Advertisement

ಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

09:55 PM Sep 29, 2020 | mahesh |

ಉಡುಪಿ: ನಗರದ ಕೆಲವು ಬೃಹತ್‌ ಕಟ್ಟಡಗಳಲ್ಲಿ ಕೊಳಚೆಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ, ನೇರವಾಗಿ ಮಳೆನೀರು ಹರಿಯುವ ಚರಂಡಿಗೆ ಬಿಡಲಾಗುತ್ತಿದೆ ಎಂಬ ಆರೋಪಗಳಿವೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಅದರ ಜತೆ ಕೊಳಚೆ ಸಮಸ್ಯೆಯೂ ಸೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

Advertisement

ನಗರಸಭೆ ಕ್ರಮ?
ನಗರದ ಹೃದಯಭಾಗದ ಹೊಟೇಲ್‌, ಅಂಗಡಿ, ವಸತಿ ಕಟ್ಟಡಗಳು ಕೊಳಚೆ ನೀರು ವಿಲೇವಾರಿಗೆ ಡ್ರೈನೇಜ್‌ ಸಂಪರ್ಕ ಪಡೆದುಕೊಂಡಿಲ್ಲ. ಇದರಿಂದಾಗಿ ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನೀರಿನ ಒಳಚರಂಡಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಹಿಂದೊಮ್ಮೆ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿ ಅನಧಿಕೃತವಾಗಿ ತೋಡಿಗೆ ಬಿಟ್ಟಿದ್ದ ಕೆಲವು ವಾಣಿಜ್ಯ ಮಳಿಗೆ ಮಾಲಕರಿಗೆ ನೋಟಿಸ್‌ ನೀಡಿದ್ದರು. ಉಡುಪಿ ನಗರವನ್ನು ಸುಂದರ ನಗರವನ್ನಾಗಿ ಮಾಡುವ ಕನಸು ಕಂಡ ನಗರಾಡಳಿತ ಉಡುಪಿಯ ಭವಿಷ್ಯಕ್ಕಾಗಿ ಕೆಲವೊಂದು ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ತ್ಯಾಜ್ಯ ನೀರಿನ ಸಮರ್ಪಕ ವಿಲೇವಾರಿಗೆ ಆದೇಶಿಸಿ ಪಾರ್ಕಿಂಗ್‌ ಸ್ಥಳ ಮತ್ತು ಸೆಲ್ಲಾರ್‌ನಲ್ಲಿ ಅನಧಿಕೃತವಾಗಿ ಅಂಗಡಿ ಮಾಡಿಕೊಂಡವರನ್ನು ಪತ್ತೆ ಹಚ್ಚಬೇಕು. ಜತೆಗೆ ಎಲ್ಲ ಕಟ್ಟಡಗಳು ತ್ಯಾಜ್ಯ ನೀರನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಆದೇಶ ಹೊರಡಿಸಬೇಕಾಗಿದೆ.

ರಸ್ತೆ ಮೇಲೆ ಕೊಳಚೆ ನೀರು
ಮಲ್ಪೆ- ಮಣಿಪಾಲ ಮಾರ್ಗದ ರಾಷ್ಟ್ರೀಯ ಹೆದ್ದಾರಿ 169 ಎ ಸೇರಿ ದಂತೆ ನಗರದ ವಿವಿಧ ಮುಖ್ಯರಸ್ತೆ ಸಮೀಪದಲ್ಲಿರುವ ಕೆಲವು ಸಂಕೀರ್ಣಗಳು ಕೊಳಚೆ ನೀರನ್ನು ಮಳೆ ನೀರು ಹರಿಯುವ ಚರಂಡಿ, ತೋಡುಗಳಿಗೆ ಬಿಡುತ್ತಿದ್ದಾರೆ ಎನ್ನುವ ಆರೋಪ ಹಲವು ಸಮಯಗಳಿಂದ ಕೇಳಿಬರುತ್ತಿದೆ. ಆದರೆ ಮಳೆಗಾಲದಲ್ಲಿ ವಾಣಿಜ್ಯ ಕಟ್ಟಡಗಳು ಕೊಳಚೆ ನೀರನ್ನು ನೇರವಾಗಿ ರಸ್ತೆ ಮೇಲೆ ಹರಿಸುತ್ತವೆ ಎಂಬ ಆರೋಪವೂ ಇದೆ.

ಸೆಲ್ಲರ್‌ಗಳಲ್ಲಿ ಅಂಗಡಿ ನಿರ್ಮಾಣ
ನಗರದಲ್ಲಿ ಹೆಚ್ಚಿನ ವಾಣಿಜ್ಯ ಕಟ್ಟಡ ಗಳು ನಗರಸಭೆಯಿಂದ ಪರವಾನಿಗೆ ಪಡೆದುಕೊಳ್ಳುವ ತನಕ ಸೆಲ್ಲರ್‌, ಪಾರ್ಕಿಂಗ್‌ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಇತ್ಯಾದಿ ಕುರಿತ ಸ್ಪಷ್ಟ ಚಿತ್ರವನ್ನು ಕಟ್ಟಡ ನಕ್ಷೆಯಲ್ಲಿ ಕಾಣಿಸುತ್ತಾರೆ. ಕಟ್ಟಡಕ್ಕೆ ಲೈಸೆನ್ಸ್‌ ದೊರೆತ ತತ್‌ಕ್ಷಣ ಸೆಲ್ಲರ್‌ ಮತ್ತು ವಾಹನ ಪಾರ್ಕಿಂಗ್‌ ಪ್ರದೇಶ ಅಂಗಡಿಗಳಾಗಿ ಪರಿವರ್ತನೆ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ಇಂತಹ ಸ್ಥಳಗಳೇ ಮೊನ್ನೆಯ ವರುಣನ ಅರ್ಭಟಕ್ಕೆ ಅತಿ ಹೆಚ್ಚಿನ ಸಮಸ್ಯೆಯನ್ನು ಅನುಭವಿಸಿವೆ.

Advertisement

ನಗರಸಭೆಯಿಂದ ನೋಟಿಸ್‌
ಕೊಳಚೆ ನೀರು ಮಳೆ ನೀರು ಒಳಚರಂಡಿ ಹಾಗೂ ರಸ್ತೆಗಳ ಮೇಲೆ ಹರಿ ಬಿಡುತ್ತಿರುವುದು ಕಂಡು ಬಂದರೆ, ಕಟ್ಟಡ ಮಾಲಿಕರಿಗೆ ಪ್ರಾಥಮಿಕ ಹಂತದಲ್ಲಿ ತ್ಯಾಜ್ಯ ನೀರು ಸಮರ್ಪಕ ವಿಲೇವಾರಿಗೆ ಮಾರ್ಗವನ್ನು ಕಂಡುಕೊಳ್ಳುವಂತೆ ಆದೇಶಿಸಲಾಗುತ್ತದೆ. ಅನಂತರವೂ ಅವರು ಪರ್ಯಾಯ ಮಾರ್ಗ ಕಂಡುಕೊಳ್ಳದೆ ಇದ್ದರೆ ಅವರಿಗೆ ನಗರಸಭೆಯಿಂದ ನೋಟಿಸ್‌ ನೀಡಲಾಗುತ್ತದೆ.
-ಸ್ನೇಹ, ಪರಿಸರ ಎಂಜಿನಿಯರ್‌, ನಗರಸಭೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next