Advertisement

ವಾರ್ಡ್‌ ಸಮಿತಿ ರಚನೆ ಪ್ರಕ್ರಿಯೆಗೆ ವಾರದಲ್ಲಿ ಚಾಲನೆ

11:51 AM Oct 07, 2020 | Suhan S |

ಮಹಾನಗರ, ಅ. 6: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿದ್ದ ವಾರ್ಡ್‌ ಸಮಿತಿ ರಚನೆ ಪ್ರಕ್ರಿಯೆಗೆ ಆಡಳಿತಾತ್ಮಕ ಚಾಲನೆ ದೊರೆಯುವ ನಿರೀಕ್ಷೆ ಇದೆ.

Advertisement

ಕಳೆದ ಅಕ್ಟೋಬರ್‌ನಲ್ಲಿ ವಾರ್ಡ್‌ ಸಮಿತಿಗಳು ಅಸ್ತಿತ್ವಕ್ಕೆ ಬರಬೇಕಿದ್ದರೂ, ಮೇಯರ್‌ ಆಯ್ಕೆ  ಪ್ರಕ್ರಿಯೆ ಮತ್ತು ಸದಸ್ಯರ ಪ್ರತಿಜ್ಞಾ ವಿಧಿ ನಡೆಯದೆ ಇದ್ದುದರಿಂದ ವಿಳಂಬವಾಗಿತ್ತು. ಅನಂತರ ಕೊರೊನಾ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿ ಸಿದ ಪ್ರಕ್ರಿಯೆಗಳು ನಿಂತು ಹೋಗಿದ್ದವು. ಕಳೆದ ಆಗಸ್ಟ್‌ ನಲ್ಲಿ ಪಾಲಿಕೆಯ ಪರಿಷತ್‌ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಆದಾಗ್ಯೂ ವಾರ್ಡ್‌ ಸಮಿತಿ ರಚನೆ ಪ್ರಕ್ರಿಯೆ ಚುರುಕಾಗಿರಲಿಲ್ಲ. ಇದೀಗ ಪಾಲಿಕೆಯ ಅಧಿಕಾರಿಗಳು ಮುಂದಿನ ವಾರದೊಳಗೆ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾರ್ಯದರ್ಶಿಗಳ ನೇಮಕ ವಿಳಂಬ :

ಏರಿಯಾ ಸಭೆ ರಚನೆಗೆ ಪೂರ್ವ ಭಾವಿಯಾಗಿ ನೋಡಲ್‌ ಅಧಿಕಾರಿ  ಹಾಗೂ ವಾರ್ಡ್‌ ಸಮಿತಿ ರಚನೆಗೆ ಪೂರ್ವಭಾವಿಯಾಗಿ ಕಾರ್ಯದರ್ಶಿ ಯನ್ನಾಗಿ ಪಾಲಿಕೆಯ ಅಧಿಕಾರಿಗಳನ್ನು ನಿಯೋಜಿಸಬೇಕು. ಅಧಿಕಾರಿಗಳ ನಿಯೋ ಜನೆ ಮಾಡದಿದ್ದುದರಿಂದ ಸಮಿತಿ ರಚನೆಗೆ ಅಡ್ಡಿಯಾಗಿದೆ ಎಂದು ವಾರ್ಡ್‌ ಸಮಿತಿಗಾಗಿ ಹೋರಾಟ ನಡೆಸುತ್ತಿರುವ ಮುಂದಾಳುಗಳು ದೂರಿದ್ದಾರೆ. ಪಾಲಿಕೆಯ ನಿರ್ಲಕ್ಷ್ಯದಿಂದಾಗಿಯೇ ವಾರ್ಡ್‌ ಸಮಿತಿ ರಚನೆ ವಿಳಂಬವಾಗಿದೆ ಎಂದು ಆರೋಪಿಸಿದ್ದಾರೆ.

121 ಏರಿಯಾ ಸಭೆ :

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 121 ಏರಿಯಾ ಸಭೆಯನ್ನು ಈ ಹಿಂದೆಯೇ ಗುರುತಿಸಲಾಗಿದೆ. ಏರಿಯಾ ಸಭೆಗೆ ಅಲ್ಲಿನ ಮತದಾರರೆಲ್ಲರೂ ಸದಸ್ಯರು. ಆದರೆ ವಾರ್ಡ್‌ ಸಮಿತಿಗೆ 10 ಮಂದಿ ಸದಸ್ಯರ ಆಯ್ಕೆಯಾಗಬೇಕು. ಹುಬ್ಬಳ್ಳಿ- ಧಾರವಾಡದಲ್ಲಿ ಜನರಿಂದಲೇ ಅರ್ಜಿ ಆಹ್ವಾನಿಸಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಮಂಗಳೂ ರಿನಲ್ಲಿಯೂ ಸದಸ್ಯರ ಆಯ್ಕೆಯಾಗಬೇಕು ಎಂಬುದು ಇಲ್ಲಿನ ಎಂಸಿಸಿ ಸಿವಿಕ್‌ ಗ್ರೂಪ್‌ನ ಒತ್ತಾಯ.

