ಚೆನ್ನೈ: ಆಸ್ಟ್ರೇಲಿಯಾದ ಮಾಜಿ ಶೇನ್ ವಾಟ್ಸನ್ ಮತ್ತೊಮ್ಮೆ ಚೆನ್ನೈ ಜನರ ಮನ ಗೆದ್ದಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ಹಾಡನ್ನು ನುಡಿಸಿ ಪ್ರತಿಭೆಯನ್ನು ತೋರಿಸುವ ಮೂಲಕ.
ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ವೀಕ್ಷಕ ವಿವರಣಗಾರರಾಗಿ ಗುರುತಿಸಿಕೊಂಡಿರುವ ಆಸೀಸ್ ನ ಮಾಜಿ ಸ್ಪೋಟಕ ಆಟಗಾರ ಶೇನ್ ವಾಟ್ಸನ್ ರಾಜಸ್ಥಾನ್, ಆರ್ ಸಿಬಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಕೆಲ ವರ್ಷ ಐಪಿಎಲ್ ಪಂದ್ಯವನ್ನಾಡಿದ್ದರು.
ಚೆನ್ನೈ ತಂಡದಲ್ಲಿರುವ ವೇಳೆ ಅವರ ಆಟದಿಂದ ಚೆನ್ನೈ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದರು. ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ತಮಿಳು ವಾಹಿನಿಯ ಪ್ರಚಾರದ ವಿಡಿಯೋದಲ್ಲಿ ಶೇನ್ ವಾಟ್ಸನ್ ಅವರು ದಿಗ್ಗಜ ಇಳಯರಾಜ ಅವರ ಹಾಡೊಂದನ್ನು ಗಿಟಾರ್ ನಲ್ಲಿ ನುಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶೇನ್ ವಾಟ್ಸನ್ ಅವರು ವಿಶ್ವಕಪ್ 2023 ರ ವೀಕ್ಷಕ ವಿವರಣಗಾರರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಅವರು ಸ್ಟಾರ್ ಸ್ಪೋರ್ಟ್ಸ್ ತಮಿಳಿನ ಪ್ರಚಾರ ಸಂದರ್ಶನಕ್ಕಾಗಿ ಯೂಟ್ಯೂಬರ್ ಮದನ್ ಗೌರಿ ಅವರೊಂದಿಗೆ ವಿಡಿಯೋವೊಂದನ್ನು ಮಾಡಿದ್ದಾರೆ.
ನಿಮ್ಮಲ್ಲಿ ಏನಾದರೂ ವಿಶೇಷ ಪ್ರತಿಭೆಯಿದೆಯೇ ಎಂದು ಸಂದರ್ಶಕ ಕೇಳಿದ್ದಾರೆ. ಇದಕ್ಕೆ ವಾಟ್ಸನ್ ಅವರು ಗಿಟಾರ್ ತೆಗೆದುಕೊಂಡು ಇಳಯರಾಜ ಅವರ ‘ಎನ್ ಇನಿಯ ಪೊನ್ ನಿಲವೆ’ ಹಾಡನ್ನು ನುಡಿಸಿದ್ದಾರೆ.
ವಾಟ್ಸನ್ ಅವರ ತಮಿಳು ಪ್ರೇಮವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ‘ಏನ್ ಇನಿಯ ಪೊನ್ ನಿಲವೆ’ ಇಳಯರಾಜ ಸಂಯೋಜಿಸಿದ ಮತ್ತು ಕೆಜೆ ಯೇಸುದಾಸ್ ಹಾಡಿರುವ ಹಾಡು. ಈ ಹಾಡು ‘ಮೂಡು ಪಾನಿ’ ಎಂಬ ತಮಿಳು ಚಿತ್ರದದ ಹಾಡಾಗಿದೆ. 1980 ರಲ್ಲಿ ರಿಲೀಸ್ ಆದ ಈ ಸಿನಿಮಾದಲ್ಲಿ ಪ್ರತಾಪ್ ಪೋಥೆನ್ ಮತ್ತು ಶೋಭಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.