ತಿರುವನಂತಪುರಂ: ವಧುವೊಬ್ಬರು ಮದುವೆ ಮಂಟಪಕ್ಕೆ ಬರುವಾಗ ಚೆಂಡೆಯನ್ನು ಬಡಿಯುತ್ತಾ ವೇದಿಕೆ ಹತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಕೇರಳದ ಗುರುವಾಯೂರ್ ದೇವಾಲಯದಲ್ಲಿ ನಡೆದ ಮದುವೆಯಲ್ಲಿ ಶಿಲ್ಪಾ ಎನ್ನುವ ವಧು ಚೆಂಡೆಯನ್ನು ಬಡಿಯುತ್ತಾ ಮದುವೆ ಮಂಟಪಕ್ಕೆ ಬಂದಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಹತ್ತಾರು ಜನ ಮದುವೆಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ವಧುವಿನ ಅಪ್ಪ – ಅಮ್ಮ ಕುಟುಂಬಸ್ಥರು ಮಗಳ ಮದುವೆ ಎನ್ನುವ ಸಂತಸದಲ್ಲಿದ್ದಾರೆ. ಮದುವೆ ಮಂಟಪದಲ್ಲಿ ವರನ ಪಕ್ಕದಲ್ಲಿ ಕುಳಿತು ಶಾಸ್ತ್ರೋಕ್ತಗಳಲ್ಲಿ ಭಾಗಿಯಾಗಬೇಕಾದ ವಧು, ಮಂಟಪಕ್ಕೆ ಬರುವ ವೇಳೆ ಚೆಂಡೆ ತಂಡದೊಂದಿಗೆ ಚೆಂಡೆಯನ್ನು ಬಡಿಯುತ್ತಾ, ಖುಷಿ ಖುಷಿಯಲ್ಲಿ ಚೆಂಡೆ ತಂಡದ ಸದಸ್ಯರೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.
ಇದರೊಂದಿಗೆ ಶಿಲ್ಪಾ ಅವರ ತಂದೆ ಹಾಗೂ ಮದುವೆ ಗಂಡು ಕೂಡ ತನ್ನ ಭಾವಿ ಪತ್ನಿಯ ಜೊತೆಗೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 2.24 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಮಾತೃಭೂಮಿ ವರದಿ ಪ್ರಕಾರ ವಧು ಶಿಲ್ಫ ಅವರು ಚೆಂಡ ವಾದನದ ಅನುಭವಿ ಕಲಾವಿದೆ. ಹಲವಾರು ಚೆಂಡೆ ವಾದನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಖ್ಯಾತಿಯನ್ನು ಗಳಿಸಿದವರು ಎಂದು ತಿಳಿಸಿದೆ.