ಮಲ್ಪೆ: ತೊಟ್ಟಂ- ಬಡಾನಿಡಿಯೂರು ಸಂಪರ್ಕ ಸೇತುವೆಯ ಕೆಳಭಾಗದಲ್ಲಿ ತ್ಯಾಜ್ಯರಾಶಿಗಳು ತುಂಬಿಕೊಂಡು ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ನೀರು ಹರಿಯುವ ಈ ಬೃಹತ್ ತೋಡಿನಲ್ಲಿ ದಿಬ್ಬದ ರೀತಿಯಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು ವಿಲೇವಾರಿ ಆಗುತ್ತಿಲ್ಲ. ಪರಿಸರವಿಡೀ ದುರ್ನಾತ ಬೀರುತ್ತಿದೆ.
ರಸ್ತೆಯಲ್ಲಿ ಸಂಚರಿಸುವವರು ವಾಹನಗಳಲ್ಲಿ ಬಂದು ಇಲ್ಲಿ ಎಸೆದು ಹೋಗುತ್ತಾರೆ. ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಅನ್ನದ ಹಾಳೆ ಇಲ್ಲಿನ ಏನುಂಟು ಏನಿಲ್ಲ ಎಂದು ಹೇಳಲು ಅಸಾಧ್ಯ. ರಾತ್ರಿ ಹೊತ್ತು ಬಂದು ಕಸ ಸುರಿದು ಹೋಗುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಕಸ ವಿಲೇವಾರಿಗೆ ಸಂಬಂಧಿಸಿದ ಆಡಳಿತ ಮುಂದಾಗುತ್ತಿಲ್ಲ. ಕಾರಣ ಸೇತುವೆ ಒಂದು ಮಗ್ಗಲು ತೆಂಕನಿಡಿಯೂರು ಗ್ರಾ.ಪಂ. ವ್ಯಾಪ್ತಿಗೆ ಸೇರಿದರೆ, ಇನ್ನೊಂದು ಮಗ್ಗಲು ಬಡಾನಿಡಿಯೂರು ಗ್ರಾ.ಪಂ. ಗೆ ಸೇರಿದೆ. ತ್ಯಾಜ್ಯ ಮಳೆನೀರಿಗೆ ಕೊಳೆತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ತತ್‌ಕ್ಷಣ ಕ್ರಮ ಅಗತ್ಯ
ಈ ರೀತಿ ಕಸ ಬಿಸಾಡುವುದು ಸರಿಯಲ್ಲ. ಸೊಳ್ಳೆ, ನೊಣಗಳ ಕಾಟ ಹೆಚ್ಚಿದೆ. ಸಾಂಕ್ರಾಮಿಕ ರೋಗ ಭೀತಿ ಇದೆ. ತತ್‌ಕ್ಷಣ ಕಸ ವಿಲೇವಾರಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.
-ಬಿ. ವಾಸು ಪೂಜಾರಿ, ಸ್ಥಳೀಯರು