Advertisement

ಶುದ್ಧ ನೀರಿನ ಘಟಕಕ್ಕೆ ದುರಸ್ತಿ ಭಾಗ್ಯ ಎಂದು?

02:46 PM May 12, 2022 | Team Udayavani |

ನಾಯಕನಹಟ್ಟಿ: ಜೋಗಿಹಟ್ಟಿ ಗ್ರಾಮದಲ್ಲಿರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿ ಎರಡು ವರ್ಷಗಳಾದರೂ ರಿಪೇರಿ ಭಾಗ್ಯ ಕಂಡಿಲ್ಲ.

Advertisement

ಗೌಡಗೆರೆ ಗ್ರಾಪಂ ವ್ಯಾಪ್ತಿಯಲ್ಲಿರುವ ಜೋಗಿಹಟ್ಟಿ ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳಿವೆ. ಒಂದು ಘಟಕ ಮೂರು ವರ್ಷಗಳ ಹಿಂದೆ ಉದ್ಘಾಟನೆಗೊಂಡಿದೆ. ಮತ್ತೂಂದು ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಗ್ರಾಮದಲ್ಲಿರುವ ಎರಡೂ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಸಂಗ್ರಹಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಗ್ರಾಮದಿಂದ ನಾಲ್ಕೈದು ಕಿಮೀ ದೂರದಿಂದ ಕ್ಯಾನ್‌ ಗಳಲ್ಲಿ ನೀರು ತರಬೇಕಾಗಿದೆ. ಇದಕ್ಕಾಗಿ ಸಮೀಪದ ಗೌಡಗೆರೆ, ಮಲ್ಲೂರಹಟ್ಟಿ ಗ್ರಾಮಕ್ಕೆ ನೀರಿಗಾಗಿ ಹೋಗಾಗಬೇಕಾದ ಅನಿವಾರ್ಯತೆ ಇದೆ.

ಮೊದಲನೇ ಘಟಕ ಒಂದೆರಡು ದಿನ ಕಾರ್ಯ ನಿರ್ವಹಿಸಿದ ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮೂರು ವರ್ಷಗಳ ಹಿಂದೆ ನಿರ್ಮಿಸಿದ ಘಟಕದ ಯಂತ್ರಗಳು ತುಕ್ಕು ಹಿಡಿದು ಸುತ್ತಲಿನ ಗಾಜುಗಳು ಒಡೆದಿವೆ. ಎರಡು ವರ್ಷಗಳ ಹಿಂದೆ ನಿರ್ಮಿಸಿದ ಘಟಕ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದೆ. 1500ಕ್ಕೂ ಹೆಚ್ಚು ಜನಸಂಖ್ಯೆ ಯಿರುವ ಗ್ರಾಮದಲ್ಲಿ ಎಸ್‌ಸಿ-ಎಸ್‌ಟಿ ಹಾಗೂ ಗೊಲ್ಲ ಸಮುದಾಯದ ಜನರು ಹೆಚ್ಚಾಗಿದ್ದಾರೆ. ಬಡವರು 5 ರೂ. ನಾಣ್ಯ ಹಾಕಿ ಶುದ್ಧ ಕುಡಿಯುವ ನೀರು ಪಡೆಯುತ್ತಿದ್ದರು. ಆದರೆ ಇದೀಗ ಜನರಿಗೆ ಫ್ಲೋರೈಡ್‌ಯುಕ್ತ ಬೋರ್‌ವೆಲ್‌ ನೀರೇ ಗತಿಯಾಗಿದೆ. ಗ್ರಾಮದ ಜನರನ್ನು ಫ್ಲೋರೈಡ್‌ ಸಮಸ್ಯೆ ಕಾಡುತ್ತಿದೆ. ಅತಿ ಹೆಚ್ಚಿನ ಲವಣ ಸಾಂದ್ರತೆ ಈ ನೀರಿನಲ್ಲಿದೆ. ಇದೇ ಕಾರಣದಿಂದ ಗ್ರಾಮಕ್ಕೆ ಎರಡು ಘಟಕಗಳನ್ನು ಸರಕಾರ ನೀಡಿತ್ತು. ಸಮೀಪದಲ್ಲಿರುವ ಚಿಕ್ಕ ಕೆರೆಯಲ್ಲಿ ಹದಿನೈದು ವರ್ಷಗಳಿಂದ ನೀರು ಹರಿದಿಲ್ಲ. ಹೀಗಾಗಿ ಅಂತರ್ಜಲದ ಮಟ್ಟ ಕುಸಿದಿದೆ. ಬೋರ್‌ವೆಲ್‌ ಗಳಲ್ಲಿನ ಫ್ಲೋರೈಡ್‌ ತುಂಬಿದ ನೀರನ್ನೇ ಜನರು ಅವಲಂಬಿಸಿದ್ದಾರೆ. ನೂರಾರು ಜನರು ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಪಂಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಫ್ಲೋರೈಡ್‌ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಾಪಂ ಅಥವ ಜಿಪಂ ತಕ್ಷಣ ದುರಸ್ತಿಗೊಳಿಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. -ಜೆ.ಟಿ. ತಿಪ್ಪೇಸ್ವಾಮಿ, ಜೋಗಿಹಟ್ಟಿ

Advertisement

ನಾನು ಇಲ್ಲಿನ ಗ್ರಾಪಂಗೆ ಬಂದು ಕೆಲವೇ ದಿನಗಳಾಗಿವೆ. ಇದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆ ಕಾರ್ಯ ನಿರ್ವಹಿಸಿಲ್ಲ. ಈ ಬಗ್ಗೆ ತಾಪಂನಲ್ಲಿನ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ನೀರು ಘಟಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. -ಇನಾಯತ್‌ ಪಾಷಾ, ಪಿಡಿಒ, ಗೌಡಗೆರೆ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next