Advertisement

ಗಂಭೀರ ಸ್ವರೂಪಕ್ಕೆ ಪಚ್ಚನಾಡಿ ‘ತ್ಯಾಜ್ಯ ಕುಸಿತ’

01:31 AM Aug 08, 2019 | Sriram |

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿಯ ತ್ಯಾಜ್ಯ ಡಂಪಿಂಗ್‌ ಯಾರ್ಡ್‌ನಲ್ಲಿ ಮಳೆಯಿಂದಾಗಿ ಬೃಹತ್‌ ಕಸದ ರಾಶಿ ಕೆಳಭಾಗಕ್ಕೆ ಜಾರುತ್ತಿದ್ದು, ಆಸುಪಾಸಿನ ಜನರ ಬದುಕು ಅಕ್ಷರಶಃ ಕಸದ ರಾಶಿ ಯೊಳಗೆ ಸಮಾಧಿಯಾಗುವಂತಿದೆ.

Advertisement

ಕುಸಿದಿರುವ ತ್ಯಾಜ್ಯವು ಸಮೀಪದ ಮಂದಾರ ಪರಿಸರದ ಒಂದು ಕಿ.ಮೀ.ನಷ್ಟು ವಿಸ್ತಾರದಲ್ಲಿ ವ್ಯಾಪಿಸಿದ್ದು, ಸುಮಾರು 4 ಎಕರೆಯಷ್ಟು ಕೃಷಿಭೂಮಿಯನ್ನು ಆಪೋಷನ ತೆಗೆದುಕೊಂಡಿದೆ. ಎರಡು ನಾಗಬನ, ಎರಡು ದೈವಸ್ಥಾನ ಮತ್ತು ಒಂದು ಹಳೆಯ ಮನೆ ತ್ಯಾಜ್ಯ ರಾಶಿಯಲ್ಲಿ ಸಂಪೂರ್ಣ ಮುಳುಗಿದ್ದು, 10ರಷ್ಟು ಮನೆಗಳು, ದೈವಸ್ಥಾನಗಳು ಅಪಾಯದಲ್ಲಿವೆ.

ಬೃಹತ್‌ ಬೆಟ್ಟದಂತಿರುವ ತ್ಯಾಜ್ಯ ರಾಶಿಯ ಅವಾಂತರದಿಂದ ಐದಾರು ದಶಕದಿಂದ ಇಲ್ಲಿ ನೆಲೆಸಿರುವ ಕೆಲವುಕುಟುಂಬಗಳು ಊರು ತ್ಯಜಿಸಬೇಕಾದ ಸ್ಥಿತಿಯಲ್ಲಿದ್ದಾರೆ. ಮಳೆ ಜೋರಾದರೆ ತ್ಯಾಜ್ಯದ ರಾಶಿ ಮತ್ತಷ್ಟು ಮನೆ-ತೋಟಗಳನ್ನು ಆಪೋಷನ ಪಡೆಯುವ ಸಾಧ್ಯತೆಯಿದ್ದು, ಜನತೆ ಆತಂಕದಲ್ಲಿದ್ದಾರೆ.

ಅವೈಜ್ಞಾನಿಕ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಕಸದ ನಿರ್ವಹಣೆಯೂ ಸಮರ್ಪಕವಾಗಿ ನಡೆಯದೆ ತ್ಯಾಜ್ಯ ರಾಶಿ ಮಿತಿಮೀರಿದ ಎತ್ತರಕ್ಕೆ ಬೆಳೆದಿದೆ. ಭಾರೀ ಮಳೆಯಿಂದಾಗಿ ಒದ್ದೆಯಾಗಿ ತನ್ನ ಭಾರಕ್ಕೆ ತಾನೇ ಕುಸಿದು ಜಾರುತ್ತಿದೆ. ಸುಮಾರು 5-6 ಮನೆಗಳ ಜನರು ಸ್ಥಳಾಂತರಗೊಂಡಿದ್ದಾರೆ. 10ರಷ್ಟು ವಿದ್ಯುತ್‌ ಕಂಬಗಳು ತ್ಯಾಜ್ಯರಾಶಿ ಯೊಳಗೆ ಹುದುಗಿದ್ದು, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಅಪಾಯದಲ್ಲಿ ಮನೆಗಳು
ತ್ಯಾಜ್ಯ ರಾಶಿ ಸುಮಾರು 50 ಮೀ. ಅಗಲದಲ್ಲಿ ತೋಟಗಳನ್ನು ನೆಲಸಮ ಮಾಡಿ ಮುನ್ನುಗ್ಗಿದ್ದು, ಹಲವು ಮನೆಗಳು ಅಪಾಯದಲ್ಲಿವೆ.

Advertisement

ಸಾವಿರಾರು ಅಡಿಕೆ ಮರಗಳ ಕುರುಹಿಲ್ಲ!
ಮಂಗಳವಾರ ರಾತ್ರಿಯಿಂದಲೇ ತ್ಯಾಜ್ಯ ರಾಶಿ ಹರಡಿದ ಪರಿಣಾಮ 2,000ಕ್ಕೂ ಅಧಿಕ ಅಡಿಕೆ ಮರಗಳುತ್ಯಾಜ್ಯ ರಾಶಿಯೊಂದಿಗೆ ನೆಲಸಮವಾಗಿವೆ. ಜತೆಗೆ ಸುಮಾರು 150ಕ್ಕೂ ಅಧಿಕ ತೆಂಗು, 70ಕ್ಕೂ ಅಧಿಕ ಹಲಸು, ಮಾವು ಸಹಿತ ಹಲವು ಮರಗಳು ನೆಲಕ್ಕುರುಳಿವೆ. ತ್ಯಾಜ್ಯ ರಾಶಿ ನುಗ್ಗುತ್ತಿರುವ ಕಾರಣಮರಗಳು ಅರ್ಧ ನಿಮಿಷಕ್ಕೊಂದರಂತೆ ನೆಲಕ್ಕುರುಳುತ್ತಿವೆ.

