Advertisement

ಬಿಸಿಲಿನ ಉರಿಗೆ ಕಡಲಾಳಕ್ಕೆ ಮೀನುಗಳ ಪಯಣ

09:59 AM Feb 21, 2020 | mahesh |

ಮಂಗಳೂರು: ತಾಪಮಾನ ಏರಿಕೆಯ ಪರಿಣಾಮದಿಂದ ಮೀನುಗಳು ತತ್ತರಿಸಿವೆ. ಬಿಸಿಲಿನ ಉರಿ ಹೆಚ್ಚುತ್ತಿದ್ದಂತೆ ಸಮುದ್ರದ ನೀರಿನ ತಾಪ ಕೂಡ ಏರುತ್ತಿದ್ದು, ತಾಳಿಕೊಳ್ಳಲು ಮೀನುಗಳಿಗೂ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಮೀನುಗಳು ಕಡಲಾಳಕ್ಕೆ ಹೋಗುತ್ತಿವೆ.

Advertisement

ಇದರ ಪರಿಣಾಮ ಕರಾವಳಿಗರ ಜೀವನಾಧಾರವಾದ ಮತ್ಸೋದ್ಯಮದ ಮೇಲೂ ಬೀರಿದೆ. ವರ್ಷದಿಂದ ವರ್ಷಕ್ಕೆ ಸೊರಗುತ್ತಿರುವ ಮೀನುಗಾರಿಕೆ ಈ ಋತುವಿನಲ್ಲಂತೂ ಗರಿಷ್ಠ ಕುಸಿತ ಕಂಡಿದೆ. ಶೇ.75 ಬೋಟ್‌ಗಳು ಮೀನುಗಾರಿಕೆ ಸಾಧ್ಯವಾಗದೆ ಬಂದರಿನಲ್ಲಿಯೇ ಲಂಗರು ಹಾಕಿವೆ! ಬದುಕಿಗೆ ಪೂರಕ ವಾತಾವರಣ ಇಲ್ಲದಿದ್ದರೆ ಮೀನುಗಳು ನಿರ್ದಿಷ್ಟ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವಿಜ್ಞಾನಿಗಳು. ಸಾಮಾನ್ಯವಾಗಿ ಜನವರಿ ಮೊದಲ ವಾರದಿಂದ ಕಡಲಿನಲ್ಲಿ ಮೀನಿನ ಲಭ್ಯತೆ ಹೆಚ್ಚಿರುತ್ತದೆ. ಆದರೆ ಈ ಬಾರಿ ಮೀನುಗಾರರ ನಿರೀಕ್ಷೆಯಂತೆ ಮೀನುಗಳು ಬಲೆಗೆ ಬೀಳುತ್ತಿಲ್ಲ.

ಕರಾವಳಿ ಬಂದರುಗಳಿಂದ ಸಾಮಾನ್ಯವಾಗಿ ಮಹಾರಾಷ್ಟ್ರದ ಕಡೆಗೆ ಅನೇಕ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿದ್ದು, ಮರಳುವಾಗ 6ರಿಂದ 7 ಲಕ್ಷ ರೂ. ಬೆಲೆಯ ಮೀನುಗಳನ್ನು ಹೊತ್ತು ತರುತ್ತಿದ್ದವು. ಆದರೆ ಈಗ ಅದರ ಪ್ರಮಾಣ 4 ಲಕ್ಷ ರೂ.ಗೆ ಇಳಿದಿದೆ. ನಷ್ಟದ ಭೀತಿಯಿಂದಾಗಿ ಮಾಲಕರು ತಮ್ಮ ಬೋಟ್‌ಗಳನ್ನು ಕಡಲಿಗೆ ಇಳಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಕಾರ್ಮಿಕರು ಊರಿಗೆ
ಮಂಗಳೂರು ಬಂದರಿನಿಂದ ತೆರಳುವ ಟ್ರಾಲ್‌ ಬೋಟ್‌ಗಳಲ್ಲಿ ಹೆಚ್ಚಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬೋಟ್‌ಗಳು ಲಂಗರು ಹಾಕಿದ ಕಾರಣಕ್ಕೆ ಊರು ಗಳಿಗೆ ತೆರಳಿದ್ದಾರೆ.

ಬಂದರಿನಲ್ಲಿ ಸುಮಾರು 30 ಸಾವಿರ
ಮಂದಿ ನೇರವಾಗಿ ಕೆಲಸ ಮಾಡುತ್ತಿ ದ್ದಾರೆ. ಪರೋಕ್ಷವಾಗಿ ಅಷ್ಟೇ ಮಂದಿ ಉದ್ಯಮವನ್ನು ಅವಲಂಬಿಸಿದ್ದಾರೆ. ಬೋಟುಗಳು ಸಮುದ್ರಕ್ಕೆ ಇಳಿಯದೆ ಅವರೆಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ಒಂದು ಬೋಟು ಮೀನು ಹಿಡಿದು ತಂದರೆ ಅದರಿಂದ ಐಸ್‌ಪ್ಲಾಂಟ್‌ಗಳು, ಬೋಟುಗಳಿಂದ ಮೀನು ತೆಗೆಯುವ ಕಾರ್ಮಿಕರಿಗೂ, ಮೀನು ವ್ಯಾಪಾರಿಗಳಿಗೂ ಕೆಲಸ ಸಿಗುತ್ತದೆ. ಆದರೆ ಈಗ ಇವರೆಲ್ಲರೂ ಸಂತ್ರಸ್ತರಾಗಿದ್ದಾರೆ.

