ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷದ ರಾಜಕರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಹಾಸನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅಡೆ-ತಡೆಯಾವುದಿಲ್ಲ ಎಂಬ ಭಾವನೆಯಿದೆ. ಸ್ವಲ್ಪ ದಿನ ಕಾದು ನೋಡುತ್ತೇವೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಶಿವಮೊಗ್ಗ ಜಿಲ್ಲೆ ಮತ್ತು ಶಿಕಾರಿಪುರ ತಾಲೂಕಿಗೆ 2ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿದರು. ಆದರೆ ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳ ಬಗ್ಗೆಯೂ ಮುಖ್ಯಮಂತ್ರಿಯವರು ಗಮನಹರಿಸಲಿ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ದೇವೇಗೌಡರ ಕುಟುಂಬದವರು ಏನೂ ಮಾಡಲಿಲ್ಲ ಎಂದು ದೂರುತ್ತಲೇ ಬಂದಿದ್ದಾರೆ. ಈಗ ಬಿಜೆಪಿ ಸರ್ಕಾರವಾದರೂ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ತೋಟಗಾರಿಕೆ ಕಾಲೇಜಿಗೆ ತಡೆ: ಹಾಸನ ತಾಲೂಕಿನ ಸೋಮನಹಳ್ಳಿಯಲ್ಲಿ 63 ಕೋಟಿ ರೂ. ತೋಟಗಾರಿಕೆ ಕಾಲೇಜು ಪ್ರಾರಂಭಿಸಲು ಕಳೆದ ಜು.18 ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿರುವುದನ್ನು ತಡೆ ಹಿಡಿದ್ದಾರೆ. ದ್ವೇಷದ ರಾಜಕಾರಣದಿಂದ ಏನೂ ಸಾಧಿಸಲಾಗುವುದಿಲ್ಲ. ಈ ರಾಜ್ಯದ ರಾಜಕಾರಣ ಯಾವ ಸಂದರ್ಭದಲ್ಲಿ ಹೇಗೇಗೆ ಮಗ್ಗಲು ಬದಲಿಸುತ್ತದೆ ಎಂಬುದು ನನಗೆ ಗೊತ್ತಿದೆ.
ಈಗಲೇ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಕೇಳುವುದಿಲ್ಲ. ನಮಗೇನೂ ಆತುರವಿಲ್ಲ. ಈಗ ರಾಜ್ಯದ 12 ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹಾಸನ ಜಿಲ್ಲೆಯೂ ಸೇರಿದಂತೆ ಮೊದಲು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕಗಳಿಗೆ ಸರ್ಕಾರ ಆದ್ಯತೆ ನೀಡಲಿ. ಆನಂತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನ ಹರಿಸಲಿ ಎಂದು ರೇವಣ್ಣ ಅವರು ಸಲಹೆ ನೀಡಿದರು.
ಜಿಲ್ಲೆಯ ಅಭಿವೃದ್ಧಿಯೇ ಗುರಿ: ನನಗಿನ್ನೂ ವಯಸ್ಸಾಗಿಲ್ಲ. ನನಗೆ ವಯಸ್ಸಿದೆ. ಹಾಸನ ಜಿಲ್ಲೆಯನ್ನು ರಾಜ್ಯದಲ್ಲಿಯೇ ನಂ.1 ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಗುರಿ. ಹಾಸನ ಜಿಲ್ಲೆಯ ಜನರು ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿದ್ದಾರೆ. ಅವರ ಋಣ ತೀರಿಸಬೇಕು. ಆ ನಿಟ್ಟಿನಲ್ಲಿ ಹಾಸನ ನಗರ ಸೇರಿದಂತೆ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಪಕ್ಷಪಾತ ಮಾಡದೇ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈಗ ಬಿಜೆಪಿ ಶಾಸಕರು ಅನುದಾನ ತರಲಿ ಎಂದು ಲೇವಡಿ ಮಾಡಿದರು.
ಸವಾಲು ಸ್ವೀಕರಿಸಿರುವೆ: ನಾನು ಇನ್ನು ಹಾಸನ ಜಿಲ್ಲೆಗೆ ಸೀಮಿತವಾಗಿರಲ್ಲ ಎಂದು ಹೇಳಿದ್ದೇನೆ. ರಾಜ್ಯದ ಕನಿಷ್ಠ 5 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡು ಅಲ್ಲಿನ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುವ ಸವಾಲು ಸ್ವೀಕರಿಸಿದ್ದೇನೆ. ಎಚ್.ಡಿ.ಕುಮಾರಸ್ವಾಮಿಯವರ ಹೋರಾಟಕ್ಕೆ ಭುಜ ಕೊಟ್ಟು ರಾಜ್ಯದಲ್ಲಿ ಹೋರಾಟ ಮಾಡುವೆ ಎಂದರು. ರಾಜ್ಯ ಜೆಡಿಎಸ್ ಅಧ್ಯಕ್ಷ, ಶಾಸಕ ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ತು ಮಾಜಿ ಸದಸ್ಯ ಪಟೇಲ್ ಶಿವರಾಂ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.