Advertisement

ವೀರಮರಣವನ್ನಪ್ಪಿದ ಯೋಧ ತಂದೆಯ ಇಬ್ಬರು ಪುತ್ರರು ಸೇನೆಗೆ!

12:37 PM Nov 03, 2019 | mahesh |

ಉಡುಪಿ: ಸಾಮಾನ್ಯವಾಗಿ ಒಂದು ಹಾದಿಯಲ್ಲಿ ಸಾಗುವಾಗ ಅಪಾಯವಿದೆ ಎಂಬ ಸೂಚನೆ ಸಿಕ್ಕಿದ ತತ್‌ಕ್ಷಣ ದಾರಿ ಬದಲಿಸುತ್ತೇವೆ. ಆದರೆ ಅಪ್ಪ ದೇಶಕ್ಕಾಗಿ ಹೋರಾಡಿ ವೀರಮರಣವನ್ನು ಅಪ್ಪಿದ ಉದಾಹರಣೆ ಕಣ್ಣೆದುರೇ ಇದ್ದರೂ ಅವರ ಇಬ್ಬರು ಮಕ್ಕಳೂ ತಾಯಿಯ ಒತ್ತಾಸೆಯಿಂದ ಸೇನೆಯ ಸೇವೆಗೇ ಸೇರುವುದು ಅಸಾಮಾನ್ಯ ಹಾದಿ. ಅಂಥ ಕುಟುಂಬವೊಂದರ ಸುದ್ದಿ ಇದು.

Advertisement

20 ವರ್ಷಗಳ ಹಿಂದೆ ಜಮ್ಮು -ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿದಾಳಿ ನಡೆಸುವ ಸಂದರ್ಭ ವೀರಮರಣನ್ನಪ್ಪಿದ ಲೆಫ್ಟಿನೆಂಟ್‌ ಕರ್ನಲ್‌ ಅಜಿತ್‌ ಮತ್ತು ಶಕುಂತಲಾ ದಂಪತಿಯ ಪುತ್ರರಾದ ಮೇಜರ್‌ ನಿರ್ಭಯ್‌ (27) ಇಂದು ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರ ಅಕ್ಷಯ್‌
(25) ನೌಕಾಪಡೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ತಂದೆ ಅರ್ಧದಲ್ಲಿ ಬಿಟ್ಟು ಹೋದ ದೇಶ
ಸೇವೆಯನ್ನು ಮಕ್ಕಳು ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. ಇದಕ್ಕೆ ಪೂರ್ಣ ಬೆಂಬಲವಾಗಿರು ವುದು ಮಹಾತಾಯಿ ಶಕುಂತಲಾ.

1999ರ ಅ. 30ರ ಕಹಿ ನೆನಪು
1999ರ ಅ.30ರಂದು ಜುಮ್ಮು- ಕಾಶ್ಮೀರದ ಸುರಾನ್‌ಕೋಟ್‌ನ ಪೂಂಛ… ಪ್ರದೇಶದಲ್ಲಿ ಉಗ್ರರಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಲೆ|ಕ| ಅಜಿತ್‌ (39) ಸೇರಿದಂತೆ ನಾಲ್ವರು ಸೈನಿಕರು ದಾಳಿ ನಡೆಸಿದರು. ಅಜಿತ್‌ ಅವರು ಇಬ್ಬರು ಉಗ್ರರನ್ನು ವಧಿಸಿದ್ದರು. ಆದರೆ ಉಗ್ರರ ಪ್ರತಿ ದಾಳಿಯಲ್ಲಿ ಗುಂಡು ಅಜಿತ್‌ ದೇಹ ಸೇರಿತ್ತು. ಸೈನಿಕರು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ದಲ್ಲಿಯೇ ಮೃತ ಪಟ್ಟರು. ಇವರ ಅಮೂಲ್ಯ ಸೇವೆಗಾಗಿ ಆಗ ರಾಷ್ಟ್ರಪತಿ ಯಾಗಿದ್ದ ನಾರಾಯಣನ್‌ 2000ರಲ್ಲಿ ನೀಡಿದ ಶೌರ್ಯ ಪದಕವನ್ನು ಶಕುಂತಲಾ ಸ್ವೀಕರಿಸಿದ್ದರು.

