ಹೊಸದಿಲ್ಲಿ/ಮುಂಬಯಿ: ಫ್ರಿಜ್, ವಾಷಿಂಗ್ ಮೆಷಿನ್, ಎ.ಸಿ. ಬಹಳ ದುಬಾರಿಯಾಗಿದೆ ಎಂದು ಅನ್ನಿಸುತ್ತಾ ಇದೆಯಾ? ಹಾಗಿದ್ದರೆ ಕೊಂಚ ದಿನ ಕಾಯಿರಿ. ಅವುಗಳ ದರ ಮತ್ತಷ್ಟು ಇಳಿಕೆಯಾಗಲಿದೆ.
ಸದ್ಯ ಈ ವಸ್ತುಗಳು ಐಶಾರಾಮಿ ವಸ್ತು ಗಳ ಪಟ್ಟಿಯಿದ್ದು, ಜಿಎಸ್‌ಟಿಯ ಶೇ.28ರ ತೆರಿಗೆ ಸ್ಲಾéಬ್‌ನಲ್ಲಿ ಇವೆ. ಶೀಘ್ರದಲ್ಲಿಯೇ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಸ್ತುಗಳ ತೆರಿಗೆಯ ಪ್ರಮಾಣವನ್ನು ಶೇ.18ಕ್ಕೆ ಇಳಿಕೆ ಮಾಡುವ ಸಾಧ್ಯತೆೆ ಇದೆ. ಗೃಹೋಪಯೋಗಿ ವಸ್ತುಗಳ ಜಿಎಸ್‌ಟಿ ದರ ಇಳಿಕೆ ಮಾಡುವ ಮೂಲಕ ಮನೆಯೊಡತಿಯರ ಮನಸ್ಸು ಗೆಲ್ಲುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ. ಒಂದು ವೇಳೆ ಈ ಚಿಂತನೆ ಜಾರಿಗೆ ಬಂದದ್ದೇ ಆದರೆ, ಫ್ರಿಜ್, ವಾಷಿಂಗ್ ಮೆಷಿನ್ ಮತ್ತಿತರ ವಸ್ತುಗಳ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ಇತ್ತೀಚೆಗೆ ಗುವಾಹಟಿಯಲ್ಲಿ ಮುಕ್ತಾಯ ವಾದ ಮಂಡಳಿ ಸಭೆಯಲ್ಲಿ 178 ವಸ್ತುಗಳ ಮೇಲೆ ತೆರಿಗೆಯ ಪ್ರಮಾಣವನ್ನು ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿತ್ತು. ಮುಂದಿನ ಸಭೆಯಲ್ಲಿ ಐಷಾರಾಮಿ ವಸ್ತುಗಳನ್ನು ಹೊರತುಪಡಿಸಿ ಶೇ.28ರ ಸ್ಲಾéಬ್‌ನಲ್ಲಿರುವ ಇತರ ಸರಕುಗಳ ಜಿಎಸ್‌ಟಿಯನ್ನು ಶೇ.18ಕ್ಕೆ ಇಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿಗೆ 15ನೇ ಸ್ಥಾನ: ನೋಟು ಅಮಾನ್ಯ, ಜಿಎಸ್‌ಟಿ ಜಾರಿಯಿಂದಾಗಿ ನಗರ ಮತ್ತು ಪಟ್ಟಣಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆ ಕುಂಠಿತವಾಗಿದೆ. ಪ್ರೈಸ್ ವಾಟರ್ ಕೂಪರ್ (ಪಿಡಬ್ಲೂéಸಿ), ಅರ್ಬನ್ ಲ್ಯಾಂಡ್ ಇನ್‌ಸ್ಟಿಟ್ಯೂಟ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾ ಗಿದೆ. 2 ಪ್ರಮುಖ ನಿರ್ಣಯಗಳು ಜಾರಿಯಾದ ಬಳಿಕ ನಗರ, ಪಟ್ಟಣ ಪ್ರದೇಶಗಳ ಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಬಂಡವಾಳ ಹೂಡಿಕೆ ಪ್ರಮಾಣ ತಗ್ಗಿದೆ ಹಾಗೂ ಅಭಿವೃದ್ಧಿಯ ವೇಗಕ್ಕೆ ತಡೆಯೊಡ್ಡಿದೆ ಎಂದು ಸಮೀಕ್ಷೆ ಕಂಡುಕೊಂಡಿದೆ. ಇದುವರೆಗೆ 2ನೇ ಸ್ಥಾನದಲ್ಲಿದ್ದ ಮುಂಬಯಿ 2 ಪ್ರಮುಖ ನಿರ್ಣಯಗಳು ಜಾರಿಯಾದ ಬಳಿಕ 12ನೇ ಸ್ಥಾನಕ್ಕೆ ಕುಸಿದಿದೆ. ಅಭಿವೃದ್ಧಿ ಸೂಚ್ಯಂಕದಲ್ಲಿ 8ನೇ ಸ್ಥಾನ ಪಡೆದಿದೆ. ಬಂಡವಾಳ ಹೂಡಿಕೆ ಆಕರ್ಷಿಸುವ ನಗರಗಳ ಪೈಕಿ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದಿಲ್ಲಿಗೆ ಕ್ರಮವಾಗಿ 15 ಮತ್ತು 20ನೇ ಸ್ಥಾನ ಸಿಕ್ಕಿದೆ. ಕಳೆದ ವರ್ಷ ಈ ಎರಡು ನಗರಗಳು ಕ್ರಮವಾಗಿ 1 ಮತ್ತು 13 ಸ್ಥಾನದಲ್ಲಿದ್ದವು.ಅಭಿವೃದ್ಧಿ ಸೂಚ್ಯಂಕದಲ್ಲಿ ಕ್ರಮವಾಗಿ ಬೆಂಗಳೂರು, ದಿಲ್ಲಿಗೆ ಕ್ರಮವಾಗಿ 16 ಮತ್ತು 18ನೇ ಸ್ಥಾನ ಪಡೆದುಕೊಂಡಿವೆ.