ವಾಡಿ: ಪಟ್ಟಣದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಂದಿಗಳ ಹಿಂಡಿನಂತೆ ನಾಯಿಗಳು ಸಹ ಹಿಂಡು-ಹಿಂಡಾಗಿ ಬಡಾವಣೆಗಳಲ್ಲಿ ಸಂಚರಿಸುವ ಮೂಲಕ ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.
ಮಾಂಸದಂಗಡಿ ವ್ಯಾಪಾರಿಗಳು ಬಿಸಾಡುವ ಮಾಂಸ ತ್ಯಾಜ್ಯಕ್ಕಾಗಿ ಕಾಯ್ದು ನಿಲ್ಲುತ್ತಿರುವ ಶ್ವಾನಗಳು ಸಂಜೆಯಾಗುತ್ತಿದ್ದಂತೆ ರಕ್ತದ ವಾಸನೆ ಹಿಡಿದು ಹೊರಡುತ್ತವೆ. ಪಟ್ಟಣ ಹೊರ ವಲಯದ ರೈಲ್ವೆ ಸ್ಲಿಪರ್ ಕಾರ್ಖಾನೆ ಸಮೀಪದ ವಾಡಿ-ರಾವೂರ ರಸ್ತೆ ಬದಿಯಲ್ಲಿ ಕುರಿ, ಕೋಳಿ ಹಾಗೂ ದನದ ಮಾಂಸದ ತ್ಯಾಜ್ಯವನ್ನು ಮೂಟೆಗಟ್ಟಲೆ ಬಿಸಾಡಲಾಗುತ್ತಿದೆ. ರಸ್ತೆಯುದ್ದಕ್ಕೂ ಹರಡಿಕೊಂಡು ಬೀಳುವ ಮಾಂಸದ ತುಂಡಿಗಾಗಿ ಸಂಘರ್ಷ ನಡೆಸುವ ಶ್ವಾನಗಳ ಹಿಂಡು ಕಚ್ಚಾಡಿ ತೊಗಲು ಹರಿಯುತ್ತವೆ. ಒಂದೆಡೆ ನಾಯಿಗಳ ಕಿರಿಕಿರಿ, ಮತ್ತೂಂದೆಡೆ ಮಾಂಸದ ದುರ್ವಾಸನೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಪಟ್ಟಣದಲ್ಲಿ ವೈಜ್ಞಾನಿಕ ಮಾಂಸ ಮಾರುಕಟ್ಟೆ ಕೊರತೆಯಿದ್ದು, ಎಲ್ಲೆಂದರಲ್ಲಿ ಬೀದಿಗಳಲ್ಲಿ ಮಾಂಸ ಮಾರಾಟ ನಡೆಯುತ್ತಿದೆ. ಸಂಜೆ ಉಳಿಯುವ ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ಎಸೆದು ರಕ್ತಪಿಪಾಸು ಶ್ವಾನಗಳ ಉಪಟಳಕ್ಕೆ ಈ ಮಾಂಸ ವ್ಯಾಪಾರಿಗಳೇ ಕಾರಣರಾಗಿದ್ದಾರೆ. ಗಲ್ಲಿ ರಸ್ತೆಗಳಲ್ಲಿ ಗುಂಪು-ಗುಂಪಾಗಿ ನಿಲ್ಲುವ ಬೀದಿ ನಾಯಿಗಳಿಂದ ಮಕ್ಕಳು ಹೆದರಿ ಮನೆ ಸೇರಿಕೊಳ್ಳುವಂತಾಗಿದೆ. ಮಾಂಸದ ರಕ್ತದ ರುಚಿ ನೋಡಿರುವ ನಾಯಿಗಳು ಮಕ್ಕಳತ್ತ ದುರುಗುಟ್ಟಿ ನೋಡುತ್ತಿದ್ದು, ಪೋಷಕರಲ್ಲಿ ಆತಂಕ ಉಂಟಾಗಿದೆ.
ಇತ್ತೀಚೆಗೆ ಬೀದಿನಾಯಿಗಳನ್ನು ಹಿಡಿಯಲು ಪ್ರಯತ್ನಿಸಿದ್ದ ಪುರಸಭೆ ಅಧಿ ಕಾರಿಗಳು, ಬಹುತೇಕ ನಾಯಿಗಳನ್ನು ಊರಲ್ಲೇ ಬಿಟ್ಟು ಬೆರಳೆಣಿಕೆಯಷ್ಟು ನಾಯಿ ಸಾಗಿಸಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಜನರ ನೆಮ್ಮದಿ ಕದಡಿರುವ ಹಂದಿ ಮತ್ತು ನಾಯಿಗಳನ್ನು ಸ್ಥಳಾಂತರಿಸುವ ಮೂಲಕ ಪುರಸಭೆ ಅಧಿ ಕಾರಿಗಳು ಮತ್ತು ಚುನಾಯಿತ ಸದಸ್ಯರು ನೆಮ್ಮದಿ ವಾತಾವರಣ ಕಲ್ಪಿಸಬೇಕು. ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯುವುದನ್ನು ತಡೆಗಟ್ಟಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ನಿಗದಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
-ಮಡಿವಾಳಪ್ಪ ಹೇರೂರ