Advertisement

ಫ‌ರಂಗಿಪೇಟೆಯಲ್ಲಿ ತ್ಯಾಜ್ಯ ರಾಶಿಯ ಸಮಸ್ಯೆ

12:34 AM Jun 29, 2019 | Team Udayavani |

ಬಂಟ್ವಾಳ: ಪುದು ಗ್ರಾ.ಪಂ. ಕೇಂದ್ರ ಫರಂಗಿಪೇಟೆಯಲ್ಲಿ ಅಶುಚಿತ್ವದ ಮೀನು ಮಾರುಕಟ್ಟೆ, ಫ್ಲಾ ್ಯಟ್ ನಿವಾಸಿಗಳು ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವುದು, ಹೊಟೇಲ್, ಅಂಗಡಿಗಳ ತ್ಯಾಜ್ಯವನ್ನು ಜನ ಸಂಚಾರದ ಸ್ಥಳದಲ್ಲಿ ಹಾಕುವ ಮೂಲಕ ನಗರವು ಆಕರ್ಷಣೆ ಕಳೆದುಕೊಂಡಿದೆ.

Advertisement

ಜನಸಾಮಾನ್ಯರು ಫರಂಗಿಪೇಟೆ ಎಂದಾಕ್ಷಣ ಎರಡು ಚಿತ್ರಣಗಳನ್ನು ಕಲ್ಪಿಸಿ ಕೊಳ್ಳುತ್ತಾರೆ. ಒಂದು ಸಾಮಾಜಿಕ ಆರೋಗ್ಯದ ಬಗೆಗಿನ ಸಂಘಟನೆಯೊಂದರ ಸೇವೆ. ಇನ್ನೊಂದು ಇಲ್ಲಿನ ತ್ಯಾಜ್ಯದ ಸಮಸ್ಯೆ ಬೃಹತ್ತಾಗಿ ಬೆಳೆದಿರುವುದು.

ಅಶುಚಿತ್ವಕ್ಕೆ ಗ್ರಾ.ಪಂ. ವ್ಯಾಪ್ತಿಯ ಕೆಲವು ಫ್ಲಾ ್ಯಟ್ ನಿವಾಸಿಗಳ ಕೊಡುಗೆ ಇದೆ ಎನ್ನುವುದನ್ನು ಗ್ರಾ.ಪಂ. ಆಡಳಿತ ಒಪ್ಪುತ್ತದೆ. ಹಾಗೆಂದು ಕ್ರಮ ಕೈಗೊಂಡಿಲ್ಲ ಎಂದಲ್ಲ. ಅದರ ಅನುಷ್ಠಾನದಲ್ಲಿ ನಿರಂತರ ಪ್ರಯತ್ನ ಇದ್ದಾಗ ಜನರು ನಿಧಾನವಾಗಿ ಸ್ವಚ್ಛತೆಗೆ ಒಗ್ಗುತ್ತಾರೆ.

ನಿರಂತರ ಕಿರಿಕ್‌
ಇಲ್ಲಿ ಕೆಲವು ಫ್ಲ್ಯಾಟ್‌ಗಳ ನಿವಾಸಿಗಳು ರಸ್ತೆಗೆ ತ್ಯಾಜ್ಯ ಎಸೆಯುವುದು, ರಸ್ತೆ ಮೂಲೆ ಯಲ್ಲಿ ತ್ಯಾಜ್ಯ ತಂದಿರಿಸಿ ಹೋಗುವುದು, ಸೇತುವೆ ಬದಿಯಲ್ಲಿ ಹಾಕುವುದು ಹೀಗೆ ನಿರಂತರವಾಗಿ ಕಿರಿಕ್‌ ನೀಡುತ್ತಲೇ ಇದ್ದಾರೆ.

ಒಂದು ಕಾಲದಲ್ಲಿ ನಗರ ಪ್ರದೇಶ ತ್ಯಾಜ್ಯಗಳ ರಾಶಿಯಿಂದ ತುಂಬಿಕೊಂಡಿತ್ತು. ತ್ಯಾಜ್ಯ ರಾಶಿ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ಆಲೋಚನೆಯಿಂದ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಲವಾರು ಜನಪರ ಕಾರ್ಯ ಸಹಿತ ಮನೆ ಮನೆಗೆ ತ್ಯಾಜ್ಯ ಪಡೆಯಲು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಾಸಿಕವಾಗಿ 50 ರೂ. ಶುಲ್ಕ ವಿಧಿಸಿದ್ದು, ಗ್ರಾಮದ ಮನೆಗಳು, ಅಂಗಡಿದಾರರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ.

