ಚೆನ್ನೈ: ಫ್ಯಾಷನ್ ಲೋಕದಲ್ಲಿ ಭಿನ್ನ – ವಿಭಿನ್ನ ಉಡುಗೆಯನ್ನು ತೊಟ್ಟುಕೊಂಡು ವೇದಿಕೆ ಮೇಲೆ ವಾಕ್ ಮಾಡುವುದು ಒಂದು ರೀತಿಯಲ್ಲಿ ಟ್ರೆಂಡ್. ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮಾಡೆಲ್ ಯೊಬ್ಬಳು ಜೀವಂತ ಚಿಟ್ಟೆಗಳಿರುವ ಬಟ್ಟೆಯನ್ನು ಹಾಕಿಕೊಂಡು ರ್‍ಯಾಂಪ್ ಮೇಲೆ ವಾಕ್ ಮಾಡಿದ್ದು ಸುದ್ದಿ ಆಗಿತ್ತು.
ಇದೀಗ ಅಂಥದ್ದೇ ಮತ್ತೊಂದು ವೈವಿಧ್ಯಮಯ ಡ್ರೆಸ್ ಹಾಕಿಕೊಂಡು ಮಾಡೆಲ್ ಯೊಬ್ಬಳು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾಳೆ.
ಚೆನ್ನೈನಲ್ಲಿ ನಡೆದ ಫ್ಯಾಷನ್ ಶೋವೊಂದರಲ್ಲಿ ಮಾಡೆಲ್ ಯೊಬ್ಬಳು ಜೀವಂತ ಮೀನುಗಳಿರುವ ಟ್ಯಾಂಕ್ ನ್ನೇ ತನ್ನ ಉಡುಗೆಯಲ್ಲಿ ಕಟ್ಟಿಕೊಂಡು ರ್‍ಯಾಂಪ್ ಮೇಲೆ ವಾಕ್ ಮಾಡಿದ್ದಾರೆ.
ಮಾಡೆಲ್ ಮತ್ಸ್ಯಕನ್ಯೆಯಂತಹ ಕಸ್ಟ್ಯೂಮ್ ನ್ನು ಧರಿಸಿದ್ದು, ಮೀನಿನ ವೇಷಭೂಷಣದಂತೆ ಕಂಡಿದ್ದಾರೆ. ಮೀನಿನ ಹೊಟ್ಟೆಯ ಬಳಿ ಮರಿಗಳಿರುವಂತೆ, ಮಾಡೆಲ್ ತನ್ನ ಹೊಟ್ಟೆಯ ಬಳಿ ಸಣ್ಣ ಮೀನಿನ ಟ್ಯಾಂಕ್ ವೊಂದನ್ನು ಕಟ್ಟಿಕೊಂಡು ಅದಕ್ಕೆ ನೀರು ಹಾಕಿ, ಅದರೊಳಗೆ ಜೀವಂತ ಮೀನುಗಳನ್ನು ಹಾಕಿ ರ್‍ಯಾಂಪ್ ವಾಕ್ ಮಾಡಿದ್ದಾರೆ.
ಸದ್ಯ ಈ ಮತ್ಸ್ಯೆಕನ್ಯೆಯ ಕಸ್ಟ್ಯೂಮ್ ಗೆ ವಿರೋಧ ವ್ಯಕ್ತ ವಾಗಿದ್ದು, ಇದನ್ನು ಪ್ರಾಣಿಗಳ ಹಿಂಸೆ ಮತ್ತು ಕ್ರೌರ್ಯದ ನಿದರ್ಶನವೆಂದು ನೆಟ್ಟಿಗರು ಕರೆದಿದ್ದಾರೆ. ಜೀವಂತ ಜೀವಿಗಳನ್ನು ಪ್ರದರ್ಶನಕ್ಕೆ ಬಳಸಿಕೊಳ್ಳುವ ಮತ್ತು ಅವುಗಳನ್ನು ಕೇವಲ ಆಧಾರವಾಗಿ ಪರಿಗಣಿಸುವ ಕಲ್ಪನೆಯನ್ನುನೆಟ್ಟಿಗರು ಖಂಡಿಸಿದ್ದಾರೆ.
“ಇದು ಅಸಹ್ಯಕರವಾಗಿದೆ! ಫ್ಯಾಷನ್‌ಗಾಗಿ ಪ್ರಾಣಿಗಳನ್ನು ಬಳಸುವುದನ್ನು ನಿಲ್ಲಿಸಿ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಜೀವಿಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನು ಇನ್ನೊಂದೆಡೆ ಮತ್ಸ್ಯಕನ್ಯೆ ಉಡುಗೆಯನ್ನು ಉರ್ಫಿ ಜಾವೇದ್ ಮೆಚ್ಚಿಕೊಂಡಿದ್ದಾರೆ.