Advertisement

ವಾರ್ಡನ್‌ ಬರ್ತಿದಾರೆ ರನ್‌ ಫಾಸ್ಟ್‌!

06:00 AM Dec 04, 2018 | |

ಪದವಿ ಓದುವಾಗ ನಾನು ಹಾಸ್ಟೆಲ್‌ನಲ್ಲಿದ್ದೆ. ಹುಡುಗಿಯರ ಹಾಸ್ಟೆಲ್‌ ಎಂದಮೇಲೆ ಕೇಳಬೇಕೇ? ವಾರ್ಡನ್‌ಗಳು ರೂಪಿಸಿದ ಶಾಸನಗಳು, ಕಟ್ಟಳೆ-ಕಾನೂನುಗಳು ಬಹಳಷ್ಟಿದ್ದವು. ಮೆಸ್‌ಹಾಲ್‌ನಲ್ಲಿ ಗಲಾಟೆ ಮಾಡಬಾರದು, ವಾರ್ಡನ್‌ ಅಪ್ಪಣೆಯಿಲ್ಲದೆ ಹೊರಗೆ ಹೋಗ ಬಾರದು, ಒಂದುವೇಳೆ ಹೋದರೂ ಸಂಜೆ ಆರು ಗಂಟೆಯೊಳಗೆ ರೂಮು ಸೇರಬೇಕು, ಅಣ್ಣನೋ- ಅಪ್ಪನೋ ನೋಡಲು ಬಂದರೆ ಒಳಗೆ ಸೇರಿಸುವುದಿಲ್ಲ.. ಇಂಥ ಹತ್ತಾರು ಕಾನೂನುಗಳ ಪಟ್ಟಿಯಲ್ಲಿ ನಮಗಿಷ್ಟವಾಗದ್ದೆಂದರೆ, ಬರ್ತ್‌ಡೇ ಮುಂತಾದ ಯಾವುದೇ ಸಂಭ್ರಮಾಚರಣೆಯೂ ರೂಮ್‌ನೊಳಗೆ ನಡೆಯುವಂತಿಲ್ಲ ಎಂಬುದು.

Advertisement

ಹುಟ್ಟಿದಹಬ್ಬ ಎಂದಮೇಲೆ ಕೇಕ್‌ ಇರಲೇಬೇಕು ತಾನೇ? ವಾಚ್‌ಮನ್‌ ಹಾಗೂ ವಾರ್ಡನ್‌ಗಳ ಕಣ್ತಪ್ಪಿಸಿ ಕೇಕ್‌ ತರುವುದು ಕೂಡ ಅಷ್ಟು ಸುಲಭವಾಗಿರಲಿಲ್ಲ. ಯಾಕಂದ್ರೆ, ಗೇಟ್‌ ದಾಟಿ ಒಳ ಬರುವಲ್ಲಿಯೇ ವಾರ್ಡನ್‌ಗಳ ಕೊಠಡಿ ಇತ್ತು. ಆದರೂ ಹರಸಾಹಸ ಮಾಡಿ ಕೇಕ್‌ ತರುವಾಗ, ವಾರ್ಡನ್‌ ಕಣ್ಣಿಗೆ ಬಿದ್ದು, ಅವರು ಕೇಕ್‌ ಅನ್ನು ತಮ್ಮ ಜಪ್ತಿಗೆ ತೆಗೆದುಕೊಂಡು, 2 ದಿನ ಬಿಟ್ಟು ಹಳಸಿದ ಕೇಕ್‌ ಅನ್ನು ನಮಗೇ ವಾಪಸ್‌ ಕೊಟ್ಟ ಉದಾಹರಣೆಗಳಿದ್ದವು. ಹೀಗಿರುವಾಗ ಹೋಳಿ ಹಬ್ಬ ಬಂತು. ಹೇಳಿ ಕೇಳಿ ಬಣ್ಣದ ಹಬ್ಬ. ಬಣ್ಣ ಎರಚಿ, ಆಟವಾಡಬೇಕೆಂದು ಯಾರಿಗೆ ಆಸೆಯಾಗುವುದಿಲ್ಲ? ನಮಗೂ ಹಾಗೇ ಆಸೆಯಾಯ್ತು. ನಮ್ಮ ರೂಮ್‌ನಲ್ಲಿದ್ದ ನಾವು ಐವರೂ, ಒಳ್ಳೆಯ ಹುಡುಗಿಯರು ಎಂಬ ಬಿರುದು ಪಡೆದವರು. ವಾರ್ಡನ್‌ಗಳು ಕೂಡ ನಮ್ಮನ್ನು ಗದರಿಸುತ್ತಿದ್ದುದು ಕಡಿಮೆಯೇ. ಈ ಅವಕಾಶವನ್ನೇ ಬಳಸಿಕೊಂಡು, ನಾವು ಬಣ್ಣದಾಟ ಆಡಬೇಕೆಂದು ನಿರ್ಧರಿಸಿದೆವು.  

