Advertisement

ರಕ್ಷಿತಾರಣ್ಯ ಸುರಕ್ಷತೆಗೆ ವಾಚ್‌ಟವರ್‌

04:56 AM Mar 04, 2019 | |

ಬೆಳ್ತಂಗಡಿ: ತಾಪಮಾನ ಏರಿಕೆಯಿಂದ ರಕ್ಷಿತಾರಣ್ಯಗಳಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡ ತಡೆಯುವ ಸಲುವಾಗಿ ತಾಲೂಕು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಕಲ ಸನ್ನದ್ಧವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ 12,800 ಹೆಕ್ಟೇರ್‌ (32 ಸಾವಿರ ಎಕ್ರೆ) ಅರಣ್ಯ ಪ್ರದೇಶ ಹೊಂದಿರುವುದರಿಂದ ಕಾಳ್ಗಿಚ್ಚು ಸಂಭವ ಹೆಚ್ಚು. ಅತೀವ ಬಿಸಿಲು ಹಾಗೂ ಒಣ ಹುಲ್ಲುಗಳಿಂದ ಕಾಳ್ಗಿಚ್ಚು ಉಂಟಾದಲ್ಲಿ ಬೆಂಕಿ ನಂದಿಸಲು ಅರಣ್ಯ ಇಲಾಖೆಯಿಂದ ಚಾರ್ಮಾಡಿಯ ಪೆರಿಂಗಿಲಬೆಟ್ಟ ಹಾಗೂ ಕಕ್ಕಿಂಜೆ ಬಳಿ ಮನ್ನಡ್ಕಪಾದೆಯಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ 30 ಅಡಿ ಎತ್ತರದ ವಾಚ್‌ಟವರ್‌ಗಳು ನಿರ್ಮಾಣ ಮಾಡಲಾಗಿದೆ.

Advertisement

 ವಾಚ್‌ಟವರ್‌ ವಿಶೇಷ
ಕಾಂಕ್ರೀಟ್‌ ಪಿಲ್ಲರ್‌ಗಳಿಂದ ನಿರ್ಮಿಸಲಾಗಿದ್ದು, ಇಬ್ಬರು ಉಳಿದುಕೊಳ್ಳುವಷ್ಟು ಸ್ಥಳಾವಕಾಶವಿದೆ. ರಾತ್ರಿ ಮತ್ತು ಹಗಲು 2 ಪಾಳಿಯಂತೆ 4 ಜನ ವಾಚರ್ ಕಣ್ಗಾವಲಿಡಲಾಗಿದೆ. ಚಾರ್ಮಾಡಿ ವ್ಯಾಪ್ತಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ವಾಚರ್‌ ಗಸ್ತು ನಿಯೋಜಿಸಲಾಗಿದೆ. ಉಳಿದಂತೆ ಜೀಪ್‌ ವ್ಯವಸ್ಥೆ ಮಾಡಲಾಗಿದ್ದು, ಪಂಪ್‌, ನೀರಿನ ಕ್ಯಾನ್‌, ಬೆಂಕಿ ನಂದಿಸಲು ಬ್ಲೋ-ಮೆಷಿನ್‌ ಕಾರ್ಯಾಚರಣೆಗೆ ನೆರವಾಗಲಿದೆ.

ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ
ಬೇಸಗೆಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೀರಿನ ಮಟ್ಟ ಇಂಗುವ ಜತೆಗೆ ಗಿಡ-ಮರಗಳ ಎಲೆಗಳು ಒಣಗಿರುತ್ತವೆ. ಈ ಪ್ರದೇಶದಲ್ಲಿ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ಗಳಿದ್ದರೆ ಶಾರ್ಟ್‌ಸರ್ಕ್ನೂಟ್‌ನಿಂದ ಸಣ್ಣ ಕಿಡಿ ಕಾಣಿಸಿಕೊಂಡರೂ ಅದು ತತ್‌ಕ್ಷಣ ಒಣಗಿದ ತರಗೆಲೆಯನ್ನು ಹತ್ತಿಕೊಳ್ಳುತ್ತದೆ. ಇದಕ್ಕೆ ಮುಂಜಾಗ್ರತ ಕ್ರಮವಾಗಿ ಅರಣ್ಯ ಇಲಾಖೆಯು ವಿದ್ಯುತ್‌ ತಂತಿ ಹಾದು ಹೋಗಿರುವ ಪ್ರದೇಶ ಹಾಗೂ ಟ್ರಾನ್ಸ್‌ಫಾರ್ಮರ್‌ ಸುತ್ತ 10 ಮೀಟರ್‌ ವ್ಯಾಪ್ತಿಯಲ್ಲಿ ಹುಲ್ಲುಗಳನ್ನು ನಾಶ ಮಾಡಿದೆ.

ಚಾರಣಕ್ಕಿಲ್ಲ ಅವಕಾಶ
ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವೊಂದು ಸಂದರ್ಭ ಅವಘಢ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಬೆಳ್ತಂಗಡಿ ಅರಣ್ಯ ಪ್ರದೇಶಗಳಾದ ದಿಡುಪೆ, ಗಡಾಯಿ ಕಲ್ಲು, ಚಾರ್ಮಾಡಿ, ಮುಂಡಾಜೆ ಸಹಿತ ಪ್ರಮುಖ ಸ್ಥಳಗಳಿಗೆ ಜನವರಿಯಿಂದಲೇ ಚಾರಣಕ್ಕೆ ನಿಷೇಧ ಹೇರಲಾಗಿದೆ.  ಬೆಂಕಿ ನಂದಿಸಲು ಸಲಕರಣೆ ಬೆಂಕಿ ವ್ಯಾಪಿಸದಂತೆ ಬೆಂಕಿ ಗೆರೆ ಎಳೆಯುಲು ಬ್ಲೋಯರ್‌ ಮೆಷಿನ್‌ ಸಹಕಾರಿಯಾಗಲಿದೆ. ವೇಸ್ಟ್‌ ಪೈಪ್‌ಗೆ ರಬ್ಬರ್‌ ಪಟ್ಟಿ ಅಳವಡಿಸಿ ಬೆಂಕಿ ನಂದಿಸಲು ಸಹಾಯಕವಾಗಲಿದೆ. ಇನ್ನುಳಿದಂತೆ ಸಿಬಂದಿಗೆ ಹಂಟರ್‌ ಶೂ, ಬೆಂಕಿ ತಡೆಯಬಲ್ಲ ಶಮವಸ್ತ್ರ, ಹೆಲ್ಮೆಟ್‌ ನೀಡಲಾಗಿದೆ.