ಅಭ್ಯರ್ಥಿಗಳಿಂದ  ಆಶ್ವಾಸನೆ :

ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಚುನಾವಣ ಪೂರ್ವದಲ್ಲಿ ಬಹುತೇಕ ಎಲ್ಲ ಅಭ್ಯರ್ಥಿಗಳು ವಾರ್ಡ್‌ ಸಮಿತಿ ರಚನೆಯ ಬಗ್ಗೆ ಆಶ್ವಾಸನೆ ನೀಡಿದ್ದರು.  ಪಾಲಿಕೆಯಲ್ಲಿ ಹೊಸ ಆಡಳಿತ ಅಸ್ತಿತ್ವಕ್ಕೆ ಬಂದ ಅನಂತರ ಈ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆಯಲ್ಲಿದ್ದರು.

ಅನಗತ್ಯ ಕಾಮಗಾರಿ ತಡೆಯುವ ಅಧಿಕಾರ :   ವಾರ್ಡ್‌ನ ಜನರು ತಮ್ಮ ಕಾರ್ಪೊರೇಟರ್‌ಗಳ ಕಾರ್ಯವೈಖರಿ ಮೇಲೆ ನೇರವಾಗಿ ಪ್ರಭಾವ ಬೀರಲು ವಾರ್ಡ್‌ ಸಮಿತಿಯ ಮೂಲಕ ಸಾಧ್ಯವಾಗುತ್ತದೆ. ಕಾರ್ಪೊ ರೇಟರ್‌ ತಮ್ಮ ಇಚ್ಛಾನುಸಾರ, ಅನಗತ್ಯವೆನಿಸುವ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ಕಾರ್ಪೊರೇಟರ್‌ ವಾರ್ಡ್‌ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಮಿತಿಯಲ್ಲಿ   ಮೂವರು ಮಹಿಳೆಯರು, ನಿವೃತ್ತ ಸರಕಾರಿ ನೌಕರರು, ಯುವಕರು ಕಡ್ಡಾಯವಾಗಿ ಇರಬೇಕು. ಒಂದು ವೇಳೆ ಕಾರ್ಪೊರೇಟರ್‌ ವಾರ್ಡ್‌ ಸಮಿತಿಯ ತೀರ್ಮಾನ ಒಪ್ಪದಿದ್ದರೆ ಅದನ್ನು ಲಿಖೀತವಾಗಿ ಆಯುಕ್ತರಿಗೆ ತಿಳಿಸಬೇಕಾಗುತ್ತದೆ.

ಶೀಘ್ರ ಚಾಲನೆ : ಕೋವಿಡ್ ಹಿನ್ನೆಲೆಯಲ್ಲಿ ವಾರ್ಡ್‌ ಸಮಿತಿ ರಚನೆ ಪ್ರಕ್ರಿಯೆ ಸ್ವಲ್ಪ ವಿಳಂಬ ವಾಗಿತ್ತು. ವಾರ್ಡ್‌ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಸಾರ್ವಜನಿಕರಿಂದಲೇ ಅರ್ಜಿ ಆಹ್ವಾನಿ ಸಲಾಗುವುದು. ಈ ಪ್ರಕ್ರಿಯೆಯನ್ನು ಮುಂದಿನ ವಾರದೊಳಗೆ ಆರಂಭಿಸಲಾಗುವುದು. -ಅಕ್ಷಯ್‌ ಶ್ರೀಧರ್‌,  ಆಯುಕ್ತರು, ಮನಪಾ

ಜನರ ಸಹಭಾಗಿತ್ವ ಅಗತ್ಯ : ಏರಿಯಾ ಸಭೆಗೆ ನೋಡಲ್‌ ಅಧಿಕಾರಿ ಹಾಗೂ ವಾರ್ಡ್‌ ಸಮಿತಿಗೆ ಕಾರ್ಯದರ್ಶಿಯನ್ನು ನೇಮಕ ಮಾಡಿರುವ ಕುರಿತಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿಯೂ ಮಾಹಿತಿ ಕೇಳಿದ್ದೇನೆ. ಆದರೆ ಇದುವರೆಗೂ ಪಾಲಿಕೆಯಿಂದ ಮಾಹಿತಿ ದೊರೆತಿಲ್ಲ. ಜನರು ಆಡಳಿತ ವರ್ಗದ ಜತೆ ಸೇರಿ ತಮ್ಮ ಪರಿಸರದ ಸಮಸ್ಯೆ ಪರಿಹರಿಸಿಕೊಳ್ಳಲು, ಅಗತ್ಯ ಮೂಲಸೌಕರ್ಯಗಳನ್ನು ಪಾರದರ್ಶಕವಾಗಿ ಮಾಡಿಸಿಕೊಳ್ಳಲು ಸಮಿತಿ ತುಂಬಾ ಸಹಕಾರಿಯಾಗುತ್ತದೆ.  -ಪದ್ಮನಾಭ ಉಳ್ಳಾಲ,   ಎಂಸಿಸಿ ಸಿವಿಕ್‌ ಗ್ರೂಪ್‌

Advertisement

Udayavani is now on Telegram. Click here to join our channel and stay updated with the latest news.

Next