ಕೇರಳ: ಪ್ರಯಾಣಿಕರನ್ನು ಒಳಗೊಂಡ ಖಾಸಗಿ ಬಸ್ಸಿನ ಎದುರುಗಡೆ ಕಾಡಾನೆಯೊಂದು ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸಿರುವ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
40 ಜನ ಪ್ರಯಾಣಿಕರನ್ನು ಒಳಗೊಂಡ ಖಾಸಗಿ ಬಸ್ ಚಾಲಕುಡಿಯ ವಾಲ್ಪಾರೈ ಮಾರ್ಗದಲ್ಲಿ ಹೋಗುತ್ತಿರುವಾಗ ಕಾಡಾನೆಯೊಂದು ಎದುರುಗಡೆ ಬಂದಿದೆ. ಏಕಾಏಕಿ ಕಾಡಾನೆ ಬಸ್ಸಿನ ಮುಂದೆಯೇ ಬರುತ್ತಿರುವುದನ್ನು ಕಂಡ ಪ್ರಯಾಣಿಕರು ಭೀತಿಯಿಂದ ಕಿರುಚಲು ಆರಂಭಿಸಿದ್ದಾರೆ. ಇನ್ನೇನು ಕಾಡಾನೆ ಬಸ್ಸಿನ ಮುಂದೆ ಬಂದು, ಬಸ್ಸನ್ನು ಹಾನಿ ಮಾಡುತ್ತದೆ ಎನ್ನುವಾಗಲೇ ಬಸ್ಸಿನ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ.
ಚಾಲಕ ಅಂಬುಜಾಕ್ಷನ್ ಬಸ್ಸನ್ನು ರಿವರ್ಸ್ ಗೇರ್ ಗೆ ಹಾಕಿ, ಅನಕ್ಕಯಂದಿಂದ ಅಂಬಲಪರದವರೆಗೆ ಸುಮಾರು 8 ಕಿ.ಮೀವರೆಗೆ ರಿವರ್ಸ್ ನಲ್ಲಿ ಚಲಾಯಿಸಿಕೊಂಡೇ ಹೋಗಿದ್ದಾನೆ. ಆನೆ ಎಲ್ಲಿಯವರೆಗೆ ತನ್ನ ಅಬ್ಬರವನ್ನು ನಿಲ್ಲಿಸಿ ಕಾಡಿಗೆ ಸೇರುತ್ತದೋ ಅಲ್ಲಿಯವರೆಗೆ ಬಸ್ ರಿವರ್ಸ್ ಆಗಿ ಚಲಿಸಿದೆ.
ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಆನೆ ಬಸ್ಸಿನ ಮುಂದೆ ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ʼಕಬಾಲಿʼ ಎನ್ನುವ ಆನೆ ಕಳೆದ ಕೆಲ ದಿನಗಳಿಂದ ಪ್ರಯಾಣಿಕರಿಗೆ, ವಾಹನ ಸವಾರರಿಗೆ ತೊಂದರೆ ಕೊಡುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ.ವರದಿಯ ಪ್ರಕಾರ ಮಂಗಳವಾರ (ನ.15 ರಂದು) ಈ ಘಟನೆ ನಡೆದಿದೆ ಎನ್ನಲಾಗಿದೆ.