Advertisement

30 ವರ್ಷದಲ್ಲಿ ಹೀಗಾಗಲಿಲ್ಲ
“ನನ್ನ ಮೀನುಗಾರಿಕಾ ವೃತ್ತಿಯ 30 ವರ್ಷಗಳ ಅನುಭವದಲ್ಲಿ ಈವರೆಗೂ ಇಷ್ಟೊಂದು ಸೊರಗಲಿಲ್ಲ. ಕಡಲಿನಲ್ಲಿ ಮೀನು ಲಭ್ಯತೆ ಕಡಿಮೆಯಾಗಿದೆ. ಶೇ. 30ರಷ್ಟು ಬೋಟ್‌ಗಳು ಮಾತ್ರ ಮೀನುಗಾರಿಕೆ ನಡೆಸುತ್ತಿವೆ. ಸಣ್ಣ ಬೋಟ್‌ನವರಿಗೂ ಮೀನು ಸಿಗುತ್ತಿಲ್ಲ’ ಎನ್ನುತ್ತಾರೆ ಮೀನುಗಾರ ಮುಖಂಡ ಮೋಹನ್‌ ಬೆಂಗ್ರೆ.

ನಷ್ಟದ ಪ್ರಮಾಣ
ಅಂಕಿ-ಅಂಶದಂತೆ 2019ರ ಎಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,35,734 ಮೆಟ್ರಿಕ್‌ ಟನ್‌ ಮೀನು ಹಿಡಿಯಲಾಗಿದ್ದು, 1,510 ಕೋಟಿ ರೂ. ವ್ಯವಹಾರವಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿಯೂ 86,265 ಮೆ.ಟನ್‌ ಮೀನು ಹಿಡಿದಿದ್ದು, 900 ಕೋಟಿ ರೂ. ವ್ಯವಹಾರವಾಗಿದೆ. 2018ರ ಮೀನುಗಾರಿಕಾ ಋತುವಿಗೆ ಹೋಲಿಸಿ ಈ ಋತುವಿನ ಡಿಸೆಂಬರ್‌ ಅಂತ್ಯದವರೆಗೆ ಉಭಯ ಜಿಲ್ಲೆಗಳಲ್ಲಿ ಒಟ್ಟು ವಹಿವಾಟಿನಲ್ಲಿ 756 ಕೋಟಿ ರೂ. ವ್ಯತ್ಯಾಸವಿದೆ.

ಹವಾಮಾನ ವೈಪರೀತ್ಯದಿಂದ ಮೀನಿನ ಲಭ್ಯತೆ ಕಡಿಮೆ ನಿಜ. ನೀರಿನ ತಾಪ ಹೆಚ್ಚಾದ ಕಾರಣ ಮೀನುಗಳು ಆಳಕ್ಕೆ ಹೋಗಿರಬಹುದು. ಮೀನುಗಾರರಿಗೆ ಇದರಿಂದ ಹೊಡೆತ ಬಿದ್ದಿದೆ.
– ಡಾ| ಪ್ರತಿಭಾ, ಮಂಗಳೂರಿನ ಸೆಂಟ್ರಲ್‌ ಮರೈನ್‌ ಫಿಶರೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ವಿಜ್ಞಾನಿ

ಹವಾಮಾನ ವೈಪರಿತ್ಯದಿಂದಾಗಿ ಮೀನುಗಳು ಸಿಗುತ್ತಿಲ್ಲ; ಆದ್ದರಿಂದ ನೂರಾರು ಬೋಟ್‌ಗಳು ಕಡಲಿಗಿಳಿದಿಲ್ಲ. ಮೀನುಗಾರರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ.
– ನಿತಿನ್‌ ಕುಮಾರ್‌, ಮೀನುಗಾರ ಮುಖಂಡ

ಸಮುದ್ರದಲ್ಲೇ ಬೆಂದ ಕಪ್ಪೆಚಿಪ್ಪು!
ವೆಲ್ಲಿಂಗ್ಟನ್‌: ಇತ್ತ ನಮ್ಮ ಕರಾವಳಿಯಲ್ಲಿ ಈ ಕಥೆಯಾದರೆ, ಅತ್ತ ನ್ಯೂಜಿಲೆಂಡ್‌ ಕರಾವಳಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಕಪ್ಪೆಚಿಪ್ಪುಗಳ ರಾಶಿ ಪತ್ತೆಯಾಗಿದೆ. ಈ ಕಪ್ಪೆಚಿಪ್ಪುಗಳು ಸಮುದ್ರದಲ್ಲೇ ಬೆಂದು ಹೋಗಿದ್ದು, ಸತ್ತ ಮೀನುಗಳು ದಡಕ್ಕೆ ಬಂದು ತಲುಪುತ್ತಿವೆ. ಹವಾಮಾನ ವೈಪರೀತ್ಯವು ಜಲಚರಗಳ ಮೇಲೂ ಅಡ್ಡಪರಿಣಾಮ ಬೀರುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಕಪ್ಪೆಚಿಪ್ಪುಗಳು ಅತ್ಯಂತ ಪುಟ್ಟ ಮೀನುಗಳು. ಅವುಗಳನ್ನು ಮಾರುಕಟ್ಟೆಗೆ ತಂದ ಬಳಿಕವೂ ಅತ್ಯಲ್ಪ ನೀರಿನಲ್ಲೂ ಅವು ಬದುಕುಳಿದಿರುತ್ತವೆ. ಅವುಗಳು ಸಮುದ್ರದಲ್ಲೇ ಸತ್ತಿವೆ ಎಂದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next