Advertisement

“ತ್ಯಾಜ್ಯ, ಪ್ಲಾಸ್ಟಿಕ್‌ಗಳನ್ನು ಸಂಪನ್ಮೂಲ ಎಂದು ಪರಿಗಣಿಸಿದಲ್ಲಿ ಲಾಭದಾಯಕ’

11:32 PM Sep 14, 2019 | Team Udayavani |

ಕಾಪು : ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ವಸ್ತುಗಳನ್ನು ಕಸ ಎಂದು ಪರಿಗಣಿಸಿ ಎಸೆದರೆ ಅದು ಹಾನಿಕಾರಕ ಮತ್ತು ಪರಿಸರದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರುವ ವಸ್ತುವಾಗಿ ಬಿಡುತ್ತದೆ. ಅದನ್ನೇ ಸಂಪನ್ಮೂಲ ಎಂದು ಪರಿಗಣಿಸಿ, ಅವುಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಸ್ವತ್ಛವಾಗಿರಿಸಿ ಮರು ಬಳಕೆಗೆ ಬಳಸಿಕೊಂಡರೆ ಭಾರೀ ಆದಾಯ ತಂದು ಕೊಡುವ ಲಾಭದಾಯಕ ಸಂಪನ್ಮೂಲವಾಗಿ ಮೂಡಿ ಬರುತ್ತದೆ ಎಂದು ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.

Advertisement

ಕಾಪು ಪುರಸಭೆ ಮತ್ತು ಕಾಪು ಜೇಸಿಐನ ಸಹಯೋಗದೊಂದಿಗೆ ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರಗಿದ ಪೈಪ್‌ ಕಾಂಪೋಸ್ಟ್‌ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಪು ಪುರಸಭೆ ವ್ಯಾಪ್ತಿಯ ಎಲ್ಲೆಡೆಗಳಲ್ಲಿ ಕಾಂಪೋಸ್ಟ್‌ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಮಾದರಿಯನ್ನು ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮನೆ, ವಾಣಿಜ್ಯ ಸಂಕೀರ್ಣಗಳು ಇತ್ಯಾದಿಗಳಲ್ಲಿ ಉಪಯೋಗಿಸಿ ಇಲ್ಲಿನ ಪರಿಸರವನ್ನು ಸ್ವತ್ಛವಾಗಿಡಲು ಕಾಪು ಪುರಸಭೆಯೊಂದಿಗೆ ಕೈ ಜೋಡಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮಕ್ಕಳನ್ನು ಇಲ್ಲಿನ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕರೆದೊಯ್ದು ಅಲ್ಲಿ ಹಸಿ ಕಸ, ಒಣ ಕಸ ಮತ್ತು ಘನ ಮತ್ತು ಪ್ಲಾಸ್ಟಿಕ್‌ ವಸ್ತುಗಳ ಬೇರ್ಪಡಿಸುವಿಕೆಯ ವಿಧಾನದ ಬಗ್ಗೆ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಾಯಿತು.

ಕಾಪು ಜೇಸಿಐ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ, ಜೇಸಿಐ ವಲಯಾಧಿಕಾರಿ ಕೇಶವ ಆಚಾರ್ಯ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ವರುಣ್‌ ಶೆಟ್ಟಿ, ಕಾಪು ಎಎಸ್‌ಐ ರಾಜೇಂದ್ರ ಮಣಿಯಾಣಿ, ಜೇಸಿಐ ಪೂರ್ವಾಧ್ಯಕ್ಷ ರಾಜೇಂದ್ರ ಬಿ.ಕೆ., ಕಾಪು ಪುರಸಭೆ ಪರಿಸರ ಅಭಿಯಂತರ ರವಿಪ್ರಕಾಶ್‌, ಹಿರಿಯ ಆರೋಗ್ಯ ನಿರೀಕ್ಷಕ ದಿನೇಶ್‌, ಕಾಪು ಶಾಲಾ ಶಿಕ್ಷಕಿ ವಿದ್ಯಾವತಿ, ಕಾಪು ಜೇಸಿಐ ನಿಕಟಪೂರ್ವ ಅಧ್ಯಕ್ಷ ರಮೇಶ್‌ ನಾಯ್ಕ, ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ, ಸಪ್ತಾಹ ಮಹಾ ನಿರ್ದೇಶಕಿ ಸಾವಿತ್ರಿ ನಾಯ್ಕ ಉಪಸ್ಥಿತರಿದ್ದರು.

ಕಾಂಪೋಸ್ಟ್‌ ಗೊಬ್ಬರ ತಯಾರಿ ವಿಧಾನ
6 ಫೀಟ್‌ ಉದ್ದ 8 ಇಂಚು ವ್ಯಾಸದ ಪಿವಿಸಿ ಅಥವಾ ಸಿಮೆಂಟ್‌ ಪೈಪ್‌ನ್ನು ತೆಗೆದುಕೊಂಡು ಒಂದು ಫೀಟ್‌ ಆಳದಲ್ಲಿ ಲಂಬವಾಗಿ ಹಾಕಿ 1 ಕೆ. ಜಿ. ಬೆಲ್ಲ ಹಾಗೂ 2 ಲೀಟರ್‌ ಸೆಗಣಿ ಮಿಶ್ರಿತ ನೀರು, ಅಡುಗೆ ಮನೆ ತ್ಯಾಜ್ಯ, ಎಲೆಗಳು, ಇತರೆ ಕೊಳೆಯುವ ವಸ್ತುಗಳನ್ನು ಹಾಕಿ ಒಂದು ಹಿಡಿ ಮಣ್ಣು, ಸ್ವಲ್ಪ ನೀರು ಈ ರೀತಿ ಪ್ರತಿನಿತ್ಯ ಹಾಕುತ್ತಾ ಹೋಗಬೇಕು. ಪೈಪ್‌ ಪೂರ್ತಿಯಾದ ನಂತರ ಮತ್ತೂಂದು ಪೈಪ್‌ನ್ನು ಇದೇ ರೀತಿಯಲ್ಲಿ ಬಳಸಬಹುದು. ತಯಾರಾದ ಕಾಂಪೋಸ್ಟ್‌ ವಾಸನೆ ಮತ್ತು ನೊಣಗಳಿಂದ ಮುಕ್ತವಾಗಿದ್ದು ಉತ್ತಮವಾದ ಸಾವಯವ ರಾಸಾಯನಿಕ ಮುಕ್ತ ಗೊಬ್ಬರವಾಗಿ ಕೈತೋಟ, ಹೂವಿನ ಗಿಡಗಳು, ತರಕಾರಿ ಬೆಳೆಗಳಿಗೆ ಉಪಯೋಗಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next