ಚೆನ್ನೈ: ಚಳಿಗಾಲ ಬಂತೆಂದರೆ ಪ್ರಕೃತಿಯ ಸೊಬಗು ಇನ್ನಷ್ಟು ರಂಗೇರುವುದು ಸಹಜ. ಆ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ದೇಶದ ನಾನಾ ಭಾಗಗಳಲ್ಲಿ ವಿದೇಶಿ ಹಕ್ಕಿಗಳ ಕಲವರಕ್ಕೆ ಸಾಕ್ಷಿಯಾಗುತ್ತಿರುವುದನ್ನು ಕಂಡಿದ್ದೇವೆ.
ಇದನ್ನೂ ಓದಿ:ಹೊಸಬರ ‘ಥಗ್ಸ್ ಆಫ್ ರಾಮಘಡ’ ಟ್ರೇಲರ್ ಗೆ ಮೆಚ್ಚುಗೆ
ನೂರಾರು, ಸಾವಿರಾರು ಕಿಲೋ ಮೀಟರ್ ದೂರದಿಂದ ವಲಸೆ ಬರುವ ಹಕ್ಕಿಗಳು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಠಿಕಾಣಿ ಹೂಡುವ ಮೂಲಕ ಪಕ್ಷಿಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ.
ಇತ್ತೀಚೆಗೆ ತಮಿಳುನಾಡಿನ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಫ್ಲೆಮಿಂಗೋಗಳ ಹಿಂಡಿನ ಕಿರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಕರ್ಷಕ ಮೈಬಣ್ಣದ ಫ್ಲೆಮಿಂಗೋಗಳು ನದಿ ತೀರದಲ್ಲಿ ಓಡುತ್ತಿರುವ, ಗುಂಪಾಗಿ ಹಾರಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ತಮಿಳುನಾಡಿನ ಪಾಯಿಂಟ್ ಕ್ಯಾಲಿಮರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ಈ ಮನಮೋಹಕ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಮಿನುಗುವ ಜಲರಾಶಿಯ ಮೇಲೆ ಕಿತ್ತಳೆ ವರ್ಣದ ಸೂರ್ಯನ ಕಿರಣಗಳಿಂದಾಗಿ ಪ್ರಕೃತಿಯ ಸೌಂದರ್ಯ ಪ್ರವಾಸಿಗರನ್ನು ಮೋಡಿ ಮಾಡುವಂತಿದೆ.
ತಮಿಳುನಾಡಿನ ಕೋಡಿಯಾಕ್ಕರೈ/ಪಾಯಿಂಟ್ ಕ್ಯಾಲಿಮರ್ ಸಮುದ್ರದಾದ್ಯಂತ ವಲಸೆ ಬರುತ್ತಿರುವ ಹಕ್ಕಿಗಳನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ಮುತ್ತುಪೆಟ್ಟೈ ಕಾಂಡ್ಲವನ ಪ್ರದೇಶಕ್ಕೆ ಈಗಾಗಲೇ 50,000ಕ್ಕೂ ಅಧಿಕ ಫ್ಲೆಮಿಂಗೋಗಳು ಆಗಮಿಸಿದ್ದು, ಇದೊಂದು ಮೋಡಿಯ ತಾಣವಾಗಿ ಮಾರ್ಪಟ್ಟಿದೆ ಎಂದು ವಿಡಿಯೋಕ್ಕೆ ಕ್ಯಾಪ್ಶನ್ ನೀಡಲಾಗಿದೆ.