Advertisement

ಬಟ್ಟೆ ತೊಳೆಯುವುದು ಲಿಂಗಪೂಜೆಗೆ ಸಮ

10:33 AM Feb 02, 2018 | Team Udayavani |

ಕಲಬುರಗಿ: ಲಿಂಗ ಪೂಜೆ ಮಾಡುವುದು ಮನದ ಮೈಲಿಗೆ ತೊಳೆಯಲು, ಬಟ್ಟೆ ತೊಳೆಯುವುದರಿಂದ ದೇಹದ ಮೈಲಿಗೆ ತೊಳೆಯುತ್ತದೆ. ಆದ್ದರಿಂದ ಬಟ್ಟೆ ತೊಳೆಯುವುದು ಹಾಗೂ ಮೈಲಿಗೆ ತೊಳೆಯುವುದು ಲಿಂಗ ಪೂಜೆಗೆ ಸಮಾನ ಎಂದು ಚಿಗರಳ್ಳಿಯ ಮರಳಶಂಕರ ದೇವರ ಗುರುಪೀಠದ ಜಗದ್ಗುರು ಸಿದ್ದಬಸವ ಕಬೀರ ಮಹಾಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿವಾಳ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ದೊಡ್ಡವರು ಹೊಲಸು ಮಾಡುತ್ತಾರೆ, ಸಣ್ಣವರು ಅದನ್ನು ತೊಳೆಯುತ್ತಾರೆ. ಇದು ಜಗದ ರೂಢಿಯಾಗಿದೆ. ಇವತ್ತು ಲಿಂಗಾಯತ ಎನ್ನುವುದು ದೊಡ್ಡ ವಿವಾದವಾಗಿದೆ. ಲಿಂಗಾಯತರು ಯಾರು? ವಿಭೂತಿ, ಲಿಂಗ ಕಟ್ಟಿಕೊಂಡವನು ಲಿಂಗಾಯತ ಅಲ್ಲ. ಕಷ್ಟದಲ್ಲಿದ್ದವನ, ತುಳಿತಕ್ಕೊಳಗಾದವನ ಕೈ ಹಿಡಿದು ಎತ್ತುವವನೇ ಲಿಂಗಾಯತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಿಂಗಾಯತ ಧರ್ಮ ಸಂಕಷ್ಟದಲ್ಲಿದ್ದಾಗ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮತ್ತು ಸಮಗಾರ ಹರಳಯ್ಯ ಕಾಪಾಡಿದರು. ಬಿಜ್ಜಳರಾಜನ ತಂತ್ರ ಮತ್ತು ದಾಳಿಯನ್ನು ಮೆಟ್ಟಿ ನಿಂತರು. ವಚನಗಳ ಸಮೇತ ಶರಣರನ್ನು ರಕ್ಷಣೆ ಮಾಡಿದರು. ಆಗ ಮಾಚಿದೇವನ ಕೈಯಲ್ಲಿ ಖಡ್ಗಬಂತು ಎಂದರು.

ಕಸಗೂಡಿಸುವ ಕಾಯಕದ ಶರಣೆ ಸತ್ಯಕ್ಕ ಕಸಗೂಡಿಸುವರ, ಚಪ್ಪಲಿ ಹೊಲೆಯುವರ, ಬಟ್ಟೆ ತೊಳೆಯುವರ ರಕ್ಷಣೆಗೆಗಾಗಿ ಮತ್ತು ಕಾಯಕ ತತ್ವ ಹರಡಲು ಲಿಂಗಾಯತ ಧರ್ಮವನ್ನು ಕಟ್ಟಲು ಆಲೋಚನೆ ವ್ಯಕ್ತಪಡಿಸಿದಾಗ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರು ಅದನ್ನು ಬಲವಾಗಿ ಸಮರ್ಥನೆ ಮಾಡಿದ್ದರು. ಆ ವೇಳೆಯನ್ನು ಯಾರು ವಿರೋಧಿಸುತ್ತಾರೋ ಅವರನ್ನು ಹೊರ ಹಾಕುವ ಧೈರ್ಯದ ಮಾತುಗಳನ್ನು ಹೇಳಿ ಔಚಿತ್ಯವನ್ನು ಪ್ರತಿಪಾದಿಸಿದ್ದರು. ಆಗ ಬಸವಣ್ಣರಾದಿಯಾಗಿ ಎಲ್ಲರೂ ಇದನ್ನು ಒಪ್ಪಿದ್ದರು. ಆಗ ಲಿಂಗಾಯತ ಜಾರಿಗೆ ಬಂತು ಎಂದರು.
 