ಮಂದಾರ-ಕಂಜಿರಾಡಿ ರಸ್ತೆ ಬಂದ್‌
ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ಸಂಪೂರ್ಣ ಬಂದ್‌ ಆಗಿದೆ. ರಸ್ತೆಯ ಸುಮಾರು 50 ಮೀ. ಭಾಗದಲ್ಲಿ ತ್ಯಾಜ್ಯವೇ ಹರಡಿದೆ.

ಮಡಿಕೇರಿ ಘಟನೆಯ ನೆನಪು!
ಉದಯ್‌ ಕುಮಾರ್‌ ಕುಡುಪು ‘ಉದಯವಾಣಿ’ ಜತೆಗೆ ಮಾತನಾಡಿ, ಇಂತಹ ಘಟನೆಯನ್ನು ಹಿಂದೆಂದೂ ನೋಡಿರಲಿಲ್ಲ. ಕಳೆದ ವರ್ಷ ಮಡಿಕೇರಿಯಲ್ಲಿ ಗುಡ್ಡ ಕುಸಿದದೃಶ್ಯಗಳನ್ನು ನೆನಪಿಸುವ ರೀತಿ ಪಚ್ಚನಾಡಿ ತ್ಯಾಜ್ಯ ಗುಡ್ಡೆ ಕುಸಿದಿದೆ ಎಂದರು. ಮಾಜಿ ಮೇಯರ್‌ಭಾಸ್ಕರ್‌, ಆಯುಕ್ತ ಮೊಹಮ್ಮದ್‌ ನಝೀರ್‌ ಸಹಿತ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ನಾಗಬನ ನೆಲಸಮ -ದೈವಸ್ಥಾನಕ್ಕೂ ತ್ಯಾಜ್ಯ

ತ್ಯಾಜ್ಯ ರಾಶಿ ಮುಂದುವರಿಯುತ್ತಿರುವುದರ ಪರಿಣಾಮ ಎರಡು ನಾಗಬನ, ಎರಡು ದೈವಸ್ಥಾನಗಳು ಮುಚ್ಚಿಹೋಗಿವೆ. ಮುಂದೆ ಇನ್ನೂ ಎರಡು ನಾಗಬನ-ದೈವಸ್ಥಾನಗಳು ಆಹುತಿಯಾಗುವ ಅಪಾಯವಿದೆ. 3 ಕೆರೆ, ಎರಡು ಪಂಪ್‌ಸೆಟ್‌ಗಳು ನೆಲಸಮವಾಗಿವೆ.

ಎಕರೆಗಟ್ಟಲೆ ಜಾಗದಲ್ಲಿ 10 ವರ್ಷಗಳ ಕಸ!

ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಸುಮಾರು 77.93 ಎಕರೆ ಜಾಗವಿದೆ. 10 ಎಕರೆಯಲ್ಲಿ ಕಸ ತುಂಬಿಸಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಸನಿಹದ ಸುಮಾರು 12 ಎಕರೆ ಜಾಗದಲ್ಲಿ 8-10 ವರ್ಷಗಳಿಂದ ತ್ಯಾಜ್ಯ ಸುರಿಯಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಿಂದ ನಿತ್ಯ 250ರಿಂದ 300 ಟನ್‌ ಕಸ ಸಂಗ್ರಹಿಸಿ, ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತಂದು ಸಂಸ್ಕರಿಸಿ, ಉಳಿಯುವ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಇಲ್ಲಿ ಡಂಪ್‌ ಮಾಡಲಾಗುತ್ತದೆ. ಉಳ್ಳಾಲ ಮತ್ತು ಬಂಟ್ವಾಳದಿಂದಲೂ ಪ್ರತೀದಿನ ಸುಮಾರು 50 ಟನ್‌ನಷ್ಟು ಕಸ ಇಲ್ಲಿ ಸುರಿಯಲಾಗುತ್ತಿದೆ. ಲಕ್ಷಗಟ್ಟಲೆ ಟನ್‌ ಕಸ ಯಾರ್ಡ್‌ನಲ್ಲಿದೆ.
ಮುಂದೇನು – ಗೊತ್ತಿಲ್ಲ!

ತ್ಯಾಜ್ಯ ರಾಶಿ ಇನ್ನೂ ಮುಂದು ವರಿಯುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಸ್ಥಳೀಯರದು. ಮಳೆ ನಿಲ್ಲುವವರೆಗೆ ತ್ಯಾಜ್ಯ ತೆರವು ಮಾಡುವಂತಿಲ್ಲ. ತ್ಯಾಜ್ಯ ವಿಲೇವಾರಿಗೆ ಮುಂದಾದರೆ ಸಾಗಿಸಿ ತೆರವು ಮಾಡಲು ಇಲ್ಲಿ ಸಮರ್ಪಕ ರಸ್ತೆಯೂ ಇಲ್ಲ. ಜತೆಗೆ ಮಳೆ ನೀರಿನಿಂದ ಮತ್ತಷ್ಟು ತ್ಯಾಜ್ಯ ವ್ಯಾಪಿಸುವ ಆತಂಕವೂ ಇದೆ. ಸದ್ಯ ಗಲೀಜು ನೀರು ಹತ್ತಿರದ ತೋಡು-ಬಾವಿಗಳಲ್ಲಿ ವ್ಯಾಪಿಸಿದೆ. ಹೀಗಾಗಿ ಸಾಂಕ್ರಾಮಿಕ ರೋಗದ ಅಪಾಯವೂ ಎದುರಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next