ಉಡುಪಿ: ಸಿಎಂ ಸಿದ್ದರಾಮಯ್ಯ ಅವರು ಗಿಫ್ಟ್ ಪಡೆದ ಹ್ಯೂಬ್ಲೋಟ್ ವಾಚ್‌ಗೂ ಅನಿವಾಸಿ ಉದ್ಯಮಿ ಡಾ| ಬಿ. ಆರ್. ಶೆಟ್ಟಿ ಅವರಿಗೆ ರಾಜ್ಯ ಸರಕಾರ ವಹಿಸಿರುವ ಉಡುಪಿಯ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಜೋಗ ಜಲಪಾತ ಅಭಿವೃದ್ಧಿ ಯೋಜನೆಗೂ ಸಂಬಂಧವಿದೆ. ಸಿಎಂ ಸಹಿತ ಹಲವು ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ತಿಳಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ 5 ಪುಟಗಳ ಪತ್ರದ ಪ್ರತಿ ಹಾಗೂ 35 ಪುಟಗಳ ದಾಖಲೆ ಪ್ರತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ವಾಚ್ ಪ್ರಕರಣದಲ್ಲಿ ಸಿಎಂ, ಸಚಿವರಾದ ಆರ್.ವಿ. ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಮಹದೇವಪ್ಪ, ಟಿ.ಬಿ. ಜಯಚಂದ್ರ, ಅಧಿಕಾರಿಗಳಾದ ರಜನೀಶ್ ಗೋಯಲ್, ಡಾ| ಶಾಲಿನಿ ರಜನೀಶ್, ಹಿಂದಿನ ಉಡುಪಿ ಡಿಸಿ ವೆಂಕಟೇಶ್, ಉದ್ಯಮಿ ಡಾ|ಬಿ.ಆರ್.ಶೆಟ್ಟಿ, ಡಾ| ಗಿರೀಶ್
ಚಂದ್ರ ವರ್ಮ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಸಿಬಿಐ ತನಿಖೆಗೆ ಒತ್ತಾಯಿಸಲಾಗಿದೆ ಎಂದರು.
ಪ್ರಧಾನಿಗೆ ಬರೆದ ಪತ್ರದಲ್ಲಿ ಈ ಪ್ರಕರಣದ ವಿವರಣೆ ನೀಡಿದ್ದು, ಪತ್ರ ಬರೆದ ಒಂದೂವರೆ ತಿಂಗಳ ಬಳಿಕ ಆ ಪತ್ರವನ್ನು ಸಂಬಂಧಪಟ್ಟ ಮತ್ತೂಂದು ಕಚೇರಿಗೆ ತಲುಪಿಸಲಾಗಿದೆ ಎನ್ನುವ ಉತ್ತರ ಪ್ರಧಾನಿ ಕಚೇರಿಯಿಂದ ಬಂದಿದೆ. ಈ ಸಂಬಂಧ ಸ್ಪೀಕರ್ ಕೆ. ಬಿ. ಕೋಳಿವಾಡ ಅವರಿಗೂ ಜುಲೈಯಲ್ಲಿ ಪತ್ರ ಬರೆಯಲಾಗಿದೆ. ಆದರೆ ಅವರಿಂದ ಇನ್ನೂ ಯಾವ ಉತ್ತರವೂ ಬಂದಿಲ್ಲ. ಮುಂದೆ ರಾಜ್ಯಪಾಲರಿಗೆ ಅಭಿಯೋಜನೆಗೆ ಅನುಮತಿ ಕೋರಿ ಪತ್ರ ಬರೆಯಲಿದ್ದೇನೆ. ಅದಕ್ಕೂ ಸಮರ್ಪಕ ಉತ್ತರ ದೊರೆಯದಿದ್ದಲ್ಲಿ, 2 ತಿಂಗಳ ಬಳಿಕ ಸ್ವತಃ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿ ಕಾನೂನು ರೀತಿಯ ಹೋರಾಟ ನಡೆಸುತ್ತೇನೆ ಎಂದು ಶೆಣೈ ಹೇಳಿದರು.
ಸಿಎಂ ವಿಧಾನಸಭೆಗೆ ನೀಡಿರುವ ಅಫಿದವಿತ್ ದಾಖಲೆ ಪ್ರಕಾರ ಅವರ ಸ್ನೇಹಿತ ಡಾ| ಗಿರೀಶ್ ಚಂದ್ರವರ್ಮ ವಾಚನ್ನು ಗಿಫ್ಟ್ ನೀಡಿದ್ದಾರೆ. ಇವರು ಡಾ| ಬಿ.ಆರ್. ಶೆಟ್ಟಿ ಅವರ ಆಸ್ಪತ್ರೆಯ ವೈದ್ಯ. ಹೀಗೆ ಅಧಿಕಾರಿಗಳಾದ ರಜನೀಶ್ ಗೋಯಲ್ ಹಾಗೂ ಶಾಲಿನಿ ರಜನೀಶ್ ಬದಲಾವಣೆ ವಿಚಾರಗಳಿಗೆಲ್ಲ ಒಂದಕ್ಕೊಂದು ಸಂಬಂಧ ವಿದೆ ಎಂದು ಹೇಳಿದರು.
ಪೊಲೀಸ್ ದುಃಸ್ಥಿತಿ: ಭಾವುಕರಾದ ಶೆಣೈ
ರಾಜ್ಯದಲ್ಲಿ ಪೊಲೀಸರನ್ನು ನಾಯಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ ಎನ್ನುತ್ತಾ ಭಾವುಕರಾದ ಅನುಪಮಾ ಶೆಣೈ, ಪೊಲೀಸ್ ಅಧಿಕಾರಿಗಳಾದ ಕಲ್ಲಪ್ಪ ಹಂಡಿಭಾಗ್- ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಪ್ರಸ್ತಾವಿಸಿದ ಅವರು ಭ್ರಷ್ಟ ವ್ಯವಸ್ಥೆಗೆ ಪ್ರಾಮಾಣಿಕ ಪೊಲೀಸರು ಬಲಿಯಾಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ಸಹೋದ್ಯೋಗಿಗಳೇ ಸತ್ತರೂ ಆರೋಪಿಗಳಿಗೆ ಕ್ಲೀನ್ ಚೀಟ್ ನೀಡುವ ಸಿಐಡಿ ಪೊಲೀಸರಿಗೆ ನಾಚಿಕೆ ಆಗಲ್ಲವೇ ಎಂದು ತಮ್ಮ ಆಕ್ರೋಶ ಹೊರಹಾಕಿದರು.