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಸರಕಾರ ಎಲ್ಲ ಸಣ್ಣ ಸಮುದಾಯಗಳ ಸುರಕ್ಷತೆ ಮತ್ತು ಅವುಗಳ ಅಭ್ಯುದಯಕ್ಕಾಗಿ ಅರ್ಥಿಕ ನೆರವು ನೀಡಿದೆ. ಅಲ್ಲದೆ, ಮಡಿವಾಳ ಮಾಚಿದೇವ ಜಯಂತಿ ಆಚರಿಸಲು ನಿರ್ಧಾರ ಕೈಗೊಂಡಿರುವುದು ಮಡಿವಾಳ ಸಮುದಾಯದ ಬಗ್ಗೆ ಇರುವ ಕಾಳಜಿ ತೋರುತ್ತದೆ ಎಂದರು. ಶರಣರು 12ನೇ ಶತಮಾನದಲ್ಲಿ ರಚನೆ ಮಾಡಿರುವ ವಚನ ಸಾಹಿತ್ಯವನ್ನು ನಾವು ಗುತ್ತಿಗೆ ಹಿಡಿದಂತೆ ನಮ್ಮ ನಮ್ಮ ಸಮಾಜಗಳಿಗೆ ಸೀಮಿತ ಮಾಡಿಕೊಂಡಿದ್ದೇವೆ. ಆದರೆ, ಎಲ್ಲ ಜಾತಿಯ, ವರ್ಗದ ಶರಣರು ಇಡೀ ಮನುಕುಲಕ್ಕಾಗಿ ವಚನಗಳನ್ನು ಬರೆದಿದ್ದಾರೆ. ಅದನ್ನು ಎಲ್ಲ ವರ್ಗದವರು ಓದಬೇಕಿದೆ. ಬದುಕಿನ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಮಹಾನಗರ ಪಾಲಿಕೆ ಮೇಯರ್‌ ಶರಣಕುಮಾರ ಮೋದಿ, ಜಿಲ್ಲಾ ಮಡಿವಾಳ ಸಂಘದ ಶಿವಪುತ್ರ ಎಸ್‌. ಮಲ್ಲಾಬಾದಕರ್‌ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಮಲ್ಲಣ್ಣ ಎಸ್‌. ಮಡಿವಾಳ ವಿಶೇಷ ಉಪನ್ಯಾಸ ನೀಡಿದರು. ದತ್ತಪ್ಪ ಸಾಗನೂರು ಹಾಗೂ ಸಮಾಜ ಬಾಂಧವರು ಇದ್ದರು.

ಸೃಷ್ಟಿ ಒಂದೇ.. ಮೇಲು- ಕೀಳು ಯಾಕೆ?
ಸಣ್ಣ ಸಣ್ಣ ಸಮುದಾಯಗಳು ಸಂಘಟನೆ ಕೊರತೆಯಿಂದ ಸಾಯುತ್ತವೆ. ಮಡಿವಾಳ ಜಯಂತಿ ಲಿಂಗಾಯತರು ಮುಂದೆ ನಿಂತು ಮಾಡಬೇಕಾಗಿತ್ತು. ಆದರೆ, ಅವರ್ಯಾರು ವೇದಿಕೆಯಲ್ಲಿ ಕಾಣುತ್ತಿಲ್ಲ. ಆದರೆ ಮುಂದೊಂದು ದಿನ ಅವರು ಬರುತ್ತಾರೆ. ಸೃಷ್ಟಿ ಬೇರೆ ಬೇರೆಯಾಗಿದ್ದರೆ ಗೌಡರ ಮನೆಯ ಗಾಳಿ ಮತ್ತು ದೀಪ, ದಲಿತರ ಮನೆಯ ಗಾಳಿ ಮತ್ತು ದೀಪ ಬೇರೆಬೇರೆ ಆಗಿರಬೇಕಿತ್ತು. ಆದರೆ ಒಂದೇ ಇದೆಯಲ್ಲ, ಇಷ್ಟಿದ್ದರೂ ಮೇಲು ಕೀಳು ಯಾಕೆ? 
●ಸಿದ್ದಬಸವ ಕಬೀರದಾಸ್ಡ, ಜಗದ್ಗುರು, ಚಿಗರಳ್ಳಿಯ ಮರಳಶಂಕರ ದೇವರ ಗುರುಪೀಠ

Advertisement
Advertisement

Udayavani is now on Telegram. Click here to join our channel and stay updated with the latest news.

Next