Advertisement

ವರ್ಣಾಲಂಕಾರದ ಮೂಲಕ ಶಿವನಗರ ಹಿ.ಪ್ರಾ. ಶಾಲೆಗೆ ಹೊಸಕಳೆ ತಂದ ಹಳೆ ವಿದ್ಯಾರ್ಥಿಗಳು

03:37 PM Oct 19, 2020 | sudhir |

ಪುಂಜಾಲಕಟ್ಟೆ : ಕೋವಿಡ್ ಕಾರಣದಿಂದ ಶಾಲಾರಂಭಕ್ಕೆ ದಿನ ನಿಗದಿಯಾಗದಿದ್ದರೂ ಶಾಲೆಗಳು ಪುನರಾರಂಭಕ್ಕೆ ಸಜ್ಜುಗೊಳ್ಳುತ್ತಿವೆ. ತಾವು ಕಲಿತ ಶಾಲೆ ಅಂದವಾಗಿ ಆಕರ್ಷಣೀಯವಾಗಬೇಕೆಂದು ಇಲ್ಲೊಂದು ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಸೇರಿ ಶಾಲೆಗೆ ಬಣ್ಣ ಬಳಿದು, ಚಿತ್ತಾರ ಬಿಡಿಸಿ ಶೃಂಗಾರಗೊಳಿಸಿದ್ದಾರೆ.

Advertisement

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ,  ಶಿವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯುವ ಜನರ ತಂಡ ವರ್ಣಾಲಂಕಾರದಿಂದ ಹೊಸರೂಪ ನೀಡಿ ಪ್ರಶಂಸೆ ಗಳಿಸಿದ್ದಾರೆ.

ಕೋವಿಡ್ ಕಾರಣದಿಂದ ದೂರದೂರಿಗೆ ಹೋಗಲಾಗದೆ ಊರಲ್ಲಿರುವ ಶಾಲಾ ಹಳೆವಿದ್ಯಾರ್ಥಿಗಳು  ವಿದ್ಯಾರ್ಥಿಗಳೊಂದಿಗೆ ಸೇರಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡ ತಮ್ಮೂರಿನ ಶಾಲೆಯ ಹೊರ ಮತ್ತು ಒಳಗೋಡೆಗಳನ್ನು ವರ್ಲಿ ಕಲೆಯ ಮೂಲಕ ಆಕರ್ಷಣೀಯಗೊಳಿಸಿ ಲಾಕ್ ಡೌನ್ ಸಮಯವನ್ನು ಸದ್ವಿನಿಯೋಗಪಡಿಸಿಕೊಂಡಿದೆ.

ಬೆಂಗಳೂರುನಲ್ಲಿ  ಸಿವಿಲ್ ಇಂಜಿನಿಯರ್ ವೃತ್ತಿಯಲ್ಲಿರುವ , ಚಿತ್ರಕಲಾವಿದ, ಉತ್ಸಾಹಿ ಯುವಕ ಅವಿನಾಶ್ ಬದ್ಯಾರ್ ನೇತೃತ್ವದಲ್ಲಿ ಜತೆಯಾದ ತಂಡದಿಂದ ಕೋವಿಡ್ ಲಾಕ್ ಡೌನ್ ವಿರಾಮದ ವೇಳೆಯಲ್ಲಿ ರೂಪುಗೊಂಡ ಕ್ರಿಯಾತ್ಮಕ ಚಿಂತನೆಯ ಫಲವೇ ತಾವು ಹಿಂದೆ ಕಲಿತ ಪ್ರಾಥಮಿಕ ಶಾಲೆಗೆ ಕಲೆಯ ಸೊಬಗಿನೊಂದಿಗೆ ಸುಂದರ ರೂಪ ನೀಡುವ ಸುಮಧುರ ಯೋಜನೆ.