ಹೋಳಿ ಹಬ್ಬಕ್ಕೆ ನಾಲ್ಕೈದು ದಿನ ಇರುವಾಗಲೇ, “ಹಾಸ್ಟೆಲ್‌ನಲ್ಲಿ ಬಣ್ಣ ಎರಚುವುದನ್ನು ನಿಷೇಧಿಸಲಾಗಿದೆ’ ಎಂಬರ್ಥದ ನೋಟಿಸ್‌ ಅನ್ನು ಅಂಟಿಸಲಾಯಿತು. ಈಗಾಗಲೇ ಹಲವು ಬಾರಿ ಇಂಥ ಹುಡುಗಾಟಿಕೆ ಕೆಲಸ ಮಾಡಿ ಸಿಕ್ಕಿಕೊಂಡ ಕೆಲವು ಹುಡುಗಿಯರಿಗೆ, ವಾರ್ಡನ್‌ಗಳು ಖುದ್ದಾಗಿ ಬಾಯಿಮಾತಿನ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ, ಹುಡುಗಿಯರು ಕೇಳಬೇಕಲ್ಲ? ನಾವು ಕೂಡ, ಹಾಗೋ ಹೀಗೋ ಒಂದಷ್ಟು ಬಣ್ಣದ ಪುಡಿಗಳನ್ನು ಕದ್ದು ಮುಚ್ಚಿ ತಂದು, ಒಂದು ಭಾನುವಾರ ಮಧ್ಯಾಹ್ನ ಬಣ್ಣ ಎರಚಲು ಪ್ರಾರಂಭಿಸಿದೆವು. ನಮ್ಮದು ಐದಂತಸ್ತಿನ ಹಾಸ್ಟೆಲ್‌. ಸುಮಾರು 700 ಹುಡುಗಿಯರಿದ್ದೆವು. ಮೊದಮೊದಲಿಗೆ ನಿಧಾನವಾಗಿ ನಡೆಯುತ್ತಿದ್ದ ಹೋಳಿ, ಕ್ರಮೇಣ ರಂಗೇರಿತು. ಸೀನಿಯರ್‌ ಹುಡುಗಿಯರು ಧೈರ್ಯವಾಗಿ, ಬಕೆಟ್‌ನಲ್ಲಿ ನೀರು ತುಂಬಿ ಎರಚಾಡತೊಡಗಿದರು. ಒಂದು ಕಡೆ ನೀರು, ಬಣ್ಣ ಎರಚುವವರ ಗ್ಯಾಂಗ್‌, ಇನ್ನೊಂದು ಕಡೆ ಅದರಿಂದ ತಪ್ಪಿಸಿಕೊಳ್ಳಲು ಓಡುವ ಹುಡುಗಿಯರ ಗುಂಪು…ಈ ಗಲಾಟೆ ವಾರ್ಡನ್‌ಗಳ ಕಿವಿಗೆ ಬೀಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪ್ರತಿ ಮಹಡಿಗೂ ಪ್ರತ್ಯೇಕ ವಾರ್ಡನ್‌ಗಳಿದ್ದದ್ದರಿಂದ, ಎಲ್ಲರೂ ತಂತಮ್ಮ ಮಹಡಿಯತ್ತ ಧಾವಿಸಿ ಬಂದರು. ನಾವಿದ್ದದ್ದು ನಾಲ್ಕನೇ ಮಹಡಿ. ಹಾಗಾಗಿ, ವಾರ್ಡನ್‌ ಬರುವ ಮುಂಚೆಯೇ ನಮಗೆ ಅದರ ಸೂಚನೆ ಸಿಕ್ಕಿತು.

