Advertisement
ಬಂಟ್ವಾಳ: ಹಲವು ವರ್ಷಗಳಿಂದ ಗೊಂದಲದ ಗೂಡಾಗಿರುವ ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕವು ಸಜೀಪನಡು ಗ್ರಾಮದಲ್ಲಿ ಬಲುದೊಡ್ಡ ಸಮಸ್ಯೆಯಾಗಿದ್ದು, ಬಂಟ್ವಾಳ ಪುರಸಭೆ ಹಾಗೂ ಸಜೀಪನಡು ಗ್ರಾಮಸ್ಥರ ನಡುವೆ ಗುದ್ದಾಟಕ್ಕೆ ಕಾರಣವಾಗುತ್ತಲೇ ಇದೆ. ತಮ್ಮ ಹಲವು ಬೇಡಿಕೆಗೆ ಸ್ಪಂದನೆ ಸಿಗದೆ ಇಲ್ಲಿ ಹಸಿ ಕಸವನ್ನು ವಿಲೇವಾರಿ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿತ್ತಲೇ ಬಂದಿದ್ದಾರೆ.
Related Articles
Advertisement
ಕೋಣೆಮಾರು ಗುಡ್ಡ ಕುಸಿಯುವ ಭೀತಿ:
ಸಜೀಪನಡು ಗ್ರಾಮದ ಕೋಣೆಮಾರು ಎಂಬಲ್ಲಿ ಗುಡ್ಡ ಕುಸಿಯುವ ಭೀತಿ ಇದ್ದು, ಹಲವು ಮನೆಗಳು ಅಪಾಯದಲ್ಲಿವೆ. ಈ ಭಾಗದಲ್ಲಿನ ಮನೆಯ ಸದಸ್ಯರಿಗೆ ಬೇರೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನೋಟಿಸ್ ನೀಡಲಾಗಿದೆಯೇ ಹೊರತು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕೆಲಸ ಆಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಅಪಾಯದಲ್ಲಿರುವ ಗುಡ್ಡದ ಮೇಲ್ಭಾಗದಲ್ಲಿ 7 ಮನೆಗಳು, ಕೆಳ ಭಾಗದಲ್ಲಿ 2 ಮನೆಗಳಿವೆ. ಪ್ರಸ್ತುತ ಸ್ವಲ್ಪ ಸ್ವಲ್ಪ ಕುಸಿಯುತ್ತಿದ್ದು, ಒಮ್ಮೆಲೆ ಕುಸಿದರೆ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಮನೆಗಳಿಗೆ ನೋಟಿಸ್ ನೀಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದೆ ಈ ರೀತಿ ನೋಟಿಸ್ ನೀಡುವುದು ಸರಿಯಾದ ಕ್ರಮವಲ್ಲ ಎಂಬ ಆರೋಪಗಳೂ ಕೇಳಿಬಂದಿದೆ.
ಬೈಲಗುತ್ತು ಕೃತಕ ನೆರೆಯ ಭೀತಿ:
ಗ್ರಾಮದ ಬೈಲಗುತ್ತು ಪ್ರದೇಶದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಕೃತಕ ನೆರೆಯ ಭೀತಿ ಇದ್ದು, ಎರಡು ವರ್ಷಗಳ ಹಿಂದೆ ಸ್ಥಳೀಯ ಮನೆಗಳಿಗೆ ನೆರೆ ನೀರು ನುಗ್ಗಿತ್ತು. ಈಗಲೂ ಜೋರು ಮಳೆ ಬಂದಾಗ ನೀರು ನಿಲ್ಲುವ ಸ್ಥಿತಿ ಇದ್ದು, ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕರೆ ಮಾತ್ರ ಕೃತಕ ನೆರೆಯ ಭೀತಿ ದೂರವಾಗಬಹುದು.
ವಿಧಾನಸಭೆಯಲ್ಲೂ ಚರ್ಚೆ :
ಕಂಚಿನಡ್ಕಪದವು ತ್ಯಾಜ್ಯ ಘಟಕದ ವಿಚಾರ ವಿಧಾನಸಭೆಯಲ್ಲೂ ಚರ್ಚೆಯಾಗಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ ವಿಚಾರ ಪ್ರಸ್ತಾಪಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದು ಕೇವಲ ಒಣ ಕಸವನ್ನು ಮಾತ್ರ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಈ ನಡುವೆ 2021, ಮಾರ್ಚ್ 13ರಂದು ಹಸಿ ಕಸವನ್ನು ತರುತ್ತಾರೆ, ರಸ್ತೆಯಲ್ಲಿ ಚೆಲ್ಲಿಕೊಂಡು ಹೋಗುತ್ತಾರೆ ಎಂದು ಆರೋಪಿಸಿ ಮತ್ತೆ ಗ್ರಾಮಸ್ಥರು ಕಸದ ವಾಹನ ತಡೆದಿದ್ದರು. ಹೀಗಾಗಿ ಸದ್ಯಕ್ಕೆ ಪುರಸಭೆಯು ಹಸಿ ಕಸವನ್ನು ಅಲ್ಲಿಗೆ ಸಾಗಿಸದೇ ಇರುವುದರಿಂದ ವಿಚಾರ ಸಣ್ಣಗಾಗಿದ್ದು, ಹಸಿ ಕಸವನ್ನು ಘಟಕಕ್ಕೆ ಸಾಗಿಸಿದರೆ ಮತ್ತೆ ಗೊಂದಲ ಸೃಷ್ಟಿಯಾಗುವ ಆತಂಕವಿದೆ.
ಇತರ ಸಮಸ್ಯೆಗಳೇನು? :
- ಅಸಮರ್ಪಕ ಗ್ರಾಮದ ಒಳರಸ್ತೆ
- ಕುಡಿಯುವ ನೀರಿನ ಸಮಸ್ಯೆ
- ನಿವೇಶನ/ವಸತಿ ರಹಿತರ ಸಮಸ್ಯೆ
- ಉಳ್ಳಾಲ ತಾಲೂಕು ಸೇರುವುದಕ್ಕೆ ವಿರೋಧ