Advertisement
ಶಾರದಾ ನಗರ: ಇಂದ್ರಾಣಿ ನದಿಗೆ ಸೇರು ತ್ತಿರುವ ನಗರದ ತ್ಯಾಜ್ಯ ನೀರು ಮತ್ತು ನಗರಸಭೆಯ ವಿವಿಧ ವೆಟ್‌ವೆಲ್‌ಗಳಿಂದ ಹೊರ ಹೋಗುವ ನೀರಿನಿಂದ ಉಡುಪಿ ನಗರದಲ್ಲಿ ಆಗಿರುವ ಅನಾಹುತ ಎಷ್ಟು?ಈ ಪ್ರಶ್ನೆಗೆ ಸದ್ಯಕ್ಕೆ ನಗರಸಭೆಯಲ್ಲಿ ಉತ್ತರವೇ ಇಲ್ಲ. ಎಲ್ಲ ವ್ಯವಸ್ಥೆ ಇದೆಯೇ ಎಂದು ಕೇಳಿದರೆ ಹೌದು ಎನ್ನುವುದಕ್ಕೆ ಎಲ್ಲವೂ ಇವೆ. ಯಾವುದು ಬಳಕೆಗೆ ಬರುತ್ತದೆ ಎಂದು ಮರು ಪ್ರಶ್ನಿಸಿದರೆ ಮೌನ.
ವೆಟ್‌ವೆಲ್‌ಗಳಿಂದ ಹೊರ ಹೋಗುವ ಶುದ್ಧೀಕರಿಸದ ನೀರು ಅನಾಹುತ ಸೃಷ್ಟಿಸುತ್ತಿರುವುದು ಇಂದೇನೂ ಅಲ್ಲ. ಇತ್ತೀಚೆಗೆ ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಸಮಿತಿಯೆಂಬುದೂ ಕ್ರಿಯಾಶೀಲವಾಗಿ ಹೋರಾಟ ನಡೆಸಿತು.
Related Articles
Advertisement
ಬಳಕೆದಾರರ ವೇದಿಕೆಯ ವತಿಯಿಂದಲೂ ಹಲವು ವರ್ಷಗಳ ಹಿಂದೆಯೇ ಇದನ್ನು ನಗರಸಭೆ ಗಮನಕ್ಕೆ ತರಲಾಗಿತ್ತು. ಅದ್ಯಾವುದಕ್ಕೂ ಉತ್ತರ ಸಿಗಲಿಲ್ಲ. ಈ ಮಧ್ಯೆ ಆಗಿದ್ದೆಂದರೆ 100 ಕೋಟಿ ರೂ. ವೆಚ್ಚದಲ್ಲಿ ಎಡಿಬಿಯೋಜನೆಯಡಿ ಕೆಲವು ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಅವುಗಳೂ ಐದೇ ವರ್ಷಗಳಲ್ಲಿ ಹಾಳಾಗಿ, ಕೊಳಚೆ ನೀರು ಬಾವಿಗಳನ್ನು ಮತ್ತು ವಸತಿ ಪ್ರದೇಶವನ್ನು ಹಾಳು ಮಾಡುತ್ತಿದೆ. ಅದನ್ನು ಕೇಳುವವರೂ ಇಲ್ಲ. ಕುಡಿಯಲು ಬಾಟಲಿ ನೀರು
ನದಿ ಹರಿಯುವ ಶಾರದಾ ಕಲ್ಯಾಣ ಮಂಟಪ ಪ್ರದೇಶ (ಕುಂಜಿಬೆಟ್ಟು ವಾರ್ಡ್)ದ ಕೆಲವು ಬಾವಿಗಳ ನೀರು ಕುಡಿಯುವಂತಿಲ್ಲ. ಸ್ಥಳೀಯರಾದ ಸತೀಶ್ ಹೇಳುವಂತೆ, “ಮೊದಲು ಹೀಗಿರಲಿಲ್ಲ. ಇತ್ತೀಚಿನ ವರ್ಷ ಗಳಲ್ಲಿ ಈ ಸಮಸ್ಯೆ ಆರಂಭವಾಗಿದೆ. ನಮ್ಮ ಬಾವಿ ನೀರೂ ಹಾಳಾಗಿದೆ. ಕುಡಿಯಲು ಯೋಗ್ಯವಿಲ್ಲ. ಕುದಿಸಿ ಆರಿಸಿ ಕುಡಿದರೂ ಕಷ್ಟ. ಹಾಗಾಗಿ ನಿತ್ಯವೂ 20 ಲೀ. ಬಾಟಲಿ ನೀರು ಬಳಸುವಂತಾಗಿದೆ’ ಎಂದರು. ಈ ಕಥೆ ಒಬ್ಬರದಲ್ಲ. ಅಲ್ಲಿಂದ ಕಲ್ಮಾಡಿವರೆಗೆ ಹೋದರೂ ಇದೇ ಸಮಸ್ಯೆ. ಮಠದಬೆಟ್ಟುವಿನಿಂದ ಕಲ್ಮಾಡಿವರೆಗೆ ಹಾಳಾದ ಬಾವಿಗಳ ಸಂಖ್ಯೆಗೆ ಹೋಲಿಸಿದರೆ ಶಾರದಾ ಕಲ್ಯಾಣ ಮಂಟಪ ಪ್ರದೇಶದಲ್ಲಿ ಕೊಂಚ ಕಡಿಮೆ. ಆದರೆ ಮಠದಬೆಟ್ಟು, ಅಡ್ಕದಕಟ್ಟೆ, ಕೊಡಂಕೂರು, ಕೊಡವೂರು, ಮಧ್ವ ನಗರ, ಕಂಬಳಕಟ್ಟ ಒಂದೇ ಎರಡೇ. ನದಿ ಹರಿದು ಹೋಗುವ ಉದ್ದಕ್ಕೂ ಬಾವಿಗಳು ಹಾಳಾಗಿವೆ, ಕೃಷಿ ಪ್ರದೇಶ ಹಾಳಾಗಿದೆ. ಕೆರೆಗಳು ಹಾಳಾಗಿವೆ, ಹಲವು ಪ್ರದೇಶಗಳ ಭೂ ಬೆಲೆಯೂ ಬಿದ್ದು ಹೋಗಿದೆ. ಈ ಪ್ರದೇಶಗಳಲ್ಲಿ ಎರಡು ಬಗೆಯ ಅನಾಹುತಗಳಾಗಿವೆ. ಮೊದಲನೆಯದು ನದಿಯ ಹರಿದು ಹೋಗುವ ಹತ್ತಿರದ ಪ್ರದೇಶಗಳಲ್ಲಿ ತ್ಯಾಜ್ಯ ನೀರಿನ ಕಾರಣದಿಂದ ಬಾವಿ ನೀರು ಹಾಳಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಒಳಚರಂಡಿ ಸೋರಿಕೆಯಾಗಿ ಬಾವಿಗಳು ಹಾಳಾಗಿವೆ. ಆ ಪ್ರದೇಶದ ನೀರಿನಲ್ಲಿ ಸ್ವಾವಲಂಬಿಯಾಗಿದ್ದವರು ಈಗ ನಗರಸಭೆಯನ್ನು ಆಶ್ರಯಿಸುವಂತಾಗಿದೆ. ಕೆಲವರಿಗೆ ಇನ್ನೂ ನಗರಸಭೆ ನಳ್ಳಿ ನೀರು ಸಂಪರ್ಕ ಸಿಕ್ಕಿಲ್ಲ. ಇನ್ನೂ ಹಲವರು ಅದೂ ಇಲ್ಲದೆ, ಇದೂ ಇಲ್ಲದೇ ಮತ್ತೂಬ್ಬರ ನೀರನ್ನು ನಂಬಿ ಬದುಕುತ್ತಿದ್ದಾರೆ. ಕಂಬಳಕಟ್ಟದ ಬಳಿ ಹೆಸರು ಹೇಳಲಿಚ್ಛಿಸದ ಒಬ್ಬರು, “ನಮ್ಮದೇನೂ ಇಲ್ಲ ಸ್ವಾಮಿ. ದೂರು ಕೊಡುವಷ್ಟು ಕೊಟ್ಟೆವು. ಪ್ರಯೋಜನವಾಗಲಿಲ್ಲ. ನಮ್ಮ ಬಾವಿ ನೀರು ಕೆಂಪಾಗಿ ಹಾಳಾಗಿದೆ. ಕುಡಿಯಲು ನೀರು