Advertisement

ಕೆಎಸ್‌ಆರ್‌ಟಿಸಿ ಡಿಪೋ ಪರಿಸರದಲ್ಲಿ ತ್ಯಾಜ್ಯ ರಾಶಿ

10:16 PM Sep 29, 2019 | Team Udayavani |

ಕಾಸರಗೋಡು: ನಗರದ ಕೆಎಸ್‌ಆರ್‌ಟಿಸಿ ಡಿಪೋ ಪರಿಸರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ರಾಶಿ ರಾಶಿಯಾಗಿ ಬಿದ್ದುಕೊಂಡಿವೆ. ಡಿಪ್ಪೋದ ಪೂರ್ವ ಭಾಗದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು ಸಹಿತ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿಕೊಂಡಿರುವುದರಿಂದ ಸಾರ್ವಜನಿಕರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

Advertisement

ಪ್ಲಾಸ್ಟಿಕ್‌ ಮಾಲಿನ್ಯ ಸಂಸ್ಕರಿಸದಿದ್ದರೆ ಮಾರಕವಾದಂತಹ ರೋಗಗಳಿಗೆ ತುತ್ತಾಗಬಹುದೆಂಬ ಬಗ್ಗೆ ಆರೋಗ್ಯ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿತ್ತಾದರೂ ಇಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಪ್ಲಾಸ್ಟಿಕ್‌ಮಾಲಿನ್ಯ ಮಣ್ಣಿನೊಂದಿಗೆ ಬೆರೆಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾಗಿದೆ.

ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧ ಆದೇಶವು ಜಾರಿಗೆ ಬಂದಿರುವಂತೆಯೇ ಕೆಎಸ್‌ಆರ್‌ಟಿಸಿ ಡಿಪ್ಪೋ ಪರಿಸರದಲ್ಲಿ ಪ್ಲಾಸ್ಟಿಕ್‌ ಮಾಲಿನ್ಯ ರಾಶಿ ಜನಸಾಮಾನ್ಯರಿಗೆ ಹೆಚ್ಚಿನ ಸಮಸ್ಯೆಯಾಗಿ ಪರಿಣಮಿಸಿದೆ. ಕೆಎಸ್‌ಆರ್‌ಟಿಸಿ ನೌಕರರು ಹಾಗೂ ಪ್ರಯಾಣಿಕರು ಕುಡಿಯುವ ನೀರಿನ ಬಾಟಲಿಯನ್ನು ತೆಗದುಕೊಂಡು ಉಪಯೋಗ ನಂತರ ಬಿಸಾಡುವ ಬಾಟಲಿಗಳು ಇದರಲ್ಲಿ ಹೆಚ್ಚಿನವುಗಳಾಗಿವೆ. ಬಸ್‌ ನಿಲ್ದಾಣ ಕೇಂದ್ರದಿಂದ ಸಂಗ್ರಹಿಸುವ ಬಾಟಲಿಗಳು ಸಮರ್ಪಕವಾದ ರೀತಿಯಲ್ಲಿ ಸಂಸ್ಕರಿಸಲು ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಲ್ಲಿ ರಾಶಿ ಹಾಕಲಾಗುತ್ತಿದೆ. ಬಸ್ಸಿನ ಬಿಡಿ ಭಾಗಗಳ ದುರಸ್ತಿ ಕೆಲಸಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಡಿಪ್ಪೋದಲ್ಲಿ ನಿಲ್ಲಿಸಲಾಗುತ್ತಿದೆ.

ಈ ಪ್ರದೇಶದಲ್ಲಿಯೇ ಈ ರೀತಿಯ ಪ್ಲಾಸ್ಟಿಕ್‌ ಮಾಲಿನ್ಯ, ತ್ಯಾಜ್ಯ ರಾಶಿ ಹಾಕಿರುವುದು ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ.

ಮಾತ್ರವಲ್ಲದೆ ಅದರೊಂದಿಗೆ ಆಹಾರದ ತ್ಯಾಜ್ಯ ವಸ್ತುಗಳನ್ನೂ ಹಾಕಲಾಗಿದ್ದು, ಇದನ್ನು ಸೇವಿಸಲು ಬೀದಿನಾಯಿಗಳ ಹಿಂಡು ಕೆಎಸ್‌ಆರ್‌ಟಿಸಿ ಬಸ್‌ ಪರಿಸರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಡಿಪ್ಪೋ ಪ್ರದೇಶವು ಶುಚಿಯಾಗಿರದ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.

Advertisement

ಮಾಲಿನ್ಯ ತುಂಬಿಕೊಂಡಿರುವ ಕೆಎಸ್‌ಆರ್‌ಟಿಸಿ ಡಿಪ್ಪೋದ ಸಮೀಪದಲ್ಲಿಯೇ ಬಿದ್ದುಕೊಂಡಿರುವ ಪ್ಲಾಸ್ಟಿಕ್‌ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು, ಕಾಲ್ನಡೆ ಪ್ರಯಾಣಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ.

ಹೀಗೆ ಪ್ಲಾಸ್ಟಿಕ್‌ ಮಾಲಿನ್ಯ ತುಂಬಿಕೊಂಡಿರುವುದಿಂದ ಸಂಜೆಯ ವೇಳೆಗಳಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿ ಕಾಣುತ್ತಿವೆ. ಅಲ್ಲದೆ ಪ್ಲಾಸ್ಟಿಕ್‌ ಮಾಲಿನ್ಯದೊಂದಿಗೆ ಆಹಾರ ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಡಿಪ್ಪೋ ಪರಿಸರವು ಗಬ್ಬು ವಾಸನೆಯೂ ಬೀರುತ್ತಿದೆ

ಆರೋಗ್ಯ ಸಮಸ್ಯೆ ಆತಂಕ
ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಲ್ಲಿನ ಮಾಲಿನ್ಯ ಸಂಸ್ಕರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬೇಕಾಗಿದೆ. ಇಲ್ಲವಾದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಕೆಎಸ್‌ಆರ್‌ಟಿಸಿ ಡಿಪ್ಪೋದ ಅಧಿಕಾರಿಗಳು ಹಾಗೂ ನಗರಸಭಾ ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಜನರಿಗೆ ಆರೋಗ್ಯ ತೊಂದರೆ ಕಾಡುವ ಆತಂಕ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next