎಂದು ತಿಳಿಸಿದರು.

ಎರಡು ಬಾರಿ ಅವಕಾಶ ನೀಡಿದರೂ ಬಿಲ್‌ ಬಾಕಿ ಇರಿಸಿದವರ ಪಟ್ಟಿಯನ್ನು ಪರಿಪೂರ್ಣವಾಗಿ ನೀಡದಿದ್ದ ಬಿಲ್‌ ವಸೂಲಿಗಾರರನ್ನು ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದು ಕೊಂಡ ಅಧ್ಯಕ್ಷರು, ಇದು 2018-19ನೇ ಮಾರ್ಚ್‌ ಅಂತ್ಯದ ವರೆಗಿನ ಬಾಕಿ. 2019-20ನೇ ಸಾಲಿ ನಲ್ಲಿಯೂ ಈವರೆಗೆ ಹಲವು ಬಿಲ್‌ಗ‌ಳು ಬರಲು ಬಾಕಿಯಿವೆ. ನಿಮಗೆ ಇಷ್ಟು ಅವಕಾಶ ನೀಡಿದರೂ ಮತ್ತೂ ನೀವು ಕೆಲಸದಲ್ಲಿ ಉದಾಸೀನ ತೋರುತ್ತಿದ್ದೀರಿ. ಇಷ್ಟೊಂದು ಮೊತ್ತದ ಬಿಲ್‌ ಗ್ರಾ.ಪಂ.ಗೆ ಪಾವತಿಯಾಗದೇ ಇರಲು ಕಾರಣವೇನು? ನೀವು ಏನು ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ವಿನಾಯಿತಿ ಪ್ರಶ್ನೆಯೇ ಇಲ್ಲ
ಗ್ರಾ.ಪಂ.ಗೆ ಬರಲು ಬಾಕಿಯಿರುವ ಕುಡಿಯುವ ನೀರಿನ ಬಿಲ್‌ನ ಮೊತ್ತವನ್ನು ಬಿಡುವ ಪ್ರಶ್ನೆಯೇ ಇಲ್ಲ. ಇವರಿಂದ ಬಿಲ್‌ ವಸೂಲಿ ಸಾಧ್ಯವಾಗುತ್ತಿಲ್ಲ. ಬಿಲ್‌ ವಸೂಲಾಗುವ ತನಕ ತಾತ್ಕಾಲಿಕ ಸಿಬಂದಿಯನ್ನು ನೇಮಿಸಿ ಬಿಲ್‌ ವಸೂಲಾತಿಗೆ ಬಿಡುವ ಬಗ್ಗೆ ತೀರ್ಮಾ ನಿಸಿದರಲ್ಲದೆ, ಕುಡಿಯುವ ನೀರಿನ ಬಿಲ್‌ನ ಹಣ ದುರುಪಯೋಗ ವಾಗಿದ್ದರೆ ಬಿಲ್‌ ವಸೂಲಿಗಾರರನ್ನು ಕರ್ತವ್ಯ ದಿಂದ ವಜಾ ಮಾಡಲು ಬರೆಯಲಾಗುವುದೆಂದು ಎಚ್ಚರಿಕೆ ನೀಡಿದರು.

Advertisement

ಗ್ರಾ.ಪಂ. ಉಪಾಧ್ಯಕ್ಷ ಅಸ್ಕರ್‌ ಅಲಿ, ಸದಸ್ಯರಾದ ಎನ್‌. ಶೇಖಬ್ಬ, ಅನಿ ಮಿನೇಜಸ್‌, ಬಾಬು, ಮೈಕಲ್‌ ವೇಗಸ್‌, ಪ್ರಶಾಂತ್‌ ಉಪಸ್ಥಿತರಿದ್ದರು.

ಮೂರನೇ ಅವಕಾಶ
ಮೂರನೇ ಅವಕಾಶ ನೀಡುತ್ತೇವೆ. ಮುಂದಿನ 10 ದಿನದೊಳಗೆ 2018-19ನೇ ಸಾಲಿನ ಮಾರ್ಚ್‌ ಅಂತ್ಯದವರೆಗೆ ಹಾಗೂ 2019-20ನೇ ಸಾಲಿನಲ್ಲಿ ಸೆಪ್ಟಂಬರ್‌ ಕೊನೆಯ ವರೆಗೆ ಗ್ರಾ.ಪಂ.ನ ಎಲ್ಲ ಕುಡಿಯುವ ನೀರಿನ ಸಂಪರ್ಕದಾರರಿಂದ ಗ್ರಾ.ಪಂ.ಗೆ ಎಷ್ಟು ಬಿಲ್‌ ಬರಲು ಬಾಕಿಯಿದೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ತಪ್ಪಿದ್ದಲ್ಲಿ ಈ ಬಗ್ಗೆ ತನಿಖೆಗೆ ದ.ಕ.ಜಿ.ಪಂ. ಸಿಇಒ ಅವರಿಗೆ ಬರೆಯಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next