ಯಾರೋ ಒಬ್ಬಳು, “ವಾರ್ಡನ್‌ ಬರಿ¤ದಾರೆ, ರನ್‌ ಫಾಸ್ಟ್‌’ ಎಂದು ಕೂಗಿ ಹೇಳಿದಳು. ಎಲ್ಲರೂ ರೂಮು, ಬಾತ್‌ರೂಂಗಳಲ್ಲಿ ಅಡಗಿಕೊಳ್ಳಲು ಧಾವಿಸಿದೆವು. ಯಾರಿಗೆ, ಯಾವ ರೂಮು ಕಂಡಿತೋ, ಅದರೊಳಗೆ ತೂರಿಕೊಂಡೆವು. ಹಾಲ್‌ನಲ್ಲಿ ಬಣ್ಣ ಎರಚಿಕೊಳ್ಳುತ್ತಿದ್ದ ನಾವು, ವಾರ್ಡನ್‌ ಬರುತ್ತಿರುವುದನ್ನು ನೋಡಿ ಗಾಬರಿಯಲ್ಲಿ ಓಡಿದರೂ, ನಮ್ಮ ರೂಮ್‌ ತನಕ ತಲುಪಲು ಸಾಧ್ಯವಾಗದೇ ಹೋಯ್ತು. ಕೊನೆಗೆ ಗೆಳತಿಯೊಬ್ಬಳ ರೂಮ್‌ ಒಳಗೆ ಹೋಗಿ ಬಾಗಿಲು ಹಾಕಿಕೊಂಡೆವು. ನಮ್ಮ ಗ್ರಹಚಾರಕ್ಕೆ ನಾವು ಸೇರಿಕೊಂಡಿದ್ದ ರೂಮ್‌ನ ಹುಡುಗಿಗೂ, ವಾರ್ಡ ನ್‌ಗೂ ಅಷ್ಟಾಗಿ ಆಗುತ್ತಿರಲಿಲ್ಲ. ಆಕೆ ಏನೇನೋ ಕಿತಾಪತಿಗಳನ್ನು ಮಾಡಿ, ಆಗಾಗ ವಾರ್ಡನ್‌ಗಳ ಕೃಪಾಕಟಾಕ್ಷಕ್ಕೆ ಗುರಿಯಾಗುತ್ತಿದ್ದವಳು. ವಾರ್ಡನ್‌ ಬರುತ್ತಿದ್ದಾರೆಂದು ಅವಳೇನೂ ಟೆನನ್‌ ಮಾಡಿಕೊಳ್ಳಲಿಲ್ಲ. ಆದರೆ, ಮೊದಲ ಬಾರಿಗೆ ಕಿತಾಪತಿ ಮಾಡಿದ ನಮಗಂತೂ ಹೆದರಿಕೆಯಲ್ಲಿ ಕೈ ಕಾಲು ನಡುಗಲು ಶುರುವಾಯಿತು.