Advertisement

ರೈಲ್ವೇ ಜಾಗವೇ ಡಂಪಿಂಗ್‌ ಯಾರ್ಡ್‌

ಫರಂಗಿಪೇಟೆ ನಗರದ ಒಂದು ಬದಿಯಲ್ಲಿರುವ ರೈಲ್ವೇ ಇಲಾಖೆಯ ಸ್ಥಳವೇ ಹೆಚ್ಚಿನ ಫ್ಲ್ಯಾಟ್‌ಗಳ ನಿವಾಸಿಗಳಿಗೆ ತ್ಯಾಜ್ಯ ಹಾಕುವ ಕೇಂದ್ರವಾಗಿದೆ. ಕೆಲವು ತಿಂಗಳುಗಳ ಹಿಂದೆ ಹೆದ್ದಾರಿ ಬದಿಯಲ್ಲಿರುವ ಮೀನು ಮಾರ್ಕೇಟನ್ನು ರೈಲ್ವೇ ಇಲಾಖೆ ತೆರವುಗೊಳಿಸಿ ತಂತಿ ಬೇಲಿಗಳನ್ನು ಹಾಕಿದೆ. ಈಗ ಅದು ದೊಡ್ಡ ಮಟ್ಟದಲ್ಲಿ ತ್ಯಾಜ್ಯ ಸಂಗ್ರಹ ಘಟಕವಾಗಿ ಪರಿಣಮಿಸಿದೆ. ಪಕ್ಕದಲ್ಲಿಯೇ ದೇವಸ್ಥಾನ ಇದ್ದರೂ ಅದರ ಬಗ್ಗೆ ಯಾರಿಗೂ ಗಮನವಿಲ್ಲ. ಮಾರುಕಟ್ಟೆ ತೆರವು ಮಾಡಿದ ರೈಲ್ವೇ ಇಲಾಖೆ ಬಳಿಕ ತನ್ನ ಅಧೀನ ಸ್ಥಳಕ್ಕೆ ಭದ್ರತೆ ರೂಪಿಸುವಲ್ಲಿ ವಿಫಲವಾಗಿದೆ.

ಭದ್ರತೆ ಅಗತ್ಯ
ಫರಂಗಿಪೇಟೆಯಲ್ಲಿ ರೈಲ್ವೇ ಜಮೀನು ತ್ಯಾಜ್ಯದ ತೊಟ್ಟಿ ಆಗುತ್ತಿದೆ ಎಂಬ ದೂರು ಗಮನಿಸಿದ್ದೇವೆ. ಸದ್ರಿ ತೆರವು ಜಮೀನಿಗೆ ಸೂಕ್ತ ರೀತಿಯಲ್ಲಿ ಭದ್ರತೆ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಅರಿವಿನ ಕೊರತೆ ಇರುವ ವ್ಯಕ್ತಿಗಳು ತ್ಯಾಜ್ಯ ತಂದು ಎಸೆಯುವ ಮೂಲಕ ನೈರ್ಮಲ್ಯಕ್ಕೆ ಹಾನಿ ಆಗುತ್ತಿದೆ. ಈ ಬಗ್ಗೆ ಪಂ.ಆಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ. – ಪ್ರೇಮಲತಾ ಪಂ. ಅ. ಅಧಿಕಾರಿ, ಪುದು ಗ್ರಾ.ಪಂ.

ಸ್ವಚ್ಛತೆಗೆ ಸಮರ್ಪಕವಾಗಿ ಸ್ಪಂದಿಸಬೇಕು

ಸ್ವಚ್ಛ ಪಂ. ಯೋಜನೆ ಅನುಷ್ಠಾನಕ್ಕೆ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ. ಪಂ.ನಿಂದ ಮನೆ ಮನೆಗೆ ಹೋಗಿ ವಾಹನದಲ್ಲಿ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ತಿಂಗಳಿಗೊಮ್ಮೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಅಭಿಯಾನ ಮಾಡುತ್ತಾ ಬಂದಿದ್ದೇವೆ. ಮುಖ್ಯವಾಗಿ ಫ್ಲಾ ್ಯಟ್‌ಗಳಲ್ಲಿ ವಾಸ್ತವ್ಯ ಇರುವವರು ಸ್ವಚ್ಛತೆ ಬಗ್ಗೆ ಸಮರ್ಪಕವಾಗಿ ಸ್ಪಂದಿಸಬೇಕು. ಮುಂದಿನ ದಿನಗಳಲ್ಲಿ ಅವರ ಮನವೊಲಿಸಿ ತ್ಯಾಜ್ಯಗಳನ್ನು ಶೇಖರಿಸಿಟ್ಟು ಗ್ರಾ.ಪಂ. ವಾಹನಕ್ಕೆ ನೀಡಲು ತಿಳಿಸಲಾಗುವುದು.
– ರಮ್ಲಾನ್‌ ಮಾರಿಪಳ್ಳ , ಅಧ್ಯಕ್ಷರು

ಪುದು ಗ್ರಾಮ ಪಂಚಾಯತ್‌
Advertisement

Udayavani is now on Telegram. Click here to join our channel and stay updated with the latest news.

Next