Advertisement

ದೊಡ್ಡಹಿತ್ಲು ತೋಡಿನಲ್ಲಿ ತ್ಯಾಜ್ಯ ರಾಶಿ :ಸಂಸದರನ್ನು ಅಡ್ಡಗಟ್ಟಿ ತರಾಟೆ

11:46 PM Jun 25, 2019 | Team Udayavani |

ಗಂಗೊಳ್ಳಿ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ಗಂಗೊಳ್ಳಿಗೆ ಭೇಟಿ ನೀಡಿ, ತೆರಳುವಾಗ ದಾರಿ ಮಧ್ಯೆ ದೊಡ್ಡಹಿತ್ಲು ನಿವಾಸಿಗರು ಅಡ್ಡಗಟ್ಟಿ ಇಲ್ಲಿನ ತೋಡಿನಲ್ಲಿ ತುಂಬಿರುವ ತ್ಯಾಜ್ಯ ರಾಶಿಯನ್ನು ತೆಗೆಯುವವರು ಯಾರು? ನಾವು ಓಟು ಹಾಕಿ ಗೆಲ್ಲಿಸಿದ ಮೇಲೆ ನೀವು ಯಾರೂ ಈ ಕಡೆ ಬರುವುದಿಲ್ಲ. ಇಲ್ಲಿ ಕಷ್ಟ ಅನುಭವಿಸುವುದು ನಾವು ಮಾತ್ರ ಎನ್ನುವುದಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

Advertisement

ಗಂಗೊಳ್ಳಿ ಬಂದರು ಸಮೀಪದ ದೊಡ್ಡಹಿತ್ಲು ತೋಡಿನಲ್ಲಿ ಕಸದ ರಾಶಿಯೇ ತುಂಬಿ ಹೋಗಿದ್ದು, ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಇದಕ್ಕೆ ಸ್ಪಂದಿಸಲೇ ಇಲ್ಲ. ಗ್ರಾಮಸಭೆಯಲ್ಲೂ ಈ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದ್ದರು. ಆದರೂ ಇಲ್ಲಿನ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಇದರಿಂದ ಈ ಭಾಗದ ಮನೆಗಳಲ್ಲಿರುವ ಜನರಿಗೆ ಬೇರೆ ಬೇರೆ ತರದ ರೋಗ ಹರಡುವ ಭೀತಿ ಜನರದ್ದು.

ಇದರಿಂದ ರೋಸಿ ಹೋದ ಜನ ಮಂಗಳವಾರ ಗಂಗೊಳ್ಳಿ ಬಂದರಿಗೆ ಭೇಟಿ ನೀಡಿ ಅಲ್ಲಿಂದ ತೆರಳು ವಾಗ ದೊಡ್ಡಹಿತ್ಲು ತೋಡಿನ ಬಳಿಯಿರುವ ಸಣ್ಣ ಸೇತುವೆ ಮೇಲೆ ಸಂಸದರ ಕಾರನ್ನು ಅಡ್ಡಗಟ್ಟಿದ ಸ್ಥಳೀಯರು, ಮಹಿಳೆಯರು ತರಾಟೆಗೆ ತೆಗೆದು ಕೊಂಡದ್ದಲ್ಲದೆ, ಕಾರಿನಿಂದ ಇಳಿಯುವಂತೆ ಮನವಿ ಮಾಡಿಕೊಂಡರು.

ಕೆಳಕ್ಕಿಳಿದು ಬಂದ ಸಂಸದರು ಹಾಗೂ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರ ಬಳಿ ಈ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇದನ್ನೊಂದು ಬಗೆಹರಿಸಿಕೊಡಿ ಎಂದು ಮನವಿ ಮಾಡಿದರು.

ಅಧಿಕಾರಿಗಳಿಗೆ ಗರಂ

Advertisement

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿ ಗಂಗೊಳ್ಳಿ ಗ್ರಾ.ಪಂ.ನಲ್ಲಿ ಮಾತನಾಡಿದ ಸಂಸದರು, ಪಿಡಿಒ ಹಾಗೂ ಕಾರ್ಯದರ್ಶಿಗಳ ಕಾರ್ಯವೈಖರಿಗೆ ಗರಂ ಆದರು. ನೀವು ಮಾಡಿದ ಕೆಲಸಕ್ಕೆ ಈಗ ನಮ್ಮ ಜನರು ಕಾರನ್ನು ಅಡ್ಡಗಟ್ಟಿ ಪ್ರಶ್ನಿಸುವಂತಾಗಿದೆ. ಇಷ್ಟು ದಿನದಿಂದ ನೀವೇನು ಮಾಡುತ್ತಿದ್ದೀರಾ? ಕೂಡಲೇ ಇದಕ್ಕೆ ಸ್ಪಂದಿಸಿ, ಆದ್ಯತೆ ನೆಲೆಯಲ್ಲಿ ಕೆಲಸ ನಿರ್ವಹಿಸಿ ಎನ್ನುವುದಾಗಿ ಪಂಚಾಯತ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next