ಅಳ್ನಾವರ: ತಾಲೂಕು ಕೇಂದ್ರವಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಸ್ಥಳೀಯ ಪಪಂ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ಸ್ವತಂತ್ರ ಅಭ್ಯರ್ಥಿಗಳು ರವಿವಾರ ಭರ್ಜರಿ ಮತಬೇಟೆ ನಡೆಸಿದ್ದು, ಜಿದ್ದಾಜಿದ್ದಿ ಹೋರಾಟಕ್ಕೆ ಕೆಲವು ವಾರ್ಡ್‌ಗಳು ವೇದಿಕೆಯಾಗಿವೆ.
ವಾರ್ಡ್ ನಂ. 5, 10, 12, 14ರಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ವಾರ್ಡ್ 5ರಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯುತ್ತಿದೆ. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಛಗನಲಾಲ ಪಟೇಲ ಮತ್ತು ರಾಜೇಶ ಬೈಕೇರಿಕರ ಇಂದು ಎದುರಾಳಿಗಳಾಗಿದ್ದಾರೆ. ಛಗನಲಾಲ ಕಾಂಗ್ರೆಸ್‌ನಿಂದ ರಾಜೇಶ ಬಿಜೆಪಿಯಿಂದ ಕಣದಲ್ಲಿದ್ದಾರೆ. ಇವರ ನಡುವೆ ಮೆಹಬೂಬ ಜಾತಿಗೇರ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ವಾರ್ಡ್ 10ರಲ್ಲಿ ಹಿಂದಿನ ಅವಧಿ ಉಪಾಧ್ಯಕ್ಷರಾಗಿದ್ದ ಉಸ್ಮಾನ್ ಬಾತಖಂಡೆ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ದಿ| ಮುಜಾಹಿದ್ ಕಂಟ್ರಾಕ್ಟರ ಅವರ ಪುತ್ರ ನದೀಮ್ ಕಂಟ್ರಾಕ್ಟರ ನಡುವೆ ಸ್ಪರ್ಧೆ ನಡೆಯುತ್ತಿದೆ. ವಾರ್ಡ್ 12ರಲ್ಲಿ ಪಪಂ ಮಾಜಿ ಅಧ್ಯಕ್ಷ ಶಿವಾನಂದ ಹೊಸಕೇರಿ ಕಾಂಗ್ರೆಸ್‌ನಿಂದ, ಲಿಂಗರಾಜ ಮೂಲಿಮನಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತರಾದ ಶಿವಲಿಂಗ ಜಕಾತಿ ಹಾಗೂ ರಮೇಶ ಕುನ್ನೂರಕರ ಪಕ್ಷೇತರರಾಗಿ ಕಣದಲ್ಲಿದ್ದು, ಕಣ ರಂಗೇರಿದೆ.
ಎಲ್ಲರ ಚಿತ್ತ ಇತ್ತ: ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಿರುವ 14ನೇ ವಾರ್ಡ್‌ನಲ್ಲಿ ಭರಾಟೆ ಜೋರಾಗಿದ್ದು, ಎಲ್ಲರ ಕಣ್ಣು ಅಲ್ಲಿಯೇ ಇದೆ. ಮಾಜಿ ಶಾಸಕ ದಿ| ಶಶಿಧರ ಅಂಬಡಗಟ್ಟಿ ಅವರ ಪತ್ನಿ ಸಂಧ್ಯಾ ಅವರು ಜೆಡಿಎಸ್‌ನಿಂದ ಕಣದಲ್ಲಿದ್ದಾರೆ. ಇವರಿಗೆ ಎದುರಾಳಿಯಾಗಿ ರಶ್ಮಿ ತೇಗೂರ ಕಾಂಗ್ರೆಸ್‌ನಿಂದ ಹಾಗೂ ಅನ್ನಪೂರ್ಣಾ ಕೌಜಲಗಿ ಬಿಜೆಪಿಯಿಂದ ತುರುಸಿನ ಸ್ಪರ್ಧೆ ಒಡ್ಡಿದ್ದಾರೆ.
ಸ್ಥಳೀಯ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ, ಅಖೀಲ ಭಾರತ ವೀರಶೈವ ಮಹಾಸಭಾದ 2ನೇ ಅವಧಿ ನಿರ್ದೇಶಕರಾಗಿ ಹಾಗೂ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿರುವ ಸಂಧ್ಯಾ ಅಂಬಡಗಟ್ಟಿ ತಮ್ಮ ಪತಿಯ ಸಾಧನೆ ಹಾಗೂ ಕುಟುಂಬದ ಇನ್ನೊಬ್ಬ ಸದಸ್ಯ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರ ವರ್ಚಸ್ಸು ಕೈ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಇಲ್ಲಿ ರಶ್ಮಿ ತೇಗೂರ ಅವರೂ ಪ್ರಭಾವಿ ಪ್ರತಿಸ್ಪರ್ಧಿಯಾಗಿದ್ದಾರೆ. ರಶ್ಮಿ ಅವರ ಪತಿ ಪರಮೇಶ್ವರ ತೇಗೂರ ಹಿಂದಿನ ಅವಧಿಯಲ್ಲಿ ಪುರಸಭೆ ಸದಸ್ಯರಾಗಿದ್ದು, ತಮ್ಮದೇಯಾದ ಹಿಡಿತ ಹೊಂದಿದ್ದಾರೆ.