ಹೈದರಾಬಾದ್: ಸಾಮಾನ್ಯವಾಗಿ ಹೊಸ ದ್ವಿಚಕ್ರ ವಾಹನ, ಕಾರುಗಳನ್ನು ಪೂಜೆ ಮಾಡಿಸಲು ದೇಗುಲದ ಬಳಿ ತರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಆದರೆ ತೆಲಂಗಾಣದ ಉದ್ಯಮಿಯೊಬ್ಬರು ವಾಹನ ಪೂಜೆ ಮಾಡಿಸಲು ಹೊಸ ಹೆಲಿಕಾಪ್ಟರ್ ಅನ್ನೇ ದೇವಸ್ಥಾನಕ್ಕೆ ತಂದಿದ್ದಾರೆ.
ಹೈದರಾಬಾದ್‌ನ ಪ್ರತಿಮಾ ಗ್ರೂಪ್ ಕಂಪನಿ ಮಾಲೀಕ ಬೋಯಿನ್‌ಪಲ್ಲಿ ಶ್ರೀನಿವಾಸ್ ರಾವ್ ಅವರು ತಮ್ಮ ಹೊಚ್ಚ ಹೊಸ ಏರ್‌ಬಸ್ ಎಸಿಎಚ್-135 ಅನ್ನು ವಾಹನ ಪೂಜೆ ಮಾಡಿಸಲು ಹೈದರಾಬಾದ್‌ನಿಂದ 100 ಕಿ.ಮೀ. ದೂರದ ಯಾದಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಂದಿದ್ದರು.
ಮೂವರು ಪುರೋಹಿತರ ಮಾರ್ಗದರ್ಶನದಲ್ಲಿ ಶ್ರೀನಿವಾಸ್ ರಾವ್ ಕುಟುಂಬಸ್ಥರು ಹೆಲಿಕಾಪ್ಟರ್‌ಗೆ ಪೂಜೆ ನೆರವೇರಿಸಿದರು. ನಂತರ ಕುಟುಂಬಸ್ಥರೆಲ್ಲರೂ ಹೆಲಿಕಾಪ್ಟರ್‌ನಲ್ಲಿ ಯಾದಾದ್ರಿ ಬೆಟ್ಟದ ಸುತ್ತಲೂ ಒಂದು ಸುತ್ತು ಹಾಕಿದರು. ಏರ್‌ಬಸ್ ಎಸಿಎಚ್-135 ಬೆಲೆ 47.15 ಕೋಟಿ ರೂ.(5.7 ಮಿಲಿಯನ್ ಡಾಲರ್) ಇದೆ. ಹೆಲಿಕಾಪ್ಟರ್‌ಗೆ ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರತಿಮಾ ಗ್ರೂಪ್ ಕಂಪನಿಯು ಮೂಲಸೌಕರ್ಯ, ಇಂಧನ, ಉತ್ಪಾದನೆ, ಟೆಲಿಕಾಂ ವಲಯಗಳಲ್ಲಿ ಗುರುತಿಸಿಕೊಂಡಿದೆ. ಜತೆಗೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನೂ ಹೊಂದಿದೆ.