Advertisement

ನೀರು,ಆಹಾರವಿಲ್ಲದೆ 10 ಪ್ರಾಣಿಗಳ ಸಾವು!

03:45 AM Feb 04, 2017 | |

ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಲ್ಲಿ ಹುಲಿ, ಆನೆ, ಕರಡಿ ಸೇರಿ 10 ಪ್ರಾಣಿಗಳು ಮೃತಪಟ್ಟಿವೆ. ಅರಣ್ಯ ವ್ಯಾಪ್ತಿಯಲ್ಲಿ 370 ಕೆರೆಗಳಿದ್ದು, 320 ಕೆರೆಗಳಲ್ಲಿ ನೀರು ಬತ್ತಿದೆ. ಆಹಾರದ ಕೊರತೆ, ಪ್ರಾಣಿಗಳ ನಡುವಣ ಕಾದಾಟ ಕೂಡ ಈ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.

Advertisement

ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯದಲ್ಲಿ 2 ಆನೆ, ಹಿರಿಕೆರೆ, ಕೊಳಕಮಲ್ಲೀಕಟ್ಟೆ, ಮೂಲೆಹೊಳೆ, ಓಂಕಾರ, ಯಡಿಯಾಲದ ಒಡೆಯನಪುರಗಳಲ್ಲಿ ತಲಾ ಒಂದು ಆನೆ ಮೃತಪಟ್ಟಿವೆ. ಮೊಳೆಯೂರು ವಲಯದಲ್ಲಿ ಒಂದು ಹುಲಿ ಸಾವನ್ನಪ್ಪಿದೆ.  ಅರಣ್ಯ ಕಚೇರಿ ಬಳಿಯೇ ನಾಲ್ಕು ದಿನಗಳ ಅಂತರದಲ್ಲಿ ಕೆರೆಯಲ್ಲಿನ ಕಲುಷಿತ ನೀರು ಸೇವಿಸಿ 2 ಕರಡಿಗಳು ಮೃತಪಟ್ಟಿವೆ. ಕೊಳಕಮಲ್ಲೀಕಟ್ಟೆ ಬಳಿ ಆನೆ ಕಾದಾಟದಿಂದ ಸಾವನ್ನಪ್ಪಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆ.

ಕುಡಿಯಲು ನೀರಿಲ್ಲ:
ಪ್ರಸಕ್ತ ವರ್ಷ ಇಡೀ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಭೀಕರ ಬರ ಆವರಿಸಿದೆ. ಹುಲಿ ಯೋಜನೆಯ 13 ವಲಯಗಳಲ್ಲಿ 10 ವಲಯಗಳಲ್ಲಿ ಪ್ರಾಣಿಗಳ ಕುಡಿಯುವ ನೀರಿಗೆ ಹಾಹಾಕಾರ. ಓಂಕಾರ, ಗುಂಡ್ರೆ ಹಾಗೂ ಕುಂದಕೆರೆ ವಲಯಗಳಲ್ಲಿ ಸೌರ ವಿದ್ಯುತ್‌ ಚಾಲಿತ ಮೋಟಾರು ಅಳವಡಿಸಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉಳಿದ ವಲಯಗಳಲ್ಲಿನ ಪ್ರಾಣಿಗಳು ನೀರನ್ನರಸಿ ಕಬಿನಿ ಹಿನ್ನೀರು, ಕೇರಳದ ಮುತ್ತಂಗ ಮತ್ತು ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶಕ್ಕೆ ವಲಸೆ ಹೋಗುತ್ತಿವೆ.

