Advertisement

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ: ಕೆ.ಎಸ್‌. ಈಶ್ವರಪ್ಪ

10:02 AM Dec 07, 2019 | Sriram |

ಬೆಂಗಳೂರು:ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಸಮರ್ಪಕ ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯಿತಿಗೆ 20 ಲಕ್ಷ ರೂ. ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸವಾಲಾಗಿದೆ. ಹೀಗಾಗಿ, ಗ್ರಾಮ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿ ಪ್ರತಿ ಗ್ರಾಮ ಪಂಚಾಯಿತಿಗೆ 20 ಲಕ್ಷ ರೂ. ನೀಡಿದೆ. ಆ ಹಣದಲ್ಲಿ ಯೋಜನೆ ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿ ಈ ಕುರಿತು ಯೋಜನೆ ರೂಪಿಸಬಹುದು. ಇಲ್ಲವೇ ಐದು ಅಥವಾ ಹತ್ತು ಗ್ರಾಮ ಪಂಚಾಯಿತಿಗಳು ಜತೆಗೂಡಿ ಯೋಜನೆ ರೂಪಿಸಬಹುದು. ಕೊಪ್ಪಳದಲ್ಲಿ 9 ಗ್ರಾಮ ಪಂಚಾಯಿತಿಗಳು ಜತೆಗೂಡಿ ಯೋಜನೆ ರೂಪಿಸಿವೆ ಎಂದು ತಿಳಿಸಿದರು.

ಘನತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಇದ್ದರೆ ಬಳಸಿಕೊಳ್ಳಲಾಗುವುದು. ಇಲ್ಲದಿದ್ದರೆ ಖಾಸಗಿ ಜಾಗ ಖರೀದಿಸಲಾಗುವುದು ಎಂದು ಹೇಳಿದರು.

ಇದೇ ರೀತಿ ಗ್ರಾಮ ಪಂಚಾಯಿತಿಗಲ್ಲಿ ಸೌರ ವಿದ್ಯುತ್‌ ದೀಪಗಳ ಅಳವಡಿಕೆ ಹಾಗೂ ಆಲ್ಲಿಗೆ ಆಗತ್ಯವಾದ ವಿದ್ಯುತ್‌ ಸೌರಶಕ್ತಿಯಿಂದಲೆ ಪಡೆಯುವ ಯೋಜನೆಗೂ ಚಾಲನೆ ನೀಡಲಾಗಿದ್ದು ಇದಕ್ಕೆ ರಾಜ್ಯ ಸರ್ಕಾರದ ಹಣಕಾಸು ಆಯೋಗದಿಂದ 1200 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಪ್ರತಿ ಮನೆಗೆ ನಲ್ಲಿ ನೀರು ಪೂರೈಸುವ ಸಂಬಂಧ ಜಲಾಮೃತ ಯೋಜನೆ ರೂಪಿಸಲಾಗಿದ್ದು ಸದ್ಯಕ್ಕೆ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಬಿಜಾಪುರ, ಬಾಗಲಕೋಟೆ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಆನುಷ್ಟಾನಗೊಳಿಸಿದ ನಂತರ ಇತರೆ ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು. ನೀರಿನ ಲಭ್ಯತೆ ಆಧಾರದ ಮೇಲೆ ಈ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next