Advertisement

ಯುವಕರ ತಂಡ ಒಂದು ತಿಂಗಳ ಯೋಜನೆಯನ್ನು ಸಿದ್ಧಪಡಿಸಿತು, ಚಿತ್ರಕಲೆಯಲ್ಲಿ ಪಳಗಿದವರು, ಹೊಸ ಕಲಾವಿದರು, ಆಸಕ್ತ ವಿದ್ಯಾರ್ಥಿಗಳು ಜತೆಯಾದರು,   ಅವಿನಾಶರ ಕಲ್ಪನೆಯಂತೆ ಕುಂಚ ಹಿಡಿದು ತಾವು ಕಲಿತ ಶಾಲೆಯ ಗೋಡೆಯ ಮೇಲೆ ಹಳೆಯ ನೆನಪುಗಳೊಂದಿಗೆ ಹೊಸ ರೂಪಗಳನ್ನು ಚಿತ್ರಿಸಿದರು.

ತಿಂಗಳು ಕಳೆಯುವಾಗ ಶಾಲೆ ಹೊಸಬಣ್ಣದ ಸೊಗಡಿನೊಂದಿಗೆ ಹೊಸರೂಪ ಪಡೆಯಿತು. ಯುವಕರ ಒಂದು ತಿಂಗಳ ಉತ್ಸಾಹ, ಉಲ್ಲಾಸದ ಪ್ರಯೋಗಶೀಲತೆಯಿಂದ  ಶಿವನಗರ ಶಾಲೆ ವರ್ಲಿ ಕಲೆಯ ಚಿತ್ರ, ಚಿತ್ತಾರದೊಂದಿಗೆ ಅಂದಚೆಂದವಾಗಿ ಕಂಗೊಳಿಸಿತು. ಹಳೆಯ ನೆನಪುಗಳನ್ನು ಹೊತ್ತ ಕಂಬಗಳು, ಗೋಡೆಗಳು ಈಗ ಇನ್ನಷ್ಟು ಹೊಸ ಕಥೆಗಳನ್ನು ಹೊತ್ತು ಸಂಭ್ರಮದಿಂದ ಮೆರೆಯುತ್ತಿದೆ.

ತಂಡದ ಮಾರ್ಗದರ್ಶಕರ, ಸದಸ್ಯರ ಆಸಕ್ತಿ, ಪ್ರತಿಭೆ, ಕೌಶಲ್ಯ ನಿಜಕ್ಕೂ ಮೆಚ್ಚುವಂತದ್ದು. ಶಾಲಾ ಹೊರಾಂಗಣದಲ್ಲಿ ವರ್ಲಿ ಕಲೆಯಲ್ಲಿ ಮೂಡಿಬಂದ ತುಳುನಾಡಿನ ಸಂಸ್ಕೃತಿ, ಆಚರಣೆ, ಆರಾಧನೆ, ಜನಪದ ಸೊಗಡಿನ ಆಕೃತಿಗಳು ಹಾಗೂ ಹಾಲ್‌ನಲ್ಲಿ  ಮೈದಳೆದ ಭಾರತಮಾತೆ ಮತ್ತು  ಶಾರದಾಂಬೆಯ ಕಲಾಕೃತಿಗಳು ಅದ್ಭುತವಾಗಿದೆ, ನೋಡುಗರನ್ನು ಕೈಬೀಸಿ ಶಾಲೆಯೆಡೆಗೆ ಕರೆಯುವಂತಿದೆ. ಸರಕಾರಿ ಶಾಲೆಯ ಉಳಿವು- ಬೆಳವಣಿಗೆಯಲ್ಲಿಯೂ ಈ ಪ್ರಯತ್ನವು ಶ್ಲಾಘನೀಯವೆನಿಸಿದೆ. ಹಿರಿ- ಕಿರಿಯ ಪ್ರತಿಭೆಗಳ ಈ ವಿನೂತನ ಸಾಹಸಕ್ಕೆ ಶಾಲಾ ಶಿಕ್ಷಕವೃಂದ, ಪೋಷಕವೃಂದ ಹಾಗೂ ಸಮುದಾಯದ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next