Advertisement

ಪ್ರಧಾನಿ ಭಾವಚಿತ್ರ ಸುಡಲು ಯತ್ನ:ಪೊಲೀಸರೊಂದಿಗೆ ತಳ್ಳಾಟ- ನೂಕಾಟ

02:12 PM Oct 18, 2021 | Team Udayavani |

ದಾವಣಗೆರೆ: ಉತ್ತರ ಪ್ರದೇಶದ ಲಖೀಂಪುರ ಕೇರಿಯಲ್ಲಿ ನಡೆದಿರುವ ರೈತರ ಹತ್ಯೆ ಖಂಡಿಸಿ ಸೋಮವಾರ ಎಐಕೆಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾವಚಿತ್ರ ಪ್ರದರ್ಶನ ಮತ್ತು ಸುಟ್ಟು ಹಾಕಲು ಪೊಲೀಸರು ಅನುಮತಿ ನೀಡದ ವಿಚಾರಕ್ಕಾಗಿ ಪ್ರತಿಭಟನಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ವಾಗ್ವಾದ, ತಳ್ಳಾಟ- ನೂಕಾಟ ನಡೆಯಿತು.

Advertisement

ಜಯದೇವ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೋದಿ ಹಾಗೂ ಅಮಿತ್ ಶಾ ಭಾವಚಿತ್ರಗಳ ಪ್ರದರ್ಶನ ಮಾಡುವ ಜೊತೆಗೆ ದಹಿಸಲು ಹೋರಾಟಗಾರರು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು.ಯಾವುದೇ ಕಾರಣಕ್ಕೂ ಭಾವಚಿತ್ರಗಳನ್ನು ಪ್ರದರ್ಶನ ಮತ್ತು ಸುಡಲು ಅವಕಾಶ ನೀಡುವುದೇ ಇಲ್ಲ ಪೊಲೀಸರು ತಿಳಿಸಿದರು.

ಕುಪಿತಗೊಂಡ ಹೋರಾಟಗಾರರು ನಾವು ಭಾವಚಿತ್ರಗಳ ಪ್ರದರ್ಶನ ಮಾಡುವ ಜೊತೆಗೆ ದಹಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದರು. ಪೊಲೀಸರ ತಡೆಯನ್ನೂ ಲೆಕ್ಕಿಸದೆ ಗಾಂಧಿ ವೃತ್ತದತ್ತ ಹೋರಾಟಗಾರರು ಹೊರಟರು. ಪೊಲೀಸರು ಎಲ್ಲರನ್ನೂ ತಡೆದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು.

ಪೊಲೀಸರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಅನೇಕ ಹೋರಾಟದಲ್ಲಿ ಪ್ರಧಾನಿ ಮಂತ್ರಿಗಳು ಒಳಗೊಂಡಂತೆ ಅನೇಕರ ಪ್ರತಿಕೃತಿ, ಭಾವಚಿತ್ರಗಳನ್ನು ಸುಡಲಾಗಿದೆ. ಆದರೆ, ಈಗ ಪೊಲೀಸರು ಭಾವಚಿತ್ರಗಳ ಪ್ರದರ್ಶನಕ್ಕೂ ಅವಕಾಶ ನೀಡದೆ ಹೋರಾಟದ ಹಕ್ಕನ್ನೇ ದಮನ ಮಾಡುತ್ತಿದ್ದಾರೆ. ಅಪ್ರಜಾತಾಂತ್ರಿಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೋರಾಟಗಾರರಯ ಆಕ್ರೋಶ ವ್ಯಕ್ತಪಡಿಸಿದರು.

ಬಹಳಷ್ಟು ಸಮಯ ಮಾತಿನ ಚಕಮಕಿ ನಡೆಯಿತು. ಹೋರಾಟಗಾರರು ಪೊಲೀಸರಿಗೇ ಭಾವಚಿತ್ರಗಳನ್ನು ಹಸ್ತಾಂತರ ಮಾಡಲು ಮುಂದಾದರು. ಆದರೆ, ಪೊಲೀಸರು ಭಾವಚಿತ್ರಗಳನ್ನು ಪಡೆಯಲು ನಿರಾಕರಿಸಿದರು. ಕೊನೆಗೆ ಭಾವಚಿತ್ರಗಳನ್ನು ಪಡೆದುಕೊಂಡ ಪೊಲೀಸರು ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಲು ಅನುಮತಿ ನೀಡಿದರು. ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಹರಿಹಾಯ್ದರು. ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next