ಶುಲ್ಕ ಪಾವತಿಸದೆ ಇದ್ದರೆ ನವೆಂಬರ್ 30ಕ್ಕೆ ಆನ್‌ಲೈನ್ ತರಗತಿ ಬಂದ್ ಮಾಡುವುದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಎಚ್ಚರಿಕೆ ನೀಡಿದೆ. ಇದು ಮೇಲ್ನೋಟಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹಾಕಿದ ಬೆದರಿಕೆ ಯಂತೆ ಕಾಣಿಸಿದರೂ, ಇದು ಸರಕಾರಕ್ಕೆ ಹಾಕಿದ ಸವಾಲು ಎನ್ನಲಡ್ಡಿಯಿಲ್ಲ.
ಕೊರೊನಾ ಅವಧಿಯಲ್ಲಿ ಪಾಲಕರು ಹೇಗೆ ಸಮಸ್ಯೆಯಲ್ಲಿದ್ದಾರೋ, ಹಾಗೆಯೇ ಖಾಸಗಿ ಶಾಲೆಗಳೂ ಹಿಂದೆಂದೂ ಕಾಣದ ಸಂಕಷ್ಟವನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರದ ಪಾತ್ರ ಮಹತ್ವದ್ದು. ಆನ್‌ಲೈನ್ ತರಗತಿಗಳ ಶುಲ್ಕದ ವಿಚಾರಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ನಿರ್ವಹಣೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಗೂ ಪೋಷಕರ ಅರ್ಥಿಕ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸಮತ್ವದ ಹೆಜ್ಜೆ ಇಡಬೇಕಾಗಿದೆ.
ಕೊರೊನಾ ಕಾರಣಕ್ಕೆ ಲಾಕ್‌ಡೌನ್ ಘೋಷಣೆಯಾದ ಬಳಿಕ ಶಾಲೆಗಳು ಸ್ಥಗಿತಗೊಂಡಾಗಿನಿಂದ ಆನ್‌ಲೈನ್ ತರಗತಿಗಳನ್ನು ನಡೆಸುವ ವಿಚಾರದಲ್ಲಿ ಖಾಸಗಿ ಶಾಲೆಗಳು, ಸರಕಾರ ಮತ್ತು ಪೋಷಕರ ನಡುವೆ ತ್ರಿಕೋನ ಗೊಂದಲ ನಿರ್ಮಾಣವಾಗಿ ವಿಷಯ ನ್ಯಾಯಾಲಯದ ಅಂಗಳಕ್ಕೂ ತಲುಪಿತು. ಈಗ ಮತ್ತೆ ಎದ್ದಿರುವ ಶುಲ್ಕ ಗೊಂದಲ ಮತ್ತೂಂದು ಸುತ್ತಿನ ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ ಎನ್ನುವುದನ್ನು ಸರಕಾರ ಮನಗಾಣಬೇಕು.
ಶುಲ್ಕದ ವಿಚಾರದಲ್ಲಿ ಸರಕಾರ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಿದೆ. ಖಾಸಗಿ ಶಾಲೆಗಳು ಒತ್ತಡ ತಂತ್ರಗಳನ್ನು ಬಿಟ್ಟು ಉದಾರತೆ ತೋರಬೇಕಾಗಿದೆ ಮತ್ತು ಪೋಷಕರು ತಮ್ಮ ಅರ್ಥಿಕ ಸ್ಥಿತಿಗತಿಗಳಿಗೆ ತಕ್ಕಂತೆ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕಾಗಿದೆ. ಈ ವಿಚಾರದಲ್ಲಿ ಸರಕಾರ, ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ತ್ರಿಪಕ್ಷೀಯ ಪರಿಹಾರ ಸೂತ್ರ ಕಂಡುಕೊಳ್ಳ ಬೇಕಾಗಿದೆ. ಸರಕಾರ ದೃಢ ನಿಲುವು ತಾಳಬೇಕು, ಖಾಸಗಿ ಶಾಲೆಗಳು ಹಠ ಬಿಡಬೇಕು ಮತ್ತು ಪೋಷಕರು ಮಕ್ಕಳ ಶೈಕ್ಷಣಿಕ ಭವಿಷ್ಯದ ಕುರಿತು ದೂರದೃಷ್ಟಿ ಮತ್ತು ಸಮಚಿತ್ತ ಹೊಂದಿರಬೇಕು. ಹೀಗಾದರೆ ಗೊಂದಲಕ್ಕೆ ತೆರೆ ಎಳೆಯಬಹುದು.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಮಾಹಿತಿಯಂತೆ ರಾಜ್ಯ ಪಠ್ಯಕ್ರಮದ 19 ಸಾವಿರ ಹಾಗೂ ಸಿಬಿಎಸ್‌ಸಿ, ಐಸಿಎಸ್ಸಿ ಪಠ್ಯಕ್ರಮದ ಸಾವಿರ ಶಾಲೆಗಳು ಸೇರಿ ರಾಜ್ಯದಲ್ಲಿ ನರ್ಸರಿಯಿಂದ ಹತ್ತನೆ ತರಗತಿ ವರೆಗೆ ಸುಮಾರು 20 ಸಾವಿರ ಖಾಸಗಿ ಶಾಲೆಗಳಿವೆ. ಇವುಗಳಲ್ಲಿ 48ರಿಂದ 50 ಲಕ್ಷ ಮಕ್ಕಳು ಕಲಿಯುತ್ತಿದ್ದು, ಬೋಧಕ-ಬೋಧಕೇತರ ಸೇರಿ 1.20 ಲಕ್ಷ ಸಿಬಂದಿ ಇದ್ದಾರೆ. ರಾಜ್ಯ ಪಠ್ಯಕ್ರಮದ 19 ಸಾವಿರ ಶಾಲೆಗಳ ಪೈಕಿ 17 ಸಾವಿರ ಶಾಲೆಗಳು ವಾರ್ಷಿಕ 10 ಸಾವಿರದಿಂದ 30 ಸಾವಿರದವರೆಗೆ ಶುಲ್ಕ ಪಡೆಯವ ಶಾಲೆಗಳಿವೆ. ಈ ಪೈಕಿ ಬಹುತೇಕ ಶಾಲೆಗಳು ಮಾಸಿಕ ಕಂತುಗಳನ್ನು ಕಟ್ಟಿಸಿಕೊಂಡು ಶಿಕ್ಷಣ ನೀಡುತ್ತವೆ. ಒಂದು ಅಂದಾಜಿನಂತೆ ರಾಜ್ಯದಲ್ಲಿ 35ರಿಂದ 40 ಲಕ್ಷ ಕುಟುಂಬಗಳು ಖಾಸಗಿ ಶಾಲೆಗಳ ಒಡನಾಟ ಹೊಂದಿವೆ. ಇದರಲ್ಲಿ ಶೇ.90ರಷ್ಟು ಕುಟುಂಬಗಳು ಬಡ ಮಧ್ಯಮ ಕುಟುಂಬಗಳಾಗಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ನಿರ್ಣಾಯಕ ಪಾತ್ರವಹಿಸಬೇಕಿದೆ.
ವಿಪಕ್ಷಗಳೂ ಸಹ ಈ ವಿಚಾರವನ್ನು ಕೇವಲ ರಾಜಕೀಯವಾಗಿ ನೋಡದೆ ಇದೊಂದು ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರ ಎಂದು ಮನಗಂಡು ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸರಕಾರಕ್ಕೆ ಅಗತ್ಯ ಸಲಹೆ ಮತ್ತು ಸಹಕಾರ ನೀಡಬೇಕು.