Advertisement

ಬೆಚ್ಚಿಬೀಳಿಸಿದ ಯುದ್ಧ ವಿಮಾನ ಪತನ!

01:56 AM Feb 02, 2019 | |

ಬೆಂಗಳೂರು: ಎಚ್ಎಎಲ್‌ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಯುದ್ಧ ವಿಮಾನ ಪತನ ದುರಂತ ಸ್ಥಳೀಯರು ಹಾಗೂ ವಾಹನ ಸವಾರರನ್ನು ಶುಕ್ರವಾರ ಬೆಳಗ್ಗೆ ಬೆಚ್ಚಿಬೀಳುವಂತೆ ಮಾಡಿತ್ತು.

Advertisement

ಬೆಳಗ್ಗೆ 10.25ರ ಸುಮಾರಿಗೆ ರನ್‌ವೇಯಲ್ಲಿ ಟೇಕಾಫ್ ಆಗುವ ಸಂದರ್ಭದಲ್ಲಿ ತಡೆಗೋಡೆಗೆ ಅಪ್ಪಳಿಸಿ ವಿಮಾನ ನೆಲಕ್ಕುರುಳಿದಾಗ ಉಂಟಾದ ಭಾರೀ ಸದ್ದು ಬರೋಬ್ಬರಿ ಎರಡು ಕಿ.ಮೀ ದೂರಕ್ಕೆ ತಲುಪಿದೆ.ಬಂದ ಭಾರೀ ಸದ್ದು ಕೇಳುತ್ತಲೇ ಭೂಕಂಪದ ಅನುಭವವಾಗಿ ಸ್ಥಳೀಯರು, ಸುತ್ತಮುತ್ತಲ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರು, ಯಮಲೂರು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು, ಎಚ್ಎಎಲ್‌ ಸಿಬ್ಬಂದಿ, ಸೇನಾ ಸಿಬ್ಬಂದಿಗೆ ಅಕ್ಷರಶಃ ದಂಗುಬಡಿದ ಅನುಭವ ಆಗಿದೆ.

ಭಾರೀ ಸದ್ದು ಹಾಗೂ ಬೆಂಕಿಯ ಕೆನ್ನಾಲಗೆ ಕಂಡು ಎಚ್ಎಎಲ್‌ನಲ್ಲಿರುವ ಅಗ್ನಿಶಾಮಕ ವಾಹನಗಳು ಹಾಗೂ ಸೇನಾ ಅಧಿಕಾರಿಗಳ ತಂಡಗಳು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿದ್ದು ಫೈಲಟ್‌ಗಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಯುದ್ಧ ವಿಮಾನದಲ್ಲಿದ್ದ ಸಿದ್ಧಾರ್ಥ್ ನೇಗಿ ಹಾಗೂ ಸಮೀರ್‌ ಅಬ್ರೋಲ್‌ ಹುಡುಕಾಟಕ್ಕೆ ಮುಂದಾಗಿವೆ.

ವಿಮಾನ ಪತನದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದ ಸ್ಥಳೀಯರು ಹಾಗೂ ವಾಹನ ಸವಾರರು ಸಿಮೆಂಟ್ ತಡೆಗೋಡೆ ಒಡೆದು ಒಳಗೆ ಮುನ್ನುಗಿದ್ದಾರೆ. ಫೈಲಟ್‌ಗಳ ರಕ್ಷಣಾ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ. ಈ ವೇಳೆ ಹಲವರು ವಿಮಾನ ಹೊತ್ತಿಉರಿಯುತ್ತಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಅರ್ಧ ಕಿ.ಲೋ ಮೀಟರ್‌ ಪ್ರದೇಶ ಬೆಂಕಿಗಾಹುತಿ: ಮಿರಾಜ್‌ -2000 ಯುದ್ಧವಿಮಾನ ತಡೆಗೋಡೆಗೆ ಅಪ್ಪಳಿಸಿದ ಬಳಿಕ ಸುಮಾರು 400 ಮೀಟರ್‌ ದೂರದವರೆಗೂ ಉರುಳಿಕೊಂಡು ಬಂದಿದೆ. ವಿಮಾನದ ಅವಶೇಷಗಳು ಅರ್ಧ ಕಿಲೋಮೀಟರ್‌ ದೂರದವರೆಗೂ ಚೆಲ್ಲಾಪಿಲ್ಲಿಯಾಗಿವೆ. ಪತನದಿಂದ ಉಂಟಾದ ಬೆಂಕಿಯ ಕೆನ್ನಾಲಗೆಗೆ ಹುಲ್ಲು, ಗಿಡಗಂಟೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿನಂದಿಸಿದರು.

