ಕಾರಟಗಿ: ಕಳೆದ ಎರಡು ವರ್ಷದ ಹಿಂದೆ ಪುರಸಭೆಗೆ ನಗರೋತ್ಥಾನ ಯೋಜನೆಯಡಿ ಮಂಜೂರಾದ ಕಾಮಗಾರಿಗಳು ಇವರೆಗೂ ಪೂರ್ಣಗೊಂಡಿಲ್ಲ. ಕೆಲ ವಾರ್ಡ್‌ಗಳಲ್ಲಿ ಮಾತ್ರ ಅರ್ಧಂಬರ್ಧ ಕಾಮಗಾರಿ ನಡೆದಿವೆ. ಇನ್ನು ಕೆಲ ವಾರ್ಡ್‌ಗಳಲ್ಲಿ ಕಾಮಗಾರಿ ಆರಂಭವೇ ಆಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ನಗರೋಥಾನ ಯೋಜನೆಯಡಿ 6.5 ಕೋಟಿ ರೂ.ಗಳ ಕಾಮಗಾರಿಗೆ ಕಳೆದ 2 ವರ್ಷದ ಹಿಂದೆ ಅಂದಿನ ಶಾಸಕ ಶಿವರಾಜ ತಂಗಡಗಿ ಭೂಮಿಪೂಜೆ ನಡೆಸಿದರು.
ನಂತರ ನೂತನವಾಗಿ ಆಯ್ಕೆಯಾದ ಶಾಸಕ ಬಸವರಾಜ ದಢೇಸೂಗುರ ಮತ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೂ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಕಾಮಗಾರಿ ಆರಂಭಿಸಿದ್ದು, ಅದು ಕೂಡ ಅರ್ಧಂಬರ್ಧ ಬೇರೆ ವಾರ್ಡ್‌ಗಳಲ್ಲಿ ಇವರೆಗೂ ಕಾಮಗಾರಿಯ ಅವಶೇಶಗಳು ಕೂಡ ಹಾಕಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಭೂಮಿಪೂಜೆ ನಡೆಸಿ ಒಂದು ವರ್ಷ 4 ತಿಂಗಳು ಗತಿಸಿದರೂ ಇವರೆಗೂ ಕಾಮಗಾರಿ ನಡೆಸಿಲ್ಲ. ಈ ಕುರಿತು ಸೋಮವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿದಾಗ ನಿವಾಸಿಗಳು ಅಲ್ಲಿನ ಸಮಸ್ಯೆ ಬಿಚ್ಚಿಟ್ಟಿದ್ದಾರೆ. ವಾರ್ಡ್‌ಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಸಿ ರಸ್ತೆ ಚರಂಡಿ ನಿರ್ಮಿಸುವುದಾಗಿ ಭೂಮಿಪೂಜೆ ನಡೆಸಿದ್ದು ಇವರೆಗೂ ಯಾವುದೇ ಕೆಲಸವಾಗಿಲ್ಲ. ಅಲ್ಲದೆ ವಾರ್ಡ್ ಆರೋಗ್ಯ ಕೇಂದ್ರಕ್ಕೆ ಸೂಕ್ತವಾದ ಬೀದಿ ದೀಪದ ವ್ಯವಸ್ಥೆ ಇರುವುದಿಲ್ಲ. ರಾತ್ರಿಯಾಯಿತೆಂದರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕತ್ತಲು ಆವರಿಸಿಕೊಂಡಿರುತ್ತದೆ. ಸಿಸಿ ರಸ್ತೆ ಚರಂಡಿ ಅಗತ್ಯ ಸೌಲಭ್ಯಗಳನ್ನು ಕೂಡಲೇ ಒದಗಿಸಲು ಅಧಿಕಾರಿಗಳಿಗೆ ಆದೇಶಿಸಿ ಎಂದು ವಾರ್ಡ್ ಗಳ ಸ್ಥಿತಿಗತಿಯ ಬಗ್ಗೆ ಗಮನಕ್ಕೆ ತಂದರು. ಶಾಸಕರ ಜತೆಗಿದ್ದ ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪನವರಿಗೆ ಶಾಸಕರು ವಾರ್ಡ್ ಗಳ ಸಮಸ್ಯಯ ಕುರಿತು ಪರಿಶೀಲಿಸುವಂತೆ ಸೂಚಿಸಿದರು.
ನಗರೋಥ್ಥಾನ ಯೋಜನೆಯಡಿ ಆರಂಭವಾದ ಕಾಮಗಾರಿಗಳು ನಡೆಯುತ್ತಿದ್ದು, ಇನ್ನು 6 ವಾರ್ಡ್‌ಗಳಲ್ಲಿ ಮಾತ್ರ ಬಾಕಿ ಇವೆ. ಇನ್ನು ಕೆಲವಾರ್ಡ್‌ಗಳಲ್ಲಿ ಸಾರ್ವಜನಿಕರ ಹಾಗೂ ತಾಂತ್ರಿಕ ತೊಂದರೆಗಳಿಂದ ಕೆಲಸಗಳು ಮಂದಗತಿಯಲ್ಲಿ ಸಾಗಿವೆ. ನವೆಂಬರ್ ಅಂತ್ಯದಲ್ಲಿ ಯೋಜನೆಯಡಿ ಮಂಜೂರಾದ ಎಲ್ಲಾ ಕಾಮಗಾರಿಗಳು ಸಂಪೂರ್ಣವಾಗಿ ಮುಗಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ ತಿಳಿಸಿದರು.
ಪುರಸಭೆ ಆಡಳಿತ ಅಧಿಕಾರಿಗಳ ನಿರ್ಲಕ್ಷದಿಂದ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ಪುರಸಭೆ ಸದಸ್ಯರೆ ಟೆಂಡರ್ ಪಡೆದು ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ ಕಾಮಗಾರಿ ಪೂರ್ಣಗೊಳ್ಳದೆ ಬಿಲ್ ಪಾವತಿಯಾಗುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ವಿವಿಧ ವಾರ್ಡ್‌ಗಳ ಸಾರ್ವಜನಿಕರು ಆರೋಪಿಸಿದ್ದಾರೆ.