Advertisement

ಸರಿ-ತಪ್ಪುಗಳ ನಡುವೆ ವಾರಿಯರ್

06:42 PM May 16, 2019 | Team Udayavani |

ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸಿನ್ಮಾ’ ಶಾಲೆಯಿಂದ ಹೊರಬಂದ ಸಾವಿರಾರು ವಿದ್ಯಾರ್ಥಿಗಳು, ಈಗಾಗಲೇ ನಾಯಕ, ನಾಯಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಮಂದಿ ನಿರ್ದೇಶಕರಾಗಿದ್ದಾರೆ. ಇನ್ನೂ ಅನೇಕರು ತಂತ್ರಜ್ಞರಾಗಿಯೂ ಗುರುತಿಸಿಕೊಂಡಿದ್ದಾರೆ. ಆ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕೆ ಬಳಿಕ ಪ್ರತಿ ಬ್ಯಾಚ್‌ಗೊಂದು ಕಿರುಚಿತ್ರ ತಯಾರು ಮಾಡುವ ಕೆಲಸವನ್ನು ಟೆಂಟ್‌ ಸಿನ್ಮಾ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ. ಈವರೆಗೆ 49 ಕಿರುಚಿತ್ರಗಳು ತಯಾರಾಗಿರುವುದು ಹೆಗ್ಗಳಿಕೆ. ಇತ್ತೀಚೆಗೆ 50 ನೇ ಕಿರುಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು.

Advertisement

ಟೆಂಟ್‌ ಸಿನ್ಮಾ ಶಾಲೆಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಆದರ್ಶ್‌ ಈಶ್ವರಪ್ಪ ನಿರ್ದೇಶನದ “ದಿ ವಾರಿಯರ್’ ಕಿರುಚಿತ್ರ ಪ್ರದರ್ಶನದ ಬಳಿಕ ಮಾತನಾಡಿದ ಶಾಲೆ ಮುಖ್ಯಸ್ಥ ನಾಗತಿಹಳ್ಳಿ ಚಂದ್ರಶೇಖರ್‌, ಪ್ರತಿ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರತಿಭೆ ತಿಳಿದುಕೊಳ್ಳಲು ನಮ್ಮ ಶಾಲೆ ಕಿರುಚಿತ್ರ ನಿರ್ಮಾಣ ಮಾಡಿಕೊಂಡು ಬಂದಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತಿಳುವಳಿಕೆ ಹೆಚ್ಚಬೇಕೆಂಬ ಉದ್ದೇಶದಿಂದ ನಾವೇ ಅವರನ್ನು ಹುರಿದುಂಬಿಸಿ, ಕಿರುಚಿತ್ರಗಳನ್ನು ತಯಾರು ಮಾಡುತ್ತೇವೆ. ಈಗಾಗಲೇ ಹಲವು ವಿದ್ಯಾರ್ಥಿಗಳು ನಿರ್ದೇಶಿಸಿರುವ ಕಿರುಚಿತ್ರಗಳು ನಿಜಕ್ಕೂ ಅಚ್ಚರಿ ಮೂಡಿಸಿವೆ. 50 ನೇ ಕಿರುಚಿತ್ರ “ದಿ ವಾರಿಯರ್’ ವಿಶೇಷ ಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತಿರುವುದಾಗಿ ಹೇಳಿಕೊಂಡರು ಅವರು.

ಕಿರುಚಿತ್ರ ನಿರ್ದೇಶಿಸಿರುವ ಆದರ್ಶ್‌ ಈಶ್ವರಪ್ಪ ಅವರಿಗೆ ಈ ಕಿರುಚಿತ್ರ ಮಾಡುವ ಯೋಚನೆ ಬಂದಿದ್ದು, ಟಿವಿಯಲ್ಲಿ ಚುನಾವಣೆ ರ್ಯಾಲಿಗಳನ್ನು ನೋಡಿ. ಜಗತ್ತಿನಲ್ಲಿ ಯಾರು ಸರಿ ಇದ್ದಾರೆ ಎಂಬ ಪ್ರಶ್ನೆ ಅವರಲ್ಲಿ ಹುಟ್ಟುಕೊಂಡಿದ್ದೇ ತಡ, “ದಿ ವಾರಿಯರ್’ ಕಥೆಯ ಎಳೆ ಹುಟ್ಟುಕೊಂಡಿತಂತೆ. ಎಲ್ಲರೂ ಅವರು ಸರಿ ಇಲ್ಲ, ಇವರು ಸರಿ ಇಲ್ಲ ಅಂತ ಮಾತಾಡುತ್ತಾರೆ. ಆದರೆ, ಮೊದಲು ನಾವು ಸರಿ ಇದ್ದೇವಾ ಅಂತ ಯಾರೂ ಯೋಚಿಸಲ್ಲ. ಅದೇ ವಿಷಯ ಇಟ್ಟುಕೊಂಡು ಈ ಕಿರುಚಿತ್ರ ಮಾಡಿದ್ದೇನೆ. ಇಲ್ಲಿ ಉತ್ತರ ಕರ್ನಾಟಕದ ಎಂಟು ಮಂದಿ ವಿದ್ಯಾರ್ಥಿಗಳು ನಟಿಸಿದ್ದಾರೆ. ಇಲ್ಲಿ ಸಂದೇಶವೇನೂ ಇಲ್ಲ. ಜಾಗೃತಿ ಮೂಡಿಸುವ ಉದ್ದೇಶವೂ ಇಲ್ಲ. ಇದೊಂದು ಸಣ್ಣಪ್ರಯತ್ನ. ಚಿತ್ರದಲ್ಲಿ ಸಿಂಕ್‌ ಸೌಂಡ್‌ ಬಳಸಲಾಗಿದೆ ಎಂದು ವಿವರ ಕೊಡುತ್ತಾರೆ ಅವರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕನ್ನಡ ಚಿತ್ರರಂಗಕ್ಕೆ ಹೊಸ ಪ್ರಯೋಗಾತ್ಮಕ ಚಿತ್ರಗಳನ್ನು ಕೊಡಲಿ ಎಂದು ಆಶಿಸಿದರು. ವಸಿಷ್ಠ ಸಿಂಹ, ಸುಮನ್‌ನಗರ್‌ಕರ್‌, ಗೌರೀಶ್‌ಅಕ್ಕಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next