“370 ಕೆರೆಗಳಲ್ಲಿ 50 ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದ್ದು, ಇದು ಪ್ರಾಣಿ-ಪಕ್ಷಿಗಳಿಗೆ ಸಾಕಾಗುತ್ತಿಲ್ಲ. ಅರಣ್ಯ ವ್ಯಾಪ್ತಿಯಲ್ಲಿ ಭೀಕರ ಬರ ಕಾಡುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಎಲ್ಲಾ ವರ್ಗದ ಶೇ.10ರಷ್ಟು ಪ್ರಾಣಿ, ಪಕ್ಷಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತವೆ. ಕಳೆದ 10 ವರ್ಷಗಳ ಇತಿಹಾಸ ನೋಡಿದರೆ ಈ ಅವಧಿಯಲ್ಲಿ ಆಹಾರ, ನೀರು, ಬಿಸಿಲಿನ ಬೇಗೆ ಮತ್ತಿತರೆ ಕಾರಣಗಳಿಂದ ಪ್ರಾಣಿಗಳು ಸಹಜವಾಗಿ ಸಾವನ್ನಪ್ಪುತ್ತಿವೆ’ ಎನ್ನುತ್ತಾರೆ ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್‌.

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ?:
ನಾಗರಹೊಳೆ ಅಭಯಾರಣ್ಯದಲ್ಲೂ ನೀರಿಗೆ ಹಾಹಾಕಾರವಿದೆ. ಆದರೆ ಅಲ್ಲಿನ ಅಧಿಕಾರಿಗಳು ಜಾಗೃತರಾಗಿ ಸೋಲಾರ್‌ ಪಂಪ್‌ಗ್ಳನ್ನು ಬಳಸಿ ಬೇರೆ ನೀರಿನ ಆಕರಗಳಿಂದ ಅರಣ್ಯ ಪ್ರದೇಶದ ಪ್ರಮುಖ ಕೆರೆಗಳಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಆ ಕಾರ್ಯ ಬಂಡೀಪುರ ಅಧಿಕಾರಿಗಳಿಂದ ನಡೆಯುತ್ತಿಲ್ಲ. 320 ಕೆರೆಯಲ್ಲಿ ನೀರಿಲ್ಲ ಎನ್ನುವ ಅಧಿಕಾರಿಗಳು, ಅದಕ್ಕೆ ಪರ್ಯಾಯವನ್ನು ಏಕೆ ಹುಡುಕುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.  ಪ್ರಾಣಿಗಳು ಸಾವಿಗೀಡಾದ ಎಷ್ಟೋ ದಿನಗಳ ನಂತರ ಪ್ರಕರಣ ಹೊರಬರುತ್ತಿದ್ದು, ಸಿಬ್ಬಂದಿ ಹಾಗೂ ಅಧಿಕಾರಿಗಳು ಅರಣ್ಯ ಪ್ರದೇಶದೊಳಗೆ ಗಸ್ತು ನಡೆಸುತ್ತಿರುವ ಬಗ್ಗೆಯೇ ಅನುಮಾನವಿದೆ.