ನಮ್ಮ ಮೇಲೆ ನಂಬಿಕೆ ಇಟ್ಟಿದ್ದ ವಾರ್ಡನ್‌, ನಮ್ಮ ರೂಮಿನತ್ತ ತಿರುಗಿಯೂ ನೋಡಿರಲಿಲ್ಲ. ಅವರ ಟಾರ್ಗೆಟ್‌ ಇದ್ದದ್ದು ನಾವು ಅಡಗಿದ್ದ ರೂಮೇ! ಸೀದಾ ಅಲ್ಲಿಗೇ ಬಂದು, ಬಾಗಿಲು ಬಡಿಯತೊಡಗಿದರು. ಅವರಿಗೆ ಒಳಗೆ ನಾವು ಇರಬಹುದೆಂಬ ಕಲ್ಪನೆಯೂ ಇರಲಿಲ್ಲ. ಒಂದೆರಡು ನಿಮಿಷ ಬಾಗಿಲು ಬಡಿದು, ತೆಗೀತೀರೋ ಇಲ್ಲವೋ ಎಂದು ಧಮ್ಕಿ ಹಾಕಿದ ಮೇಲೆ ನಾವು ನಿಧಾನವಾಗಿ ಬಾಗಿಲು ತೆಗೆದೆವು. ಇದ್ದಬದ್ದ ಎಲ್ಲ ಬಣ್ಣಗಳನ್ನೂ ಮುಖಕ್ಕೆ ಹಚ್ಚಿಕೊಂಡು, ಗುರುತೇ ಸಿಗದಂತಾಗಿದ್ದರೂ ವಾರ್ಡನ್‌ಗೆ ನಮ್ಮ ಪರಿಚಯ ಸಿಕ್ಕಿತು. ನಮ್ಮನ್ನು ಅವರು ಅಲ್ಲಿ ನಿರೀಕ್ಷಿಸಿರಲಿಲ್ಲವಾದ್ದರಿಂದ ಅವರಿಗೆ ಆಘಾತ, ಕೋಪ, ಬೇಸರ ಎಲ್ಲ ಒಟ್ಟೊಟ್ಟಿಗೇ ಆಯ್ತು. ಬೇರೆ ಎಲ್ಲರಿಗಿಂತ ನಾವು ಬಣ್ಣ ಎರಚಿಕೊಂಡಿದ್ದು ಅಕ್ಷಮ್ಯವಾಗಿತ್ತು.

Advertisement

“ನೀವು ಪಾಪದವರು ಅಂತ ನಾನು ನಿಮ್ಮ ರೂಮಿಗೆ ಚೆಕಿಂಗ್‌ಗೆ ಬರುತ್ತಲೇ ಇರಲಿಲ್ಲ. ನೀವು ಬೇರೆ ಹುಡುಗಿಯರಿಗಿಂತ ಜೋರಾಗಿದ್ದೀರ. ತಡೀರಿ, ನಿಮ್ಮನ್ನ ಪ್ರಿನ್ಸಿಪಲ್‌ ಹತ್ರ ಕಳಿಸ್ತೀನಿ’ ಅಂತ ಸಿಟ್ಟಿನಲ್ಲಿ ಕೂಗಾಡಿದರು. ಕೊನೆಗೆ, ಅವರು ಹಾಗೇನೂ ಮಾಡದಿದ್ದರೂ, ಮುಂದೆ ಅವರಿಂದ ನಮಗೆ ಒಳ್ಳೆಯ ಹುಡುಗಿಯರೆಂಬ ಯಾವ ರಿಯಾಯ್ತಿಯೂ ಸಿಗಲಿಲ್ಲ. “ನೀವು ಹೀಗೆ ಮಾಡ್ತೀರ ಅಂದು ಕೊಂಡಿರಲಿಲ್ಲ’ ಎಂಬ ಲುಕ್ಕು ಕೊಟ್ಟು ನಮ್ಮನ್ನು ಪಾಪಪ್ರಜ್ಞೆಗೆ ದೂಡುತ್ತಿದ್ದರು. ಆ ಹೋಳಿ ಹಬ್ಬದ ದಿನ, ಹೇಗೆ ನಮ್ಮ ಮುಖಕ್ಕೆ ನಾವೇ ಮಸಿ ಬಳಿದುಕೊಂಡೆವು ಅಂತ ಈಗಲೂ ನೆನಪಿಸಿಕೊಂಡು ನಗುತ್ತೇವೆ.

ಪ್ರಿಯಾ

Advertisement

Udayavani is now on Telegram. Click here to join our channel and stay updated with the latest news.

Next