ಬೇಕೆಂದರೆ ಬೇರೆಯವರ ಮನೆಗೆ ಹೋಗಬೇಕು. ವಿಧಿಯಿಲ್ಲದೆ ಅದನ್ನೇ ಒಪ್ಪಿಕೊಂಡಿದ್ದೇವೆ’ ಎಂದು ವಿವರಿಸುತ್ತಾರೆ. ಮತ್ತೂಂದು ಕಡೆ ಹೋದಾಗ ಮನೆಯವರು ಸಮಸ್ಯೆಯನ್ನು ಹೇಳಿ, ಬರೆಯಬೇಡಿ, ಕಿರಿಕಿರಿ ಆರಂಭವಾಗುತ್ತದೆ ಎಂದರು. ಮತ್ತೇನೂ ಮಾತನಾಡಲು ಇಚ್ಛಿಸಲಿಲ್ಲ. ಯಾಕೆಂದರೆ, ಹಿಂದೆ ಕೆಲವು ಪ್ರಸಂಗಗಳಲ್ಲಿ ತ್ಯಾಜ್ಯ ನೀರಿನಿಂದ ಉಂಟಾದ ಸಮಸ್ಯೆ ವಿವರಿಸಿದ್ದಕ್ಕೆ ಉಪದ್ರವ ಕೊಟ್ಟ ಆರೋಪವೂ ಅಧಿಕಾರಿಗಳ ಮೇಲಿದೆ. ಖಾಸಗಿ ಸಮೀಕ್ಷೆ ಏನು ಹೇಳುತ್ತದೆ?
ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಸಮಿತಿ ಯವರು 2 ವರ್ಷಗಳ ಹಿಂದೆ ಹಾಳಾದ ಬಾವಿಗಳ ಕುರಿತು ಒಂದು ಸಮೀಕ್ಷೆ ನಡೆಸಿದರು. ಅದರ ಮಾಹಿತಿ ಪ್ರಕಾರ ನಿಟ್ಟೂರಿನಿಂದ ಕಲ್ಮಾಡಿ ಕಟ್ಟದವರೆಗೆ 300ಕ್ಕೂ ಹೆಚ್ಚು ಬಾವಿಗಳು ಬಳಕೆಗೆ ಅಯೋಗ್ಯವಾಗಿವೆ. ಬಾವಿ ಹಾಳಾದ ಪ್ರದೇಶಗಳು
ಶಾರದಾ ಕಲ್ಯಾಣ ಮಂಟಪದ ಕೆಲವು ಕಡೆ, ಮಠದಬೆಟ್ಟು, ಮೂಡುತೋಟ, ಅಡ್ಕದ ಕಟ್ಟೆ, ನಿಟ್ಟೂರು, ಕೊಡಂಕೂರು, ಸಾಯಿಬಾಬಾ ನಗರ, ಕಂಬಳಕಟ್ಟ, ಮಧ್ವ ನಗರ, ಗರೋಡಿ, ಕಾವೇರಿಯಡಿ, ಬೊಬ್ಬರ್ಯಅಡಿ, ಚನ್ನಂಗಡಿ, ಕೊಡವೂರು ತೋಟ, ಮೂಡುಬೆಟ್ಟು, ಕೊಡವೂರು, ಕಲ್ಮಾಡಿ ಕಟ್ಟದ ಬುಡ. ಮಾಹಿತಿ ಕೊಟ್ಟರೆ ಅನುಕೂಲ
ಬಾವಿ ಹಾಳಾಗಿದ್ದರೆ ನಗರಸಭೆಗೆ ಬಂದು ದೂರು ಕೊಟ್ಟರೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಜತೆಗೆ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಜನರೇ ಬಂದು ಮಾಹಿತಿ ನೀಡಿದರೆ ಸಮೀಕ್ಷೆ ನಡೆಸಲೂ ನಮಗೆ ಅನುಕೂಲವಾಗುತ್ತದೆ.
– ಮೋಹನ್‌ರಾಜ್, ಎಇಇ, ನಗರಸಭೆ