ವಾಡಿ: ಮರಳು ತುಂಬಿದ್ದ ಟಿಪ್ಪರ್ ವಾಹನವೊಂದು ಚರಂಡಿಗೆ ಕುಸಿದು ಬಾಲಕ ಮೃತಪಟ್ಟ ಘಟನೆ ಬುಧವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆ ಬಡಾವಣೆಯಲ್ಲಿ ಸಂಭವಿಸಿದೆ.
ಪಟ್ಟಣದ ಪೊಲೀಸ್ ಠಾಣೆ ಹಿಂಬದಿ ಬಡಾವಣೆಯ ಮುಕುಂದ (22) ಸಾವಿಗೀಡಾದ ನತದೃಷ್ಟ ಬಾಲಕ.
ಕಟ್ಟಡ ಕಾಮಗಾರಿಗೆಂದು ಸಂಜೆ ಮರಳು ತರಿಸಲಾಗಿತ್ತು. ಹಿಮ್ಮುಖವಾಗಿ ಬಡಾವಣೆಯ ಒಳಗೆ ವಾಹನ ತರಲಾಗುತ್ತಿತ್ತು. ಗಲ್ಲಿ ರಸ್ತೆಯ ಕೆಳಗೆ ದೊಡ್ಡ ಚರಂಡಿಯಿದ್ದು, ಪುರಸಭೆಯವರು ಕಾಂಕ್ರೀಟ್ ನಿಂದ ಮುಚ್ಚಿ ಮೇಲ್ಚಾವಣಿ ರೂಪದಲ್ಲಿ ರಸ್ತೆಗೆ ಹೊಂದಿಸಲಾಗಿತ್ತು. ಆ ಮೂಲಕ ಬಡಾವಣೆಯ ಮಕ್ಕಳ ಸುರಕ್ಷತೆ ಕಾಪಾಡಲಾಗಿತ್ತು. ಅದಾಗ್ಯೂ ಸುಮಾರು 14 ಟನ್ ತೂಕದ ಮರಳು ಟಿಪ್ಪರ್ ಬಡಾವಣೆಯ ಗಲ್ಲಿ ರಸ್ತೆಯಲ್ಲಿ ಏಕಾಏಕಿ ಚಕ್ರಗಳು ಚರಂಡಿಗೆ ಬಿದ್ದ ಪರಿಣಾಮ ಟಿಪ್ಪರ್ ಉರುಳಿ ಬಿದ್ದಿದೆ. ವಾಹನದ ಹತ್ತಿರವೇ ನಿಂತಿದ್ದ ಮೂವರು ಬಾಲಕರ ಮೇಲೆ ಭಾರಿ ಪ್ರಮಾಣದಲ್ಲಿ ಮರಳು ಬಿದ್ದಿದೆ. ಹೇಗೋ ಇಬ್ಬರು ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲಬುರ್ಗಿ ನಗರದಿಂದ ಸಂಬಂಧಿಕರ ಮನೆಗೆ ತಾಯಿ ಜೊತೆಗೆ ಬಂದಿದ್ದ ಬಾಲಕ ಮುಕುಂದ ಟಿಪ್ಪರ್ ಕೆಳಗೆ ಸಿಕ್ಕು ಅಪ್ಪಚ್ಚಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವಾಡಿ ಠಾಣೆ ಪೊಲೀಸರು, ಎಸಿಸಿ ಕಂಪನಿಯ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಸುಮಾರು ನಾಲ್ಕು ತಾಸು ರಕ್ಷಣಾ ಕಾರ್ಯ ಮುಂದು ವರೆಸಿದ್ದರು. ಆದರೂ ಬಾಲಕ ಬದುಕಿಬರಲಿಲ್ಲ. ಹೆತ್ತ ಮಗನ ಮೃತ ದೇಹ ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.