ಮೆಲ್ಬರ್ನ್: ಏಕದಿನ ಮತ್ತು ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿಯಾಗಿರುವ ಖ್ಯಾತ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸೇರಿದಂತೆ ಆಲ್‌ರೌಂಡರ್‌ಗಳಾದ ಆಸ್ಟನ್ ಅಗರ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರನ್ನು 2024-25ರ ಋತುವಿನ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲು ಕ್ರಿಕೆಟ್ ಆಸ್ಟ್ರೇಲಿಯ ನಿರ್ಧರಿಸಿದೆ.
ವಿಕ್ಟೋರಿಯ ಆರಂಭಿಕ ಮಾರ್ಕಸ್ ಹ್ಯಾರಿಸ್ ಮತ್ತು ವೇಗಿ ಮೈಕಲ್ ನೆಸೆರ್ ಅವರನ್ನು ಕೂಡ ಪಟ್ಟಿಯಿಂದ ಕೈಬಿಡಲಾಗಿದೆ. ಕೇಂದ್ರೀಯ ಗುತ್ತಿಗೆಯನ್ನು 23 ಕ್ರಿಕೆಟಿಗರಿಗೆ ನೀಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.
ಆಸ್ಟ್ರೇಲಿಯ ತಂಡವು ಈ ಋತುವಿನಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಮುಂದಿನ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಹಾಗೂ ವರ್ಷಾಂತ್ಯದಲ್ಲಿ ತವರಿನಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿ ಕೂಡ ಸೇರಿದೆ.
ನಿರೀಕ್ಷೆಯಿಂತೆ ವಾರ್ನರ್ ಅವರನ್ನು ಕೈಬಿಡಲಾಗಿದೆ. ಅವರು ಟಿ20 ವಿಶ್ವಕಪ್ ಬಳಿಕ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಅವರು ಸದ್ಯ ಭಾರತದಲ್ಲಿ ನಡೆಯುತ್ತಿ ರುವ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಸ್ಟೋಯಿನಿಸ್ ಅವರನ್ನು ಕೈಬಿಟ್ಟಿರುವುದು ಗಮನಿಸಬೇಕಾದ ಅಂಶವಾಗಿದೆ. 34ರ ಹರೆಯದ ಅವರು ಸದ್ಯ ಐಪಿಎಲ್‌ನಲ್ಲಿ ಲಕ್ನೋ ತಂಡದ ಪರ ಆಡುತ್ತಿದ್ದಾರೆ.
ವೇಗಿಗಳಾದ ಕ್ಸೇವಿಯರ್ ಬಾಟ್ಲೆìಟ್ ಮತ್ತು ನಥನ್ ಎಲ್ಲಿಸ್ ಅವರಿಗೆ ಮೊದಲ ಬಾರಿ ಗುತ್ತಿಗೆ ಕೊಡುಗೆ ನೀಡಲಾಗಿದೆ. ಅವರಿಬ್ಬರ ಸಹಿತ ವಿಕ್ಟೋರಿಯ ಮತ್ತು ಅಡಿಲೇಡ್ ಸ್ಟ್ರೈಕರ್ ತಂಡದ ಮ್ಯಾಟ್ ಶಾರ್ಟ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯದ ಆಲ್‌ರೌಂಡರ್ ಆರನ್ ಹಾರ್ಡಿ ಅವರು ಈ ಋತುವಿನ ಗುತ್ತಿಗೆ ಪಟ್ಟಿಯಲ್ಲಿರುವ ಹೊಸ ಮುಖಗಳಾಗಿದ್ದಾರೆ. ಈ ನಾಲ್ವರು ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.