ಮೈಸೂರು: ಸ್ವತ್ಛತೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಗಮನ ಹರಿಸಬೇಕಾದ ಗ್ರಾಮ ಪಂಚಾಯಿತಿ ಖಾಲಿ ನಿವೇಶನದಲ್ಲಿ ತ್ಯಾಜ್ಯ ಸುರಿದು, ಬೆಂಕಿಯಿಟ್ಟು ಸುಡುತ್ತಿದೆ. ಇದರಿಂದ ಸ್ಥಳೀಯರು ತಮ್ಮ ಮನೆಗಳಲ್ಲಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ದೇಶದೆಲ್ಲೆಡೆ ಸ್ವತ್ಛ ಭಾರತ್ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡುವುದಲ್ಲದೇ ಸಾರ್ವಜನಿಕರಿಗೆ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಆದರೆ, ಇದಕ್ಕೆ ಮೈಸೂರು ತಾಲೂಕಿನ ಇಲವಾಲ ಗ್ರಾಪಂ ತದ್ವಿರುದ್ಧವಾಗಿದ್ದು, ಸಂಗ್ರಹಿಸಿದ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಸ್ಥಳೀಯ ಜನರು ಮತ್ತು ಸಂರಕ್ಷಿತ ಅರಣ್ಯಕ್ಕೆ ಸಮಸ್ಯೆ ತಂದೊಡ್ಡಿದೆ.
ಮೈಸೂರು ತಾಲೂಕಿನ ಇಲವಾಲ ಗ್ರಾಮ ಪಂಚಾಯಿತಿಯು ತನ್ನ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಕಸವನ್ನು ನಿತ್ಯ ಚಿಕ್ಕೇಗೌಡನ ಕೊಪ್ಪಲು ಗ್ರಾಮದ ಬಳಿಯ ನಾಗವಾಲ ರಸ್ತೆ ಜಂಕ್ಷನ್ ಬಳಿ ಇರುವ ಖಾಲಿ ನಿವೇಶನದಲ್ಲಿ ವಿಲೇವಾರಿ ಮಾಡುತ್ತಿರುವುದಲ್ಲದೇ, ಅದು ದೊಡ್ಡ ರಾಶಿಯಾಗುವುದನ್ನು ತಪ್ಪಿಸಲು ಪ್ರತಿದಿನ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಹೊಗೆ ಮತ್ತು ದುರ್ವಾಸನೆ ಸಹಿಸಿಕೊಂಡು, ಉಸಿರುಗಟ್ಟುವ ವಾತಾವರಣ ದಲ್ಲಿಯೇ ಬದುಕು ದೂಡುವಂತಾಗಿದೆ.
ಶುದ್ಧ ಗಾಳಿಯೇ ಇಲ್ಲ: ಕಳೆದ ನಾಲ್ಕೈದು ತಿಂಗಳಿನಿಂದ ಗ್ರಾಪಂ ನೌಕರರು ಆಟೋ, ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮೂಲಕ ಕಸ ತಂದು ಸುರಿದು ಬೆಂಕಿ ಹಚ್ಚಿ ಹೋಗುತ್ತಿದ್ದಾರೆ. ಪರಿಣಾಮ ಸುತ್ತಲಿನ ಪ್ರದೇಶ ಪ್ಲಾಸ್ಟಿಕ್, ಟಯರ್, ಫೈಬರ್ ಹೊಗೆಯಿಂದ ಆವೃತವಾಗಿದ್ದು, ಸ್ಥಳೀಯ ನಿವಾಸಿಗಳು ಮನೆಯಲ್ಲಿ ವಾಸ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ನಿವೃತ್ತ ಕಾವಾ ಡೀನ್ ವಿ.ಎ. ದೇಶಪಾಂಡೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಗ್ರಾಮ ಪಂಚಾಯಿತಿ ಸುರಿದಿರುವ ಕಸವನ್ನು ಬೇರೆಡೆ ಸ್ಥಳಾಂತರ ಮಾಡಿ, ಮತ್ಯಾರು ಕಸ ಹಾಕದಂತೆ ನೋಡಿಕೊಳ್ಳಬೇಕು. ಬೆಂಕಿ ಉರಿಯದಂತೆ ಕಸದ ಮೇಲೆ ಮಣ್ಣು ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಕಸಾಯಿಖಾನೆ ತೆರವಿಗೆ ಆಗ್ರಹ
ಯಾವುದೇ ಅಡಚಣೆ ಇಲ್ಲದೆ, ಶುದ್ಧ ಗಾಳಿ, ಉತ್ತಮ ಪರಿಸರದಲ್ಲಿ ಬದುಕಲು ಇಲ್ಲಿ ಬಂದು ನೆಲೆ ನಿಂತಿದ್ದೇವೆ. ಆದರೆ ಇಲ್ಲಿನ ಗ್ರಾಮ ಪಂಚಾಯಿತಿಯು ಖಾಸಗಿ ನಿವೇಶನದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಲ್ಲದೇ ಕಸಕ್ಕೆ ಬೆಂಕಿಯಿಡುತ್ತಿದೆ. ಇದರಿಂದ ಬರುವ ಹೊಗೆ ಮನೆಯನ್ನೆಲ್ಲಾ ಆವರಿಸಿ ಉಸಿರಾಡದಂತಹ ಸ್ಥಿತಿ ನಿರ್ಮಾಣ ವಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಇದೆ ಸಮಸ್ಯೆ ಎದುರಿಸುತ್ತಿದೇವೆ.
ರಮೇಶ್, ಸ್ಥಳೀಯ ನಿವಾಸಿ
ಸತೀಶ್ ದೇಪುರ