ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಹತ್ಲಾಂಗಾ ವಲಯದಲ್ಲಿ ಶಸ್ತ್ರಾಸ್ತ್ರ ಕೋಠಿಯನ್ನೇ ಪೊಲೀಸ್ ಮತ್ತು ಸೆನೆ ಪತ್ತೆ ಹಚ್ಚಿದೆ.
ಇಲ್ಲಿನ ಎಲ್‌ಒಸಿ ಪಕ್ಕದಲ್ಲೇ ಯುದ್ಧದ ಮಾದರಿ ಸಂಗ್ರಹಿಸಿಡಲಾಗಿದ್ದ 24 ಮ್ಯಾಗಜಿನ್‌ಗಳಿದ್ದ ಎಕೆ74 ರೈಫಲ್‌ಗಳು, 560 ಮದ್ದುಗುಂಡುಗಳು, 12 ಚೈನೀಸ್ ಪಿಸ್ತೂಲುಗಳು (24 ಮ್ಯಾಗಜಿನ್), 224 ಸುತ್ತಿನ ಪಿಸ್ತೂಲಿನ ಮದ್ದುಗುಂಡುಗಳು, 14 ಪಾಕಿಸ್ತಾನಿ ಮತ್ತು ಚೈನೀಸ್ ಗ್ರೆನೇಡ್‌ಗಳು, ಪಾಕಿಸ್ತಾನಿ ಧ್ವಜದ ಚಿತ್ರವಿರುವ 81 ಬಲೂನುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಲ್ ಮನೀಶ್ ಪಂಜ್ ಮಾಹಿತಿ ನೀಡಿದ್ದಾರೆ.
ಕಳೆದ 2 ವಾರಗಳಿಂದಲೂ ಉಗ್ರರು ಭಾರೀ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸತತ 8 ಗಂಟೆಗಳ ಶೋಧದ ಬಳಿಕ ಇವುಗಳು ಪತ್ತೆಯಾಗಿವೆ ಎಂದೂ ಅವರು ತಿಳಿಸಿದ್ದಾರೆ.
“ಕಣಿವೆಯಲ್ಲಿ ಈಗ ಉಗ್ರರ ಸಂಖ್ಯೆ, ಶಸ್ತ್ರಾಸ್ತ್ರಗಳ ಪ್ರಮಾಣ ಹಿಂದೆಂದಿಗಿಂತಲೂ ಕಡಿಮೆಯಿದೆ. ಇದರಿಂದ ಹತಾಶಗೊಂಡ ಪಾಕಿಸ್ತಾನ ಒಂದೋ ಉಗ್ರರನ್ನು ಅಥವಾ ಶಸ್ತ್ರಾಸ್ತ್ರಗಳನ್ನು ಕಾಶ್ಮೀರಕ್ಕೆ ರವಾನಿಸಲು ಪ್ರಯತ್ನಿಸುತ್ತಿದೆ’ ಎಂದು ಮೇಜರ್ ಜನರಲ್ ಅಜಯ್ ಚಾಂದ್‌ಪುರಿಯಾ ಹೇಳಿದ್ದಾರೆ.