ಗ್ರಾಮದಲ್ಲಿ ಜಾಗೃತಿ
ಅರಣ್ಯ ಇಲಾಖೆಯಿಂದ ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಎನ್ನೆಸೆಸ್‌ ವಿದ್ಯಾರ್ಥಿಗಳು ಹಾಗೂ ಶಿವಮೊಗ್ಗದ ತಂಡದ ಸಹಕಾರದಿಂದ ಗ್ರಾಮಗಳಲ್ಲಿ ಬೀದಿನಾಟಕ ಜಾಗೃತಿ ಕಾರ್ಯಕ್ರಮ ನಡೆಸಿದೆ. ಧರ್ಮಸ್ಥಳ, ಚಿಬಿದ್ರೆ, ಚಾರ್ಮಾಡಿ ಪ್ರದೇಶಗಳಲ್ಲಿ ಕ್ಯಾಂಪ್‌ ರಚಿಸಲಾಗಿದ್ದು, ಊರಿನ 150ರಿಂದ 200 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದಲ್ಲಿ ಸ್ವಯಂಪ್ರೇರಿತರಾಗಿ ಕಾರ್ಯಪ್ರವೃತ್ತರಾಗಲು ಸಹಕಾರಿಯಾಗಲಿದೆ.

Advertisement

 ಸಿಬಂದಿ, ವಾಹನದ ಕೊರತೆ
ತಾಲೂಕಿನ ಅರಣ್ಯ ಇಲಾಖೆಯಲ್ಲಿ 4ರಿಂದ 5 ಹುದ್ದೆಗಳು ಖಾಲಿ ಇವೆ. ಒಂದು ಜೀಪ್‌ ಹೊರತುಪಡಿಸಿ ಬೇರಾವುದೇ ವಾಹನಗಳಿಲ್ಲ. 30ರಿಂದ 40 ಕಿ.ಮೀ. ಸಂಚಾರ ವಿರುವುದರಿಂದ ಕಿರಿದಾದ ರಸ್ತೆಗಳಲ್ಲಿ ಸಲಕರಣೆ ಹೊತ್ತೂಯ್ಯಲು ಸಮಸ್ಯೆಯಾಗುತ್ತಿದೆ. ಗೇರುಕಟ್ಟೆ, ಮಡಂತ್ಯಾರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಚಿ.ಬಿದ್ರೆ, ನೆರಿಯದಲ್ಲಿರುವ ಕೇಂದ್ರಸ್ಥಾನದಲ್ಲಿ ಒಬ್ಬರಂತೆ 8 ಉಪವಲಯ ಅರಣ್ಯಾಧಿಕಾರಿಗಳಿದ್ದಾರೆ.

ಅರಣ್ಯ ಪ್ರದೇಶ, ಹುದ್ದೆ
ಒಟ್ಟು ಅರಣ್ಯ ಪ್ರದೇಶ : 12,800 ಹೆಕ್ಟೇರ್‌,  ಉಪವಲಯ ಅರಣ್ಯಾಧಿಕಾರಿ: 8 , ಅರಣ್ಯಾಧಿಕಾರಿ: 15 (18ರಲ್ಲಿ 3 ಹುದ್ದೆ ಖಾಲಿ),  ಅರಣ್ಯ ವೀಕ್ಷಕರು: 2 (5ರಲ್ಲಿ 3 ಹುದ್ದೆ ಖಾಲಿ).

ಡಿಸೆಂಬರ್‌ನಿಂದಲೇ ಎಚ್ಚರಿಕೆ
ಅಗ್ನಿ ಅವಘಡ ಸಂಭವಿಸದಂತೆ ಡಿಸೆಂಬರ್‌ ನಿಂದಲೇ ಎಚ್ಚರಿಕೆ ವಹಿಸಲಾಗಿದ್ದು, ಅರಣ್ಯ ಇಲಾಖೆಯ ತಂಡ ಸೂಕ್ಷ್ಮಪ್ರದೇಶಗಳು ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದೆ. ಪ್ರಸ್ತುತ ತಾಲೂಕಿನ ಎರಡು ಕಡೆಗಳಲ್ಲಿ ವಾಚ್‌ಟವರ್‌ ನಿರ್ಮಾಣಗೊಂಡಿದ್ದು, ಅಗ್ನಿ ಅವಘಡಗಳನ್ನು
ತತ್‌ಕ್ಷಣ ವೀಕ್ಷಣೆಗೆ ನೆರವಾಗಲಿದೆ. ಉಳಿದಂತೆ ಬ್ಲೋ ಮೆಷಿನ್‌, ತಾತ್ಕಾಲಿಕ ಪರಿಕರ ಸಿದ್ಧಪಡಿಸಿಕೊಳ್ಳಲಾಗಿದೆ.
– ಸುಬ್ಬಯ್ಯ ನಾಯ್ಕ್ 
 ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ

‡ ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next