ಯೋಧನ ಮಡದಿಯ ದೇಶ ಪ್ರೇಮ!
ಉಗ್ರರ ದಾಳಿಯಲ್ಲಿ ಅಜಿತ್‌ ವೀರಮರಣನ್ನಪ್ಪಿದಾಗ ನಿರ್ಭಯ್‌ಗೆ 7 ವರ್ಷ ಮತ್ತು ಅಕ್ಷಯ್‌ 5 ವರ್ಷ. ತಂದೆಗೆ ಏನಾಗಿದೆ ಎನ್ನುವ ಅರಿವಿಲ್ಲದ ಪ್ರಾಯ. ಮನೆಯ ಜವಾಬ್ದಾರಿ ಹೊತ್ತ ಶಕುಂತಲಾ ಅವರಿಗೆ ತನ್ನ ಪತಿ ತನ್ನಿಂದ ಅಗಲಿದ್ದಾರೆ ಎನ್ನುವುದಕ್ಕಿಂತ ದೇಶ ಸೇವೆಯನ್ನು ಅರ್ಧಕ್ಕೆ ಬಿಟ್ಟು ಹೋದರು ಎನ್ನುವ ನೋವು ಬಹಳ ಕಾಡಿತ್ತು. ಅದಕ್ಕಾಗಿ 20 ವರ್ಷ ಗಳಿಂದ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದರು.

20 ವರ್ಷಗಳ ಮಹಾ ತಯಾರಿ
ಪತಿಯ ಮರಣದ ಅನಂತರ ಶಕುಂತಲಾ ಅವರು ದಿಲ್ಲಿ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದ್ದರು. ತನ್ನ ಮಕ್ಕಳನ್ನು ಸೇನೆಗೆ ಸೇರಿಸಬೇಕು ಎನ್ನುವ ಛಲದಿಂದ ಬಾಲ್ಯದಿಂದಲೇ ತಂದೆ ಮತ್ತು ಸೈನಿಕರ ಯಶೋ ಗಾಥೆಗಳನ್ನು ಹೇಳುತ್ತ ಬಂದಿದ್ದರು. ಮಕ್ಕಳಿಬ್ಬರನ್ನು ಸೈನಿಕರ ಶಾಲೆಗೆ ಸೇರಿಸಿದರು. ತಾನು ಕಿಂಡರ್‌ಗಾರ್ಟನ್‌ನಿಂದ ತೊಡಗಿ ಹಂತಹಂತವಾಗಿ ಬೆಳೆದ ಶಕುಂತಲಾ, ಪ್ರಸ್ತುತ ಬೆಂಗಳೂರಿನ ಶಾಲೆಯೊಂದರಲ್ಲಿ ಪ್ರಾಂಶುಪಾಲೆಯಾಗಿದ್ದಾರೆ.

Advertisement

ಯೋಧನಿಗೆ ಉಡುಪಿ ನಂಟು
ಉಡುಪಿ ನಿವಾಸಿಯಾಗಿದ್ದು, “ನ್ಯೂ ಇಂಡಿಯಾ ವಿಮೆ’ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಿ| ವಾಸುದೇವ್‌ ಭಂಡಾರಕರ್‌ ಅವರ ಮೂರನೇ ಪುತ್ರ ಲೆ|ಕ| ಅಜಿತ್‌. ಅವರಿಗೆ ಬಾಲ್ಯದಿಂದಲೇ ದೇಶದ ಬಗ್ಗೆ ಅಪಾರ ಪ್ರೀತಿಯಿತ್ತು. ಇದರಿಂದಾಗಿ ಶಿಕ್ಷಣ ಮುಗಿಸಿದ ಬಳಿಕ ಭೂ ಸೇನೆಗೆ ಸೇರ್ಪಡೆಯಾದರು. ಮದ್ರಾಸ್‌-ಮೈಸೂರು ರೆಜಿಮೆಂಟಿನಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಸೇವೆ ಸಲ್ಲಿಸಿದ್ದರು.

ನಿರ್ಭಯ್‌ 2014ರಲ್ಲಿ ಭೂ ಸೇನೆಗೆ ಸೇರಿದ್ದ. ಎರಡನೇ ಮಗ ಅಕ್ಷಯ್‌ ನೌಕಾಪಡೆಗೆ ಆಯ್ಕೆಯಾಗಿದ್ದು, ತರಬೇತಿ ಪಡೆಯು ತ್ತಿದ್ದಾನೆ. ನನ್ನ ಹಂಬಲ ಮತ್ತು ಅವರ ಪರಿಶ್ರಮದ ಫ‌ಲವಾಗಿ ಸೇನೆಯನ್ನು ಸೇರಿದ್ದಾರೆ. ಒಬ್ಬ ಹುತಾತ್ಮ ಯೋಧನ ಪತ್ನಿಗೆ ಇದಕ್ಕಿಂತ ಹೆಮ್ಮೆ ಇನ್ನೇನಿದೆ!
-ಶಕುಂತಲಾ, ಲೆ|ಕ| ಅಜಿತ್‌ ಅವರ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next