Advertisement

ತ್ಯಾಜ್ಯ ಸಮಸ್ಯೆ; ರೋಗ ಭೀತಿಯಲ್ಲಿ ಜನತೆ

10:22 PM Jun 13, 2019 | Sriram |

ವಿದ್ಯಾನಗರ : ತ್ಯಾಜ್ಯ ಸಮಸ್ಯೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿದ್ದು ಮಳೆಗಾಲದ ಪ್ರಾರಂಭದೊಂದಿಗೆ ಜನರಲ್ಲಿ ರೋಗಭೀತಿಯೂ ಪ್ರಾರಂಭವಾಗಿದೆ. ಪ್ಲಾಸಿಕ್‌ ತ್ಯಾಜ್ಯದಿಂದಾಗಿ ಅಲ್ಲಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಅನುವುಮಾಡಿಕೊಟ್ಟಂತಾಗಿದೆ.

Advertisement

ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವಿರುವ ತ್ಸುನಾಮಿ ಕ್ವಾರ್ಟರ್ಸ್‌ ಪರಿಸರದಲ್ಲಿ ತ್ಯಾಜ್ಯಗಳನ್ನು ಉಪೇಕ್ಷಿಸುತ್ತಿರುವುದಾಗಿ ಸಾರ್ವಜನಿಕರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್‌ ಮಾಲಿನ್ಯ, ಗೃಹಮಾಲಿನ್ಯ, ಅನ್ನವೂ ಸೇರಿದಂತೆ ಆಹಾರ ವಸ್ತುಗಳ ತ್ಯಾಜ್ಯಗಳನ್ನು ಈ ಪರಿಸರದಲ್ಲಿ ಸತತವಾಗಿ ಉಪೇಕ್ಷಿಸಲಾಗುತ್ತಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ. ಮಳೆ ಪ್ರಾರಂಭವಾದುದರಿಂದ ಈ ತ್ಯಾಜ್ಯಗಳು ಕೊಳೆಯಲಾರಂಭಿಸಿದ್ದು ಪ್ರದೇಶದಲ್ಲಿ ಕೆಟ್ಟ ವಾಸನೆ ಆವರಿಸಿದೆ. ಮಾತ್ರವಲ್ಲದೆ ರೋಗ ಭೀತಿಯೂ ಕಾಡಲಾರಂಭಿಸಿದೆ. ಇಂತಹ ಕಡೆಗಳಲ್ಲಿ ಸಾಂಕ್ರಾಮಿಕ ರೋಗಗಳು ಸುಲಭದಲ್ಲಿ ಹರಡುವ ಸಾಧ್ಯತೆ ಇರುವುದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಈಗಾಗಲೇ ಇದೊಂದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಬದಲಾಗಿದ್ದು ಮುಂದೆ ಡೆಂಗ್ಯೂ. ಮಲೇರಿಯಾದಂತಹ ರೋಗಗಳನ್ನು ಹರಡುವ ಸೊಳ್ಳೆಗಳೂ ಇಲ್ಲಿ ಉತ್ಪತ್ತಿಯಾಗಿ ಸುತ್ತುಮುತ್ತಲ ಪ್ರದೇಶಗಳಿಗೂ ರೋಗ ಹರಡುವ ಸಾಧ್ಯತೆಯನ್ನು ಹೆಚ್ಚಿಸಿದೆ. ಪರಿಸರ ಮಾಲಿನ್ಯವನ್ನು ತಡೆದು ಈ ಭಾಗದ ಜನರ ಆರೋಗ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕ ಪ್ರತಿಭಟನೆಗೆ ಮುಂದಾಗುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next