ಲಕ್ನೋ: ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ವಿವಾದಿತ ಮಾಜಿ ಅಧ್ಯಕ್ಷ ವಾಸೀಂ ರಿಝ್ವಿ ಸೋಮವಾರ ಇಸ್ಲಾಂ ಧರ್ಮವನ್ನು ತ್ಯಜಿಸಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಜೀ ವರದಿ ತಿಳಿಸಿದೆ.
ಇದನ್ನೂ ಓದಿ:ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್
ಮಾಧ್ಯಮದ ವರದಿಯ ಪ್ರಕಾರ, ರಿಝ್ವಿ ಅವರು ಸೋಮವಾರ(ಡಿಸೆಂಬರ್ 06) ಗಾಜಿಯಾಬಾದ್ ನಲ್ಲಿರವ ದಾಸ್ನಾ ದೇವಾಲಯದ ಮಹಾಂತ್ ನರಸಿಂಹ ಆನಂದ ಸರಸ್ವತಿ ಅವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ವಿವರಿಸಿದೆ.
“ ತಮ್ಮ ಮರಣದ ನಂತರ ಹಿಂದೂ ಸಂಪ್ರದಾಯದ ಪ್ರಕಾರವೇ ಶವ ಸಂಸ್ಕಾರ ನಡೆಸಬೇಕು. ಯಾವುದೇ ಕಾರಣಕ್ಕೂ ಶವವನ್ನು ಹೂಳಬಾರದು” ಎಂದು ರಿಝ್ವಿ ಉಯಿಲಿನಲ್ಲಿ ಉಲ್ಲೇಖಿಸಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ತನ್ನ ಶವಕ್ಕೆ ಗಾಜಿಯಾಬಾದ್ ನ ದಾಸ್ನಾ ದೇವಾಲಯದ ಹಿಂದೂ ಸ್ವಾಮೀಜಿ ನರಸಿಂಹ ಆನಂದ ಸರಸ್ವತಿಯವರೇ ಅಗ್ನಿಸ್ಪರ್ಶ ಮಾಡಬೇಕು” ಎಂಬುದಾಗಿ ತಿಳಿಸಿದ್ದಾರೆ.
ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಿಝ್ವಿ ಅವರು, ಕುರಾನ್ ನಲ್ಲಿರುವ 26 ಸಾಲುಗಳನ್ನು ತೆಗೆದುಹಾಕಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ ನಂತರ ತೀವ್ರ ವಿವಾದಕ್ಕೀಡಾಗಿದ್ದರು. ಅಷ್ಟೇ ಅಲ್ಲ ಕೆಲವು ಭಯೋತ್ಪಾದಕ ಸಂಘಟನೆಗಳು ತನ್ನ ಶಿರಚ್ಛೇದನಕ್ಕೆ ಕರೆ ಕೊಟ್ಟಿದ್ದು, ಇದರಿಂದ ತನ್ನ ಜೀವಕ್ಕೆ ಅಪಾಯ ಇದೆ ಎಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದರು.
ಏತನ್ಮಧ್ಯೆ ಸುಪ್ರೀಂಕೋರ್ಟ್, ಇದೊಂದು ಹುಡುಗಾಟದ ಅರ್ಜಿಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿ, ಅರ್ಜಿದಾರ ರಿಝ್ವಿಗೆ 50,000 ರೂಪಾಯಿ ದಂಡ ವಿಧಿಸಿತ್ತು. ಪೈಗಂಬರರಿಗೆ ಅವಮಾನ ಎಸಗಿರುವುದಾಗಿ ಆರೋಪಿಸಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ರಿಝ್ವಿ ವಿರುದ್ಧ ನವೆಂಬರ್ 17ರಂದು ದೂರು ದಾಖಲಿಸಿದ್ದರು.