Advertisement

ತಪ್ಪಿತು ಭಾರೀ ದುರಂತ: ರನ್‌ವೇಯಲ್ಲಿ ಯುದ್ಧವಿಮಾನ ಮಿರಾಜ್‌ -2000 ಟೇಕಾಪ್‌ ಆಗುತ್ತಿದ್ದಾಗಲೇ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಸಾಧ್ಯವಾದಷ್ಟೂ ವಿಮಾನ ಕಂಟ್ರೋಲ್‌ ಮಾಡಲು ಯತ್ನಿಸಿದ್ದಾರೆ. ಪರಿಣಾಮ ರನ್‌ವೇ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಒಂದು ವೇಳೆ ಕಾಂಪೌಂಡ್‌ ಗೋಡೆಯಿಂದ ಕೇವಲ ಐನೂರರಿಂದ ಆರುನೂರು ಮೀಟರ್‌ ಅಂತರದಲ್ಲಿರುವ ರಸ್ತೆಯ ತಡೆಗೋಡೆಗೆ ಅಪ್ಪಳಿಸಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ.

ಪೈಲಟ್‌ಗಳಿಬ್ಬರೂ ಜನನಿಬಿಡ ಪ್ರದೇಶಗಳಲ್ಲಿ ದುರಂತ ಸಂಭವಿಸಬಾರದು ಎಂಬ ಉದ್ದೇಶದಿಂದ ವಿಮಾನವನ್ನು ಕಂಟ್ರೋಲ್‌ ಮಾಡಿದ್ದಾರೆ. ತುರ್ತು ನಿರ್ಗಮನದ ಮೂಲಕ ಪ್ರಾಣಾಪಾಯ ದಿಂದ ಪಾರಾಗಲೂ ಯತ್ನಿಸಿದರೂ, ಸಾಧ್ಯವಾಗದೇ ಉಸಿರು ಚೆಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಯುದ್ಧವಿಮಾನ ಪತನಗೊಂಡ ಸ್ಥಳದಿಂದ ಯಮಲೂರು ರಸ್ತೆ ಕೇವಲ ಆರುನೂರು ಮೀಟರ್‌ ದೂರವಿದೆ.ವಿಮಾನ ಸ್ವಲ್ಪ ದೂರ ಹಾರಾಟ ನಡೆದು ಪತನಗೊಂಡಿದ್ದರೂ ರಸ್ತೆಯ ಮೇಲೆಯೇ ಬೀಳುತ್ತಿತ್ತು. ರಸ್ತೆಯಲ್ಲಿ ವಾಹನಗಳ ಸಂಚಾರ ನಿರಂತರವಾಗಿರುತ್ತಿತ್ತು, ಜತೆಗೆ ವಿಮಾನಕ್ಕೆ ಬಳಸುವ ವೈಟ್ ಪೆಟ್ರೋಲ್‌ ಬೆಂಕಿಯಿಂದ ಸುತ್ತಮುತ್ತಲಿನ ಪ್ರದೇಶಗ‌ ಳಿಗೆ ವ್ಯಾಪಿಸುತ್ತಿತ್ತು. ಸಮೀಪವೇ ಬಹುರಾಷ್ಟ್ರೀಯ ಕಂಪೆನಿಗಳಿವೆ, ಪತನ ಘಟನೆ ನಡೆದಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು, ಅಧಿಕಾರಿಗಳು ಅಭಿಪ್ರಾಯವ್ಯಕ್ತಪಡಿಸಿದರು.