Advertisement

ಹೆಜ್ಜೆ ಗುರುತಿಲ್ಲ!
3  ವರ್ಷದ ಹಿಂದೆ ಕಳ್ಳಬೇಟೆ ತಡೆಗಾಗಿ ಶಿಬಿರದ ಸಿಬ್ಬಂದಿ ಹಾಗೂ ವಲಯಾರಣ್ಯಾಧಿಕಾರಿಗಳಿಗೆ ಹೆಜ್ಜೆ ಸಾಫ್ಟ್ವೇರ್‌ ಹೊಂದಿದ ಆಂಡ್ರಾಯ್ಡ ಮೊಬೈಲ್‌ಗ‌ಳನ್ನು ನೀಡಲಾಗಿತ್ತು. ಶಿಬಿರಗಳಿಂದ ಗಸ್ತು ಹೊರಟ ಸಿಬ್ಬಂದಿ ಈ ಮೊಬೈಲ್‌ ಆನ್‌ ಮಾಡುತ್ತಿದ್ದಂತೆ ಗಸ್ತು ಮಾರ್ಗ, ಸಸ್ಯವರ್ಗ, ಕೆರೆಗಳಲ್ಲಿ ನೀರಿನ ಮಟ್ಟ, ಎದುರಾಗುವ ಪ್ರಾಣಿಯ ಚಿತ್ರಗಳು ಕೇಂದ್ರ ಕಚೇರಿಗೆ ತಲುಪುತ್ತಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಈಗ ಹೆಜ್ಜೆ ಗುರುತಿಲ್ಲದಂತಾಗಿದೆ! ಇನ್ನೊಂದೆಡೆ ಮೇವಿಲ್ಲದೆ ಓಂಕಾರ್‌ ಹಾಗೂ ನುಗು ವಲಯದ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ರೈತರು ತಾವು ಬೆಳೆದ ಫ‌ಸಲು ರಕ್ಷಿಸಿಕೊಳ್ಳಲು ಅಕ್ರಮವಾಗಿ ವಿದ್ಯುತ್‌ ಹರಿಸಿ ಆನೆಗಳು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಕೆಲವೆಡೆ ಗುಂಡಿಟ್ಟು ಪ್ರಾಣಿಗಳ ಹತ್ಯೆ ನಡೆಯುತ್ತಿದೆ. ಇದರ ತಡೆಗೆ ಅರಣ್ಯ ಇಲಾಖೆ ಕ್ರಮವೇನು ಎನ್ನುತ್ತಾರೆ ಪ್ರಾಣಿಪ್ರಿಯರು.

ಕಾದಾಟ ಸೇರಿ ಇತರೆ ಕಾರಣಗಳಿಗೆ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಕುಂದಕೆರೆ, ಓಂಕಾರ ಹಾಗೂ ಗುಂಡ್ರೆ ವಲಯಗಳಲ್ಲಿ ಕೊಳವೆ ಬಾವಿಗೆ ಸೌರ ವಿದ್ಯುತ್‌ ಚಾಲಿತ ಮೋಟಾರ್‌ ಅಳವಡಿಸಿ ನೀರು ಹರಿಸಲಾಗುತ್ತಿದೆ. ಹೆಜ್ಜೆ ಸಾಫ್ಟ್ವೇರ್‌ ಹೊಂದಿದ ಮೊಬೈಲ್‌ಗ‌ಳ ಬ್ಯಾಟರಿ ಬದಲಿಸುತ್ತಿದ್ದೇವೆ. ನೀರು, ಆಹಾರದ ಕೊರತೆ ಮಾತ್ರ ಪ್ರಾಣಿಗಳ ಸಾವಿಗೆ ಕಾರಣ ಎಂದು ಆರೋಪಿಸುವುದು ಸರಿಯಲ್ಲ.
  – ಟಿ.ಹೀರಾಲಾಲ್‌,  ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ಯೋಜನೆ.

ಬಂಡೀಪುರದಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ಚುಕ್ಕೆಜಿಂಕೆಗಳು ಈಗ ವಿರಳವಾಗಿವೆ. ಆನೆ ಮತ್ತು ಕಾಟಿಯಂಥಾ ಬೃಹತ್‌ ಗಾತ್ರದ ಪ್ರಾಣಿಗಳಿಗೆ ಎಲ್ಲಿಯೂ ಮೇವು ದೊರಕದೆ ಒಣ ಎಲೆಗಳು ಹಾಗೂ ಕುರುಚಲನ್ನೇ ತಿನ್ನಬೇಕಾಗಿದೆ. ಸಸ್ಯಾಹಾರಿ ವನ್ಯಜೀವಿಗಳ ವಲಸೆಯಿಂದಾಗಿ ಚಿರತೆ ಹಾಗೂ ಹುಲಿಗಳಿಗೆ ಇದೀಗ ಆಹಾರದ ಕೊರತೆ ಎದುರಾಗಿದೆ.
 – ರಘುರಾಂ, ಹಿಮಗಿರಿ ಹಿತರಕ್ಷಣಾ ಸಂಸ್ಥೆಯ ಸಂಯೋಜಕರು

– ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next