Advertisement

‘ಬೇಲಿಂಗ್‌ ಯುನಿಟ್’ಮಾದರಿ ತ್ಯಾಜ್ಯ ವಿಲೇವಾರಿ

11:22 PM Aug 20, 2019 | Team Udayavani |

ಮಹಾನಗರ: ಕುಡುಪು ಸಮೀಪದ ಮಂದಾರದಲ್ಲಿ ವ್ಯಾಪಕವಾಗಿ ಬಿದ್ದಿರುವ ಪಚ್ಚನಾಡಿಯ ತ್ಯಾಜ್ಯ ರಾಶಿಯನ್ನು ‘ಬೇಲಿಂಗ್‌ ಯುನಿಟ್’ ಸಹಾಯದಿಂದ ತಲಾ ಒಂದೊಂದು ಟನ್‌ ಗಾತ್ರದ ಬಾಕ್ಸ್‌ ಮಾದರಿಯಲ್ಲಿ ಹಾಕಿ ಅದನ್ನು ಕಂಪ್ರಸ್‌ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್‌ ಯಾರ್ಡ್‌ ಗೆ ಕೇಬಲ್ ಮಾದರಿಯಲ್ಲಿ ಎಳೆದು ತರುವ ವಿನೂತನ ಪ್ರಯೋಗದ ಬಗ್ಗೆ ಕೊಯಮತ್ತೂರಿನ ಸುಧೀರ್‌ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ಯೋಜನ ವರದಿಯನ್ನು ದ.ಕ. ಜಿಲ್ಲಾಡಳಿತ/ಮಂಗಳೂರು ಪಾಲಿಕೆಗೆ ಮಂಗಳವಾರ ನೀಡಿದೆ.

Advertisement

ಪಚ್ಚನಾಡಿಯ ಡಂಪಿಂಗ್‌ಯಾರ್ಡ್‌ ನಿಂದ ಮಂದಾರಕ್ಕೆ ಜಾರಿರುವ ತ್ಯಾಜ್ಯರಾಶಿಯನ್ನು ತೆರವುಗೊಳಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಕೊಯಮುತ್ತೂರಿನ ಅಧ್ಯಯನ ತಂಡ ಮಂಗಳವಾರ ಮಂದಾರಕ್ಕೆ ಆಗಮಿಸಿತ್ತು. ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌, ಪರಿಸರ ಎಂಜಿನಿಯರ್‌ ಮಧು, ಮಾಜಿ ಮೇಯರ್‌ ಭಾಸ್ಕರ್‌ ಕೆ. ಮೊದಲಾದವರು ಉಪಸ್ಥಿತರಿದ್ದರು.

ಊಟಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಫಿ ತೋಟದಿಂದ ಮನೆಗೆ ಕಾಫಿಯನ್ನು ಕೇಬಲ್ ಸಹಾಯದಿಂದ ತರುವ ಶೈಲಿಯಲ್ಲಿಯೇ, ಒಂದೊಂದು ಟನ್‌ ಸಾಮರ್ಥಯದ ಬಾಕ್ಸ್‌ನಲ್ಲಿ ತ್ಯಾಜ್ಯವನ್ನು ತುಂಬಿ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ‘ವಿಂಚ್ ಮಾದರಿ’ ಎಳೆದುತರುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ಪ್ರತ್ಯೇಕ ಟಿಪ್ಪರ್‌ಗಳನ್ನು ಬಳಸುವ ಅಥವಾ ರಸ್ತೆ ಮಾರ್ಗ ಉಪಯೋಗಿಸುವ ಅಗತ್ಯವಿಲ್ಲ. ಬದಲಾಗಿ, ತ್ಯಾಜ್ಯ ರಾಶಿ ಯಲ್ಲಿ ಬಾಕ್ಸ್‌ ಗೆ ತ್ಯಾಜ್ಯ ತುಂಬಲು ಬುಲ್ಡೋಜರ್‌ ಹಾಗೂ ತ್ಯಾಜ್ಯ ‘ಕಂಪ್ರಸ್‌’ ಮಾಡುವ ಯಂತ್ರಗಳಿದ್ದರೆ ಸಾಕು ಎಂಬುದು ಸುಧೀರ್‌ ಜೈಸ್ವಾಲ್ ತಂಡದ ಅಭಿಪ್ರಾಯ.

ಇದೇ ಮಾದರಿಯಲ್ಲಿ ಕೊಲ್ಕತ್ತ ಸೇರಿದಂತೆ ವಿವಿಧ ಭಾಗಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮಾಡಿರುವ ಈ ತಂಡ ಮಂದಾರಕ್ಕೂ ಇದೇ ಸೂತ್ರ ಸುಲಭವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ. 2-3 ಬುಲ್ಡೋಜರ್‌, 25ರಷ್ಟು ಕಾರ್ಮಿಕರು ಹಾಗೂ ಯಂತ್ರೋಪ ಕರಣವಿದ್ದರೆ ತ್ಯಾಜ್ಯವನ್ನು ತೆಗೆಯಲು ಸಾಧ್ಯ. ಗಂಟೆಗೆ 10 ಟನ್‌ನಂತೆ ದಿನಕ್ಕೆ 100 ಟನ್‌ ತ್ಯಾಜ್ಯವನ್ನು ಕ್ಲೀಯರ್‌ ಮಾಡಬಹುದು. ಎರಡು ತಿಂಗಳೊಳಗೆ ಪೂರ್ಣವಾಗಿ ತ್ಯಾಜ್ಯವನ್ನು ಇದೇ ಮಾದರಿಯಲ್ಲಿ ತೆಗೆಯಬಹುದು ಎಂದು ವರದಿ ನೀಡಿರುವ ಸುಧೀರ್‌ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next