ಕಾರ್ಗಿಲ್‌ ಕಾರ್ಯಾಚರಣೆ

1985ರಲ್ಲಿ ದೇಶದಲ್ಲಿ ಮೊದಲ ವೈಮಾನಿಕ ಹಾರಾಟ ನಡೆಸಿರುವ ಮಿರಾಜ್‌ ಯುದ್ಧ ವಿಮಾನಗಳನ್ನು 2014ರಿಂದ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿತ್ತು. ಮೊದಲ ಎರಡು ವಿಮಾನಗಳನ್ನು ಸ್ವತಃ ಡೆಸಾಲ್ಟ್ ಕಂಪನಿಯೇ ಮೇಲ್ದರ್ಜೆಗೇರಿಸಿ ಹಸ್ತಾಂತರಿಸಿತ್ತು. ಉಳಿದ ವಿಮಾನಗಳ ಹೊಣೆಯನ್ನು ಎಚ್ಎಎಲ್‌ ವಹಿಸಿಕೊಂಡಿದೆ. 1999ರಲ್ಲಿ ಭಾರತ ಹಾಗೂ ಪಾಕ್‌ ನಡುವಣ ಕಾರ್ಗಿಲ್‌ ಯುದ್ಧದಲ್ಲಿ ಬಳಕೆಯಾಗಿರುವ ಹೆಗ್ಗಳಿಕೆಯನ್ನು ಈ ಎರಡು ಆಸನಗಳ ವಿಮಾನ ಹೊಂದಿದೆ. ಫ್ರಾನ್ಸ್‌, ಅರಬ್‌ ದೇಶಗಳು (ಯುಎಇ), ಚೀನಾ ವಾಯುಪಡೆ (ಥೈವಾನ್‌) ‘ಮಿರಾಜ್‌ 2000’ ಅನ್ನು ಬಳಸುತ್ತಿವೆ. ಮೊದಲ ಮೂರು ಪರೀಕ್ಷಾರ್ಥ ಹಾರಾಟಗಳನ್ನು ಮಿರಾಜ್‌ ಯಶಸ್ವಿಯಾಗಿ ಪೂರೈಸಿತ್ತು. ನಂತರ, ಭಾರತೀಯ ವಾಯುಸೇನೆ ಕೂಡ ಮೊದಲ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತ್ತು.

ಮನೆ ಒಳಗೆ ಕುಳಿತಿದ್ದೆ, ಭಾರೀ ಸದ್ದಾಗಿ ಭೂಮಿ ಕಂಪಿಸಿದ ಅನುಭವವಾಯ್ತು. ಹೊರಗೆ ಬಂದು ಏರ್‌ಪೋರ್ಟ್‌ ಕಡೆ ನೋಡಿದಾಗ ಬೆಂಕಿ, ದಟ್ಟ ಹೊಗೆ ಬರುತ್ತಿತ್ತು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನೋಡಿದಾಗ ದುರಂತದ ಬಗ್ಗೆ ಗೊತ್ತಾಯಿತು. ● ಮಾರಪ್ಪ, ಸ್ಥಳೀಯ ನಿವಾಸಿ ಬೇಕರಿ ಮುಂದೆ ಟೀ ಕುಡಿಯುತ್ತಿದ್ದೆ. ಭಾರೀ ಸ್ಫೋಟದ ಸದ್ದು ಕೇಳಿ ವಿಮಾನ ನಿಲ್ದಾಣದ ಕಡೆ ನೋಡಿದಾಗ ಪ್ಯಾರಾಚೂಟ್‌ಗಳೊಂದಿಗೆ ಇಬ್ಬರು ಬೆಂಕಿಯಲ್ಲಿ ಬೀಳುವುದು ಕಂಡು ಬಂತು. ಸ್ಥಳಕ್ಕೆ ಹೋದಾಗ ಒಬ್ಬರು ಮೃತಪಟ್ಟಿದ್ದರು. ಮತ್ತೂಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ● ಬಾಬು, ಪ್ರತ್ಯಕ್ಷದರ್ಶಿ

ಫೈಲಟ್‌ಗಳ ರಕ್ಷಣಾ ಕಾರ್ಯಾಚರಣೆ ವೇಳೆ ಒಳನುಗ್ಗಿದ್ದ ಸಾರ್ವಜನಿಕರನ್ನು ಸೇನಾ ಅಧಿಕಾರಿಗಗಳು ಹೊರಕಳುಹಿಸಿ ಇಡೀ ಪ್ರದೇಶವನ್ನು ಸುತ್ತುವರಿದರು. ಸೇನಾ ಅಧಿಕಾರಿಗಳು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು. ಸೇನಾ ಅಧಿಕಾರಿಗಳ ತಂಡಗಳು ಅವಶೇಷಗಳಿಗಾಗಿ ಶುಕ್ರವಾರ ಸಂಜೆಯವರೆಗೂ ಹುಡುಕಾಟ ನಡೆಸಿದವು. ಘಟನೆ ನಡೆದ ಪ್ರದೇಶದಲ್ಲಿ ಅಧಿಕಾರಿಗಳ ದಂಡೇ ನೆರೆದಿತ್ತು. ದುರಂತ ನಡೆದ ಸ್ಥಳದ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದರು. ಮತ್ತೂಂದೆಡೆ ಆಂತರಿಕ ತನಿಖೆ ಭಾಗವಾಗಿ ಸೇನಾ ಹೆಲಿಕಾಪ್ಟರ್‌ ಎರಡು ಮೂರು ಬಾರಿ ಹಾರಾಟ ನಡೆಸಿತು. ಯಮಲೂರು ರಸ್ತೆಯಲ್ಲಿ ತಡೆಗೋಡೆ ಒಡೆದ ಸ್ಥಳದಲ್ಲಿ ಸಾರ್ವಜನಿಕರು ಒಳಪ್ರವೇಶಿಸದಂತೆ ತಡೆಯಲು ಸ್ಥಳೀಯ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು.

2012ರಲ್ಲಿ ಎರಡು ಬಾರಿ ಯುದ್ಧ ವಿಮಾನ ಪತನ

‘ಮಿರಾಜ್‌ 2000’ ಯುದ್ಧ ವಿಮಾನಗಳು ವೈಮಾನಿಕ ತರಬೇತಿ ಹಾರಾಟದ ವೇಳೆ ಪತನಗೊಂಡ ಘಟನೆ ಈ ಹಿಂದೆಯೂ ಎರಡು ಬಾರಿ ನಡೆದಿದೆ. 2012ರ ಫೆ.14ರಂದು ಮಧ್ಯಪ್ರದೇಶದಲ್ಲಿ ಮಿರಾಜ್‌ ಯುದ್ಧ ವಿಮಾನ ಹಾರಾಟದ ವೇಳೆ ಪತನಗೊಂಡಿದ್ದು, ಅದೃಷ್ಟವಶಾತ್‌ ವಿಮಾನದಲ್ಲಿದ್ದ ವಾಯುಸೇನೆಯ ಅಧಿಕಾರಿಗಳಿಬ್ಬರು ತುರ್ತು ನಿರ್ಗಮನದ ಮೂಲಕ ಪಾರಾಗಿದ್ದರು ಎನ್ನಲಾಗಿದೆ. ಇದಾದ 11ದಿನಗಳಲ್ಲಿಯೇ ಮಾರ್ಚ್‌ 6ರಂದು ರಾಜಸ್ಥಾನದ ಸವಾಯ್‌ ಮದವೋಪುರ್‌ ಜಿಲ್ಲೆಯ ಹಳ್ಳಿಯೊಂದರ ಸಮೀಪ ಮಿರಾಜ್‌-2000 ಯುದ್ಧ ವಿಮಾನ ಪತನಗೊಂಡಿದ್ದು, ಅಧಿಕಾರಿಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next