ತಾಂಜಾನಿಯಾ: ಅಭಯಾರಣ್ಯದೊಳಗಿನ ಸಫಾರಿ ವೇಳೆ ಕೆಲವೊಮ್ಮೆ ಹುಲಿ, ಸಿಂಹ, ಆನೆಗಳು ದಿಢೀರನೆ ಪ್ರವಾಸಿಗರ ವಾಹನದ ಮುಂದೆ ಪ್ರತ್ಯಕ್ಷವಾಗುವುದುಂಟು. ಅದೇ ರೀತಿ ಸಫಾರಿಯಲ್ಲಿದ್ದ ವ್ಯಕ್ತಿಯ ವಾಹನದೊಳಗೆ ಚೀತಾ ಬಂದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಈ ಘಟನೆ ತಾಂಜಾನಿಯಾ ಅರಣ್ಯದಲ್ಲಿ ಸಫಾರಿಯಲ್ಲಿದ್ದ ವೇಳೆ ನಡೆದಿದೆ. ಅರಣ್ಯದಲ್ಲಿ ಹುಲಿ, ಚಿರತೆಯ ಚಲನವಲನ ಗಮನಿಸುವ ನಿಟ್ಟಿನಲ್ಲಿ ಸಫಾರಿಯಲ್ಲಿದ್ದ ಪ್ರವಾಸಿಯೊಬ್ಬ ತನ್ನ ಜೀಪಿನಲ್ಲಿ ಕುಳಿತಿದ್ದ ಆಗ ದಿಢೀರನೆ ಚೀತಾ ಕಿಟಕಿಯಿಂದ ಒಳಗೆ ನುಸುಳಿ ಬಂದಿದ್ದು, ಆಗ ಜೀಪಿನೊಳಗಿದ್ದ ವ್ಯಕ್ತಿ ಅಲುಗಾಡದೇ ಕುಳಿತು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ತಾನ್ಸು ಯೇಜೆನ್ ಎಂಬವರು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ಚೀತಾವಾಹನದೊಳಗೆ ಬಂದು ಆ ಕಡೆ, ಈ ಕಡೆ ನೋಡುತ್ತಿದ್ದು, ಮತ್ತೊಂದೆಡೆ ಮತ್ತೊಂದು ಚೀತಾ ಜೀಪ್ ನ ಬಾನೆಟ್ ಮೇಲೆ ಕುಳಿತಿರುವ ದೃಶ್ಯ ದಾಖಲಾಗಿದೆ.
ಟ್ವೀಟರ್ ನಲ್ಲಿ ವಿಡಿಯೋ ಶೇರ್ ಮಾಡಿದ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದ್ದು, ಜೀಪ್ ನೊಳಗೆ ಕುಳಿತ ವ್ಯಕ್ತಿಯ ತಾಳ್ಮೆ ಮತ್ತು ಧೈರ್ಯಕ್ಕೆ ಬಹುತೇಕ ಟ್ವೀಟರ್ ಬಳಕೆದಾರರು ಶಹಬ್ಬಾಸ್ ಎಂದಿದ